ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರಿಂದ ಜಿಲ್ಲಾಡಳಿತಕ್ಕೆ ಆಗ್ರಹ
bantwalnews report
ತುಂಬೆ ಹೊಸ ವೆಂಟೆಡ್ ಡ್ಯಾಂ ನಿರ್ಮಾಣದಿಂದ ಸುಮಾರು ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಲಿದ್ದು ಎಂಟು ನೂರಕ್ಕಿಂತಲೂ ಅಧಿಕ ಕುಟುಂಬಗಳು ತೊಂದರೆ ಅನುಭವಿಸಲಿದ್ದು ಜಮೀನು ಕಳೆದುಕೊಳ್ಳುವ ಎಲ್ಲಾ ರೈತರಿಗೆ ಏಕಗಂಟಿನಲ್ಲಿ ನ್ಯಾಯೋಚಿತ ಪರಿಹಾರ ನೀಡುವಂತೆ ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಸಜೀಪಪಮೂಡ ಗ್ರಾಮದ ಅನ್ನಪ್ಪಾಡಿ ಎಂಬಲ್ಲಿ ಹಡಿಲುಗದ್ದೆಯಲ್ಲಿ ತುಳುನಾಡ ಕೃಷಿ ಕ್ರಾಂತಿಗೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಟಿ ನಡೆಸಿದ ಅವರು ಮಂಗಳೂರಿಗೆ ಕುಡಿಯುವ ನೂರು ಪೂರೈಕೆಗಾಗಿ ರೈತರ ಯಾವುದೇ ವಿರೋಧವಿಲ್ಲದೆ ತುಂಬೆ ನೂತನ ವೆಂಟೆಡ್ ಡ್ಯಾಂ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಕೆಲವರನ್ನು ಮಾತ್ರ ವಿಶ್ವಾಸಕ್ಕೆ ಪಡೆದುಕೊಂಡು ಹೆಚ್ಚಿನ ರೈತರನ್ನು ಕತ್ತಲಲ್ಲಿಟ್ಟುಕೊಂಡು ಸರಕಾರ ನೀರು ಸಂಗ್ರಹಿಸಲು ಆರಂಭಿಸಿದೆ. ಪರಿಹಾರ ನೀಡಲು ಹೆಚ್ಚೆಂದರೆ 400 ಕೋಟಿ ರೂಪಾಯಿ ಬೇಕಾಗಬಹುದು. ಇಷ್ಟು ದೊಡ್ಡ ಯೋಜನೆ ನಡೆಸುತ್ತಿರುವಾಗ ಭೂ ಸ್ವಾದೀನ ಪ್ರಕ್ರಿಯೆಗೆಂದು ಹಣ ಮೀಸಲಿಡದಿರುವುದು ವಿಪರ್ಯಾಸ ಎಂದರು.
ಒಂದು ಕಡೆಯಿಂದ ಡ್ಯಾಂ ಕಟ್ಟಿ ಕೃಷಿ ಭೂಮಿ ಮುಳುಗಿಸುವುದು, ಇನ್ನೊಂದು ಕಡೆಯಿಂದ ಕೃಷಿಗೆ ನೀರು ಬಳಸದಂತೆ ಆದೇಶ ಹೊರಡಿಸಿ ಕೃಷಿಯನ್ನು ಒಣಗಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ಮಂಗಳೂರಿಗೆ ಕುಡಿಯುವ ನೀರು ಪೂರೈಕೆಗಾಗಿ ಅಣೆಕಟ್ಟು ಕಟ್ಟಿ ನೀರು ಸಂಗ್ರಹಿಸಲಾಗುತ್ತದೆ. ಆದರೆ ಸಹಸ್ರಾರು ವರ್ಷಗಳಿಂದ ಇದೇ ನದಿ ತೀರದಲ್ಲಿ ಕೃಷಿ ಮಾಡುವವರಿಗೆ ನದಿ ನೀರು ಬಳಸಲು ನಿರ್ಭಂದ ವಿಧಿಸಿರುವುದು ಸಮಂಜವಲ್ಲ. ನದಿ ಪಕ್ಕದ ಜಮೀನು ಹಸಿರಾಗಿದ್ದಾಗ ಮಾತ್ರ ನದಿಯಲ್ಲಿಯೂ ನೀರಿನ ಒರತೆ ಇರುತ್ತದೆ. ಕೃಷಿ ಭೂಮಿ ಬರಡಾಗಿದ್ದರೆ ನದಿಯೂ ಬರಡಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲಾಗುವುದು. ಆ ಬಳಿಕವೂ ತಮ್ಮ ಹಠ ಮುಂದುವರಿಸಿದರೆ ರೈತರೊಂದಿಗೆ ಸೇರಿ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ರೈತ ಸಂಘದ ಮುಖಂಡ ಸುಬ್ರಹ್ಮಣ್ಯ ಭಟ್ ಮಾತನಾಡಿ ದ.ಕ.ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಮುಳಗಡೆಯಾಗುವ ಜಮೀನಿನ ಪಟ್ಟಿಯನ್ನು ಈವರೆಗೆ ಅವರು ನೀಡಿಲ್ಲ. ಮುಳುಗಡೆಯಾಗುವ ಜಮೀನನು ಖುದ್ದು ಭೇಟಿ ಮಾಡುವುದಾಗಿ ಜಿಲ್ಲಾಧಿಕಾರಿ ಹೇಳಿದ್ದರೂ ಈವರೆಗೆ ಸಜೀಪಮುನ್ನೂರಿಗೆ ಬಂದಿಲ್ಲ. ಪರಿಹಾರ ಕೊಟ್ಟ ಬಳಿಕವೇ ನೀರು ಸಂಗ್ರಹಿಸುವುದಾಗಿ ಹೇಳಿಕೊಂಡಿದ್ದರೂ ಇದೀಗ ಕನಿಷ್ಟ ಸೂಚನೆ ನೀಡದೆ ನೀರು ನಿಲ್ಲಿಸಿದ್ದಾರೆ. ಇದರಿಂದಾಗಿ ಬಿ.ಮೂಡ ಗ್ರಾಮದ ತಿಮಪ್ಪ ರೈ ಎಂಬವರ 1 ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ರೈತ ಸಂಘದ ಪ್ರಮುಖರಾದ ಮನೋಹರ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಎನ್.ಕೆ. ಇದಿನಬ್ಬ, ಸುದೇಶ್ ಮಯ್ಯ, ಶರತ್ ಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆ ಮತ್ತಿತರರು ಹಾಜರಿದ್ದರು.
Be the first to comment on "ತುಂಬೆ ಡ್ಯಾಂ ಸಂತ್ರಸ್ತರಿಗೆ ಏಕಗಂಟಿನಲ್ಲಿ ನ್ಯಾಯೋಚಿತ ಪರಿಹಾರ"