ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮ್ಟೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆ.ಸಿ.ರೋಡ್‌ನಿಂದ ಕೇಶವನಗರ ದವರೆಗೆ ಸುಮಾರು 5 ಕಿ.ಮೀ ರಸ್ತೆ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಇದನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಸಾರ್ವಜನಿಕರು, ಗೋಳ್ತಮಜಲು ಗ್ರಾ.ಪಂ. ಸದಸ್ಯರು, ರಿಕ್ಷಾ ಚಾಲಕರು, ಮಾಲಕರು ಸೇರಿ ರಸ್ತೆ ತಡೆ ಮಾಡಿದರು. ಈ ರಸ್ತೆ ಡಾಮರೀಕರಣ ಕಾಣದೆ ಸುಮಾರು 10 ವರ್ಷಗಳು ಕಳೆದಿವೆ. ರಸ್ತೆಯುದ್ದಕ್ಕೂ ಗೊಂಡಿಗಳು ಬಿಟ್ಟರೆ, ಡಾಮರು ಇಲ್ಲವೇ ಇಲ್ಲ. ಜಿ.ಪಂ. ಗೆ ಸೇರಿದ ರಸ್ತೆಯನ್ನು ಡಾಮರೀಕರಣ ಮಾಡುವಂತೆ ಸ್ಥಳೀಯ ಶಾಸಕ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಯಾವುದೇ ಸ್ಪಂದನೆ ಸಿಕ್ಕದ ಹಿನ್ನಲೆಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಈ ರಸ್ತೆಗೆ ಡಾಮರೀಕರಣಮತ್ತು ಚರಂಡಿ ವ್ಯವಸ್ಥೆ ಮಾಡಲು ದೊಡ್ಡ ಮೊತ್ತದ ಅನುದಾನದ ಅವಶ್ಯಕತೆ ಇರುವುದರಿಂದ ಸ್ಥಳೀಯ ಗ್ರಾ.ಪಂ. ಅನುದಾನದಿಂದ ಕಾಮಾಗಾರಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಡಾಮರೀಕರಣ ಮಾಡಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಸ್ಥಳೀಯ ಶಾಸಕರು ತಾರತಮ್ಯ ಮಾಡದೆ, ಕಾಮಗಾರಿ ನಡೆಸಲು ಶೀಘ್ರ ಅನುದಾನ ಬಿಡುಗಡೆ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರು ಪ್ರತಿಭಟನೆ ಹಂತಕ್ಕೆ ಬರುವ ವ್ಯವಸ್ಥೆ ಸರಿಯಲ್ಲ, ಸಾರ್ವಜನಿಕರ ಮೂಲಭೂತ ಸೌಕರ್‍ಯವನ್ನು ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ ಎಂದು ಹೇಳಿದರು. ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ, ಸದಸ್ಯ ಗೋಪಾಲ ಪೂಜಾರಿ, ಮುಸ್ತಾಫ, ದಿನೇಶ್ ಅಮ್ಟೂರು, ಶೇಖರ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ರಸ್ತೆ ದುರಸ್ತಿ ಒತ್ತಾಯಿಸಿ ಪ್ರತಿಭಟನೆ"