ಬಂಟ್ವಾಳ: ತುಂಬೆ ಎರಡನೇ ಅಣೆಕಟ್ಟೆ ನಿರ್ಮಾಣದಿಂದ ಮುಳುಗಡೆ ಭೀತಿ ಎದುರಿಸುತ್ತಿರುವ ಪ್ರದೇಶ ಸರ್ವೆ ಮಾಡುವಲ್ಲಿ ಸ್ಥಳೀಯ ಕಳ್ಳಿಗೆ ಗ್ರಾಮದ ಸಂತ್ರಸ್ತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಡಿ. 4ರಂದು ಸಂಜೆ ಕಳಿಗ ಗ್ರಾಮದ ಚಂದ್ರಿಗೆ ಎಂಬಲ್ಲಿ ತುರ್ತು ಸಭೆ ನಡೆಯಿತು.
ರೈತ ಸಂಘ ಮತ್ತು ತುಂಬೆ ಅಣೆಕಟ್ಟೆ ಸಂತ್ರಸ್ತರ ಹೋರಾಟ ಸಮಿತಿ ಮುಖಂಡರು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.
ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ಮಾತನಾಡಿ, ಈಗಾಗಲೇ ನಿರ್ಮಾಣಗೊಂಡ ಏಳು ಮೀಟರ್ ಎತ್ತರದ ತುಂಬೆ ಎರಡನೇ ಅಣೆಕಟ್ಟೆಯಲ್ಲಿ ಕೆಲವೊಮ್ಮೆ ಐದು ಮೀಟರ್ ಮಾತ್ರ ನೀರು ಸಂಗ್ರಹಿಸುವುದು ಎಂದು ಸುಳ್ಳು ಹೇಳಿಕೆ ನೀಡಲಾಗುತ್ತಿದೆ.
ಕಳ್ಳಿಗೆ ಗ್ರಾಮದಲ್ಲಿ ಹಲವಾರು ಎಕರೆ ಕೃಷಿ ಜಮೀನು ಮುಳುಗಡೆ ಭೀತಿ ಎದುರಿಸುತ್ತಿದ್ದರೂ ಕೇವಲ ಎಂಟು ಎಕರೆ ಜಮೀನು ಮಾತ್ರ ಮುಳುಗಡೆಯಾಗುತ್ತಿದೆ ಎಂದು ಜಿಲ್ಲಾಡಳಿತವು ಕೃಷಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಇಲ್ಲಿನ ಕೃಷಿ ಜಮೀನು ಸರ್ವೆ ನಡೆಸುವ ಸಂದರ್ಭ ಸಂತ್ರಸ್ತರಿಗೆ ಸ್ಪಷ್ಟ ಮತ್ತು ಸೂಕ್ತ ಮಾಹಿತಿ ನೀಡದೆ ಕತ್ತಲೆಯಲ್ಲಿ ಇರಿಸಿದ್ದಾರೆ. ಇದೇ ಪ್ರವೃತ್ತಿ ಮುಂದುವರಿದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ಶರತ್ ಕುಮಾರ್, ಸತೀಶ ಗೌಡ, ಸುದೇಶ ಮಯ್ಯ, ತುಂಬೆ ಅಣೆಕಟ್ಟೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎನ್.ಕೆ.ಇದಿನಬ್ಬ, ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪುರುಷ ಎನ್.ಸಾಲ್ಯಾನ್, ಸದಸ್ಯ ಮಹೇಶ ಚಂದ್ರಿಗೆ, ಮನೋಹರ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಮುಳುಗಡೆ ಭೂಮಿ ಕಳ್ಳಿಗೆ ಗ್ರಾಮದ ಸಂತ್ರಸ್ತರ ಕಡೆಗಣನೆ"