bantwalnews.com report
ಶಿಕ್ಷಕರು ಹಾಗೂ ಶಾಲಾಭಿವೃದ್ದಿ ಸಮಿತಿ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಶಾಲೆಗಳು ಹೆಚ್ಚಿನ ಪ್ರಗತಿ ಕಾಣಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಇಲ್ಲಿನ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪೌಢಶಾಲೆಯ ವಾರ್ಷಿಕೋತ್ಸವ ಸಂಭ್ರಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೊಂದು ಮಾದರಿ ಪ್ರೌಢಶಾಲೆ, ಶಾಲೆಯೂ ಉತ್ತಮ ಸ್ಥಿತಿಯಲ್ಲಿದ್ದು ಊರಿನ ಸಹಕಾರವೂ ಸಿಕ್ಕಿದೆ. ಒಂದು ಊರಿನ ಶಾಲೆಯನ್ನು ನೋಡಿದಾಗ ಆ ಊರಿನ ಜನರು ಎಂತವರು ಎನ್ನುವುದು ಅರಿವಾಗುತ್ತದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ವಾಲ್ಟರ್ ಡಿಮೆಲ್ಲೋ ಮಾತನಾಡಿ ಮೌಲ್ಯಯುತ ಶಿಕ್ಷಣ ಶಾಲೆಗಳಿಗೆ ಮಾತ್ರ ಸೀಮಿತವಾಗಿರದೆ ಹೊರ ಸಮಾಜದಲ್ಲೂ ಅದು ಬಳಕೆಯಾಗಬೇಕು. ಮೌಲ್ಯಯುತ ಶಿಕ್ಷಣದೊಂದಿಗೆ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಬಂಟ್ವಾಳ ಯೋಜನಪ್ರಾಧಿಕಾರದ ಮಾಜಿ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಎಸ್. ಶಿರಾಲಿ, ಶೀಲಾ ಕಿಚನ್ ಇಕ್ವಿಪ್‌ಮೆಂಟ್ಸ್, ಪ್ರಶಾಂತ್ ಶೆಟ್ಟಿ, ಶಂಭೂರಿ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಅಧ್ಯಕ್ಷ ಆನಂದ ಸಾಲಿಯಾನ್, ಪತ್ರಕರ್ತ ರಾಜಾ ಬಂಟ್ವಾಳ್, ನಿವೃತ್ತ ಶಿಕ್ಷಕ ನಾಟಿ ಕೃಷ್ಣರಾಜ ಶೆಟ್ಟಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಮಾಣಿ, ದಾಸಕೋಡಿ, ನೀರಪಾದೆ, ಶಂಭೂರು, ಶೇಡಿಗುರಿ , ನರಿಕೊಂಬು, ಪಾಣೆಮಂಗಳೂರು, ಬಿ.ಸಿ.ರೋಡು ಮಾರ್ಗವಾಗಿ ಸರಕಾರಿ ಬಸ್ಸಿನ ಸಂಚಾಲಕ್ಕೆ ಹಸಿರು ನಿಶಾನೆ ತೋರಲಾಯಿತು. ಸರಕಾರ ಕೊಡಮಾಡುವ ಬೈಸಿಕಲ್ಲನ್ನು ವಿತರಿಸಲಾಯಿತು.
Be the first to comment on "ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಶಾಲೆ ಪ್ರಗತಿ"