www.bantwalnews.com ವರದಿ
ಲೊರೆಟ್ಟೊಪದವಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ರೇಮಂಡ್ ಫೆರ್ನಾಂಡೀಸ್ (59) ಎಂಬವರಿಗೆ ಡಿಕ್ಕಿ ಹೊಡೆದು, ಅವರ ಸಾವಿಗೆ ಕಾರಣನಾಗಿ ಪರಾರಿಯಾದ ಮಾರುತಿ ಓಮ್ನಿ ಕಾರು ಮತ್ತು ಆರೋಪಿ ಚಾಲಕನನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಸೋಮವಾರ ಸಂಜೆ ಈ ಘಟನೆ ನಡೆದಿತ್ತು. ಇವರು ಸಂಜೆ ಸುಮಾರು 6.25 ರವೇಳೆಗೆ ರಸ್ತೆ ಬದಿಯಲ್ಲಿ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದ ರೇಮಂಡ್ ಅವರಿಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಧಾವಿಸಿ ಬಂದ ಬಿಳಿ ಬಣ್ಣದ ಮಾರುತಿ ಒಮ್ನಿ ಕಾರು ಡಿಕ್ಕಿ ಹೊಡೆದಿತ್ತು. ಪರಿಣಾಮ ಗಂಬೀರ ಗಾಯಗೊಂಡ ಫೆರ್ನಾಂಡೀಸ್ ಅವರನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ಸಾಗಿಸಿದರಾದರೂ ಅವರು ದಾರಿ ಮಧ್ಯೆ ಕೊನೆಸಿರೆಳೆದಿದ್ದರು. ಘಟನೆ ಬಳಿಕ ಕಾರು ಚಾಲಕ ತನ್ನ ವಾಹನ ನಿಲ್ಲಿಸದೆ ಪರಾರಿಯಾಗಿರುವ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ, ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಎಂಬಲ್ಲಿ ಆರೋಪಿ ಕಾರು ಚಾಲಕ ನವೀನ್ ಪೂಜಾರಿ ಎಂಬಾತನನ್ನು ಬಂಟ್ವಾಳ ಸಂಚಾರಿ ಠಾಣಾ ಪೊಲೀಸ್ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾದರು. ಆತನನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಟ್ವಾಳ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಂತೆ ಪ್ರಕರಣದಲ್ಲಿ ಕಲಂ 279, 304(ಎ) ಐಪಿಸಿ ಜೊತೆಗೆ 134(ಎ) ಮತ್ತು (ಬಿ) ಮೋಟಾರು ವಾಹನ ಕಾಯ್ದೆಯನ್ನು ಕಲಂ 304 ಐಪಿಸಿಯನ್ನಾಗಿ ಪರಿವರ್ತಿಸಿ ತನಿಖೆ ಮುಂದುವರಿಸಲು ನ್ಯಾಯಾಲಯಕ್ಕೆ ವರದಿ ನಿವೇದಿಸಲಾಗಿ, ಅನುಮತಿ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Be the first to comment on "ಹಿಟ್ ಅಂಡ್ ರನ್ ಕೇಸ್: ಆರೋಪಿ ಕಾರು ಚಾಲಕನ ಬಂಧನ"