ಬಂಟ್ವಾಳ: ಲೈಂಗಿಕ ಹಗರಣದಲ್ಲಿ ಸಿಲುಕಿ ಸಂಪುಟದಿಂದ ವಜಾಗೊಂಡಿರುವ ಮಾಜಿ ಸಚಿವ ಎಚ್.ವೈ.ಮೇಟಿ ಅವರನ್ನು ಶಾಸಕ ಸ್ಥಾನದಿಂದಲೇ ವಜಾಗೊಳಿಸಲು ಬಿಜೆಪಿ ಒತ್ತಾಯಿಸಿದೆ.
ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್ ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಟಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮೇಟಿ ಪ್ರಕರಣದ ಬಗ್ಗೆ ಅರಿವಿದ್ದರೂ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಯವರು ಅವರನ್ನು ರಕ್ಷಿಸಲು ಯತ್ನಿಸಿರುವುದು ಅಕ್ಷಮ್ಯವಾಗಿದೆ. ತಿಂಗಳ ಮೊದಲೆ ಈ ಬಗ್ಗೆ ಮಾಹಿತಿ ಇದ್ದರೂ ಮೇಟಿ ವಿರುದ್ಧ ಕ್ರಮ ಕೈಗೊಳ್ಳದೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ, ಇದೀಗ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ನಿಟ್ಟಿನಲ್ಲಿ ಸಿಐಡಿ ತನಿಖೆಗೆ ಒಪ್ಪಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಸಚಿವ ತನ್ವೀರ್ ಸೇಠ್ ಅವರು ವೇದಿಕೆಯಲ್ಲಿ ಕುಳಿತು ನಗ್ನ ಚಿತ್ರ ವೀಕ್ಷಿಸಿದ ಪ್ರಕರಣವನ್ನು ಕೂಡಾ ಮುಚ್ಚಿಹಾಕಲಾಗಿದೆ. ಅದೇ ಮಾದರಿಯಲ್ಲಿ ಮೇಟಿ ಪ್ರಕರಣವನ್ನು ಮುಚ್ಚಿಹಾಕಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ ಎಂದ ಅವರು, ಈ ಘಟನೆ ಸುಸಂಸ್ಕೃತ ಕರ್ನಾಟಕ ರಾಜ್ಯದ ಪಾಲಿಗೆ ಕಪ್ಪು ಚುಕ್ಕೆಯಾಗಿದೆ ಎಂದರು.
ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ 500, 1000 ರೂ. ನೋಟನ್ನು ಅಮಾನ್ಯಗೊಳಿಸಿ ಪ್ರಧಾನಿಯವರು ದಿಟ್ಟತನವನ್ನು ತೋರಿದ ಬೆನ್ನಲ್ಲೇ ಮುಖ್ಯಮಂತ್ರಿ ಹಾಗೂ ಸಚಿವರೊಬ್ಬರ ಆಪ್ತರಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಎಂಬವರ ಬಳಿ ಕೋಟ್ಯಾಂತರ ರೂಪಾಯಿ ಕಪ್ಪು ಹಣ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೆ ಮೇಟಿ ಅವರ ರಾಸಲೀಲೆ ಪ್ರಸಂಗ ಬಯಲಿಗೆ ಬಂದಿದ್ದು, ಮೋದಿಯವರ ಮೇಲೆ ಭ್ರಷ್ಟಾಚಾರದ ಆಪಾದನೆ ಮಾಡುತ್ತಿರುವ ಕಾಂಗ್ರೆಸ್‌ನ ಯುವ ನಾಯಕ ರಾಹುಲ್ ಗಾಂಧಿಯವರಿಗೆ ಕರ್ನಾಟಕದಲ್ಲಿ ಅವರದ್ದೇ ಪಕ್ಷದ ಆಡಳಿತದಲ್ಲಿ ಆಗುತ್ತಿರುವ ಭೂಕಂಪದ ಬಗ್ಗೆ ಅರಿವಿಗೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.
ಲೈಗಿಂಕ ಹಗರಣದಲ್ಲಿ ಭಾಗಿಯಾದ ಇನ್ನಿಬ್ಬರು ಸಚಿವರ ಸಹಿತ ಮೂವರು ಶಾಸಕರ ಹೆಸರು ಬಹಿರಂಗ ಪಡಿಸುವ ಮುನ್ನ ಅವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ರಾಜ್ಯ ಇನ್ನಷ್ಟು ಮುಜುಗರಕ್ಕೆ ಒಳಗಾಗಬೆಕಾದಿತು ಎಂದು ಹೇಳಿದ ಅವರು ಆರ್‌ಟಿಐ ಕಾರ್ಯಕರ್ತ ರಾಜಶೇಖರ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಬಿಜೆಪಿ ಸಮಿತಿಯ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮ್‌ದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಪಕ್ಷ ಪ್ರಮುಖರಾದ ರಾಜೇಶ್ ನಾಯ್ಕ್ ಉಳೇಪಾಡಿಗುತ್ತು, ಜಿ.ಆನಂದ, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಪುರುಷೋತ್ತಮ, ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಮೇಟಿ ಶಾಸಕತ್ವದಿಂದಲೇ ವಜಾಗೊಳಿಸಲು ಬಿಜೆಪಿ ಒತ್ತಾಯ"