- ವಿಶ್ವಕರ್ಮ ಯುವಕ ಸಂಘ ಆಕ್ರೋಶ, ಪ್ರತಿಭಟನೆ ಎಚ್ಚರಿಕೆ
ಬಂಟ್ವಾಳ: ತಾಲ್ಲೂಕಿನ ರಾಯಿ ಪರಿಸರದ ಎರಡು ದೇವಸ್ಥಾನಗಳಲ್ಲಿ ಡಿ.5ರಂದು ನಡೆಯಲಿರುವ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಪ್ರತೀ ವರ್ಷದಂತೆ ಬೆಳ್ಳಿ ಹರಕೆ ಮಾರಾಟ ಮಾಡವುದಕ್ಕೆ ದಿಢೀರ್ ನಿರ್ಬಂಧ ಹೇರಿರುವ ಇಲ್ಲಿನ ಪ್ರಭಾರ ಆಡಳಿತಾಧಿಕಾರಿ, ರಾಯಿ ಗ್ರಾಮ ಪಂಚಾಯಿತಿ ಪಿಡಿಒ ವೆಂಕಟೇಶ್ ವಿರುದ್ಧ ಸ್ಥಳೀಯ ಸಿದ್ಧಕಟ್ಟೆ ವಿಶ್ವಕರ್ಮ ಯುವಕ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಇಲ್ಲಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಈ ಬಾರಿ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಬೆಳ್ಳಿ ಹರಕೆ ಮಾರಾಟ ಮಾಡಲು ಹೊರಗಿನವರಿಗೆ ಅವಕಾಶವಿಲ್ಲ. ಈ ದೇವಸ್ಥಾನದ ವತಿಯಿಂದಲೇ ಮಾರಾಟ ಮಾಡಲಾಗುವುದು ಎಂದು ಪಿಡಿಒ ವೆಂಕಟೇಶ ಅವರು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿರುವುದು ಸರಿಯಲ್ಲ. ಈ ಸಾಮಾಗ್ರಿಗಳನ್ನು ವಿಶ್ವಕರ್ಮ ಸಮುದಾಯ ಮಾತ್ರ ಮಾರಾಟ ಮಾಡುತ್ತಿದ್ದು, ಇದೀಗ ಈ ನಿರ್ಬಂಧದಿಂದ ವಿಶ್ವಕರ್ಮ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಇದನ್ನು ಕೂಡಲೇ ಸರಿಪಡಿಸದಿದ್ದಲ್ಲಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುವುದಾಗಿ ಸಂಘದ ಅಧ್ಯಕ್ಷ ಯೋಗೀಶ್ ಆಚಾರ್ಯ ಎಚ್ಚರಿಸಿದ್ದಾರೆ.
ಈ ಬಗ್ಗೆ ಕೂಡಲೇ ಲೋಪ ಸರಿಪಡಿಸಿ ಬೆಳ್ಳಿ ಹರಕೆ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಸಂಘದ ನಿಯೋಗವು ಪ್ರಭಾರ ಆಡಳಿತಾಧಿಕಾರಿ ಸಹಿತ ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಸಲ್ಲಿಸಿದೆ. ಈ ನಿಯೋಗದಲ್ಲಿ ಸಂಘದ ಕಾರ್‍ಯದರ್ಶಿ ಹರೀಶ್ ಆಚಾರ್ಯ, ಸ್ಥಾಪಕಾಧ್ಯಕ್ಷ ಅಶೋಕ್ ಆಚಾರ್‍ಯ ಸಿದ್ದಕಟ್ಟೆ ಮತ್ತಿತರರು ಇದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಬೆಳ್ಳಿ ಹರಕೆ ಮಾರಾಟಕ್ಕೆ ಪಿಡಿಒ ಅಡ್ಡಿ"