ಅಳಿಕೆ ಗ್ರಾಮದ ಜೆಡ್ಡು ಪದ್ಮಗಿರಿಯಲ್ಲಿ ನಿರ್ಮಾಣವಾಗಲಿರುವ ಶ್ರೀ ಆದಿಧನ್ವಂತರಿ ಕ್ಷೇತ್ರದ ಶ್ರೀ ಧನ್ವಂತರಿ ದೇವರ ನಿಧಿಕಲಶದ ಬೃಹತ್ ಮೆರವಣಿಗೆ ಕಾರ್ಯಕ್ರಮ ಡಿ.20 ಹಾಗೂ 21 ರಂದು ನಡೆದು, ಡಿ.22ರಂದು ಶ್ರೀ ಧನ್ವಂತರಿ ದೇವರ ಆಧಾರಶಿಲಾ ನಿಧಿಕಲಶ ಸ್ಥಾಪನಾದಿ ಕಾರ್ಯಗಳು ಪ್ರಧಾನ ಆಚಾರ್ಯ ವೇದಮೂರ್ತಿ ಅಮೈ ಸುಬ್ಬಣ್ಣ ಭಟ್ ಹಾಗೂ ತಂತ್ರಿಗಳಾದ ಶಿವರಾಮ ಭಟ್ ಪೆರಡಾಲ ನೇತೃತ್ವದಲ್ಲಿ ನಡೆಯಲಿದೆ.
ಡಿ.22ರಂದು 11 ಗಂಟೆಗೆ ಸಭಾಕಾರ್ಯಕ್ರಮ ನಡೆಯಲಿದ್ದು, ಮಂಗಳೂರು ಶ್ರೀ ರಾಮಕೃಷ್ಣಾಶ್ರಮದ ಶ್ರೀ ಜಿತಕಾಮಾನಂದಜೀ ಸ್ವಾಮೀಜಿ ಉಪಸ್ಥಿತರಿರಲಿದ್ದು, ಬೆಂಗಳೂರಿನ ಖ್ಯಾತ ವೇದವಿದ್ವಾಂಸ ವಸಂತರಾಮ ವಾದ್ಯರ್ ಸಭೆಯನ್ನು ಉದ್ಘಾಟಿಸಲಿರುವರು. ಅರಣ್ಯ ಸಚಿವ ಬಿ ರಮಾನಾಥ ರೈ ಸಭಾಧ್ಯಕ್ಷತೆ ವಹಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಶಕುಂತಳಾ ಟಿ ಶೆಟ್ಟಿ, ವಿಧಾನಪರಿಷತ್ತು ಸದಸ್ಯ ಕ್ಯಾ. ಗಣೇಶ ಕಾರ್ಣಿಕ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್ ಮತ್ತಿತರರು ಭಾಗವಹಿಸಲಿದ್ದಾರೆ.
ಶ್ರೀ ಧನ್ವಂತರಿ ದೇವರ ನಿಧಿಕಲಶ ಮೆರವಣಿಗೆ ಏಳು ಗ್ರಾಮಗಳ 41 ಕ್ಷೇತ್ರಗಳಲ್ಲಿ ಸಾಗಲಿದ್ದು, ಸರ್ವಧರ್ಮಸಮನ್ವತೆಯಿಂದ ಮಸೀದಿ, ಚರ್ಚ್, ಜೈನ ಬಸದಿ, ದೇವಾಲಯಗಳಲ್ಲಿ ಸಾಗಲಿದೆ.ಡಿ.20ರಂದು ಬೆಳಗ್ಗೆ 7ರಿಂದ ಅಳಿಕೆ ನೆಕ್ಕಿತಪುಣಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ನಿಧಿಕಲಶ ಮೆರವಣಿಗೆ ಆರಂಭಗೊಂಡು ವಿಟ್ಲ ಶ್ರೀ ಮಹತೋಬಾರ ಪಂಚಲಿಂಗೇಶ್ವರ ಕ್ಷೇತ್ರ ದಲ್ಲಿ ಶ್ರೀ ಜನಾರ್ದನ ವರ್ಮ ಅರಸರಿಂದ, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಶ್ರೀ ಮೋಹನದಾಸ ಸ್ವಾಮೀಜಿಯರು ನಿಧಿಕಲಶ ಪೂಜೆ, ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದಲ್ಲಿ ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರಿಂದ, ಕಣಿಯೂರು ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಶ್ರೀ ಮಹಾಬಲ ಸ್ವಾಮೀಜಿಯವರಿಂದ ನಿಧಿಕಲಶ ಪೂಜೆ ನಡೆಯಲಿದೆ.
ಡಿ.21ರಂದು ಬೆಳಗ್ಗೆ 8ರಿಂದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಂದ, ಕನ್ಯಾನ ಭಾರತ ಸೇವಾಶ್ರಮದಲ್ಲಿ ಈಶ್ವರ ಭಟ್ ಅವರಿಂದ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಯು ಗಂಗಾಧರ ಭಟ್ ಇವರಿಂದ, ಆಲಂಗಾರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಪದ್ಮಿನಿ ರಾಮ ಭಟ್ ಇವರಿಂದ ನಿಧಿಕಲಶ ಪೂಜೆ ನೆರವೇರಿಸಿಕೊಂಡು ದೇಲಂತಬೆಟ್ಟು ಸಂತ ಪೌಲರ ಇಗರ್ಜಿ, ಬೈರಿಕಟ್ಟೆ ಜಲಾಲಿಯಾ ಜುಮ್ಮಾ ಮಸೀದಿ ಮೂಲಕ ಸಾಗಿ ಪದ್ಮಗಿರಿ ಕ್ಷೇತ್ರಕ್ಕೆ ಬರಲಿದೆ ಎಂದು ಜೆಡ್ಡು ಆಯುರ್ವೇದ ಸೇವಾಟ್ರಸ್ಟಿನ ಕಾರ್ಯದರ್ಶಿ ಡಾ. ಜೆಡ್ಡು ಗಣಪತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಜೆಡ್ಡು ಪದ್ಮಗಿರಿಯಲ್ಲಿ 22ರಂದು ಧನ್ವಂತರಿ ದೇವರ ಆಧಾರಶಿಲಾ ನಿಧಿಕಲಶ ಸ್ಥಾಪನೆ"