ಬಂಟ್ವಾಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನವರಿ 2017ರ 11, 12ರಂದು ಬಂಟ್ವಾಳದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.
ಸೋಮವಾರ ಬಂಟ್ವಾಳ ಎಸ್ ಡಿಎಂ ಕಲ್ಯಾಣಮಂಟಪದಲ್ಲಿ ನಡೆದ ತಾಲೂಕು ಪ್ರಗತಿಬಂಧು, ಸ್ವಸಹಾಯ ಸಂಘಗಳ ನೂತನ ಕೇಂದ್ರ ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ ಮೇಳದ ಅಧ್ಯಕ್ಷ ರೊನಾಲ್ಡ್ ಡಿಸೋಜ ಅಮ್ಟಾಡಿ ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಯೋಜನೆ ಉಡುಪಿ ಪ್ರಾದೇಶಿಕ ನಿರ್ದೇಶಕ ಮಹಾವೀರ ಆಜ್ರಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರಿಗೆ ಒಟ್ಟು 5.65 ಕೋಟಿ ರೂ. ಲಾಭಾಂಶ ವಿತರಿಸಲಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಘಟಕದಲ್ಲಿ 3384 ಪ್ರಗತಿಬಂಧು ಸ್ವಸಹಾಯ ಸಂಘದ ಪಾಲುದಾರರಿದ್ದು, 544.02 ಕೋಟಿ ಮೊತ್ತದ ಆರ್ಥಿಕ ವ್ಯವಹಾರ ನಡೆಸಿ 19.28 ಕೋಟಿ ರೂ ಉಳಿತಾಯ ಮಾಡಿದ್ದಾರೆ ಎಂದು ಹೇಳಿದರು.
ತಾಲೂಕಿನಲ್ಲಿ ಯೋಜನೆ ಆರಂಭಗೊಂಡ 12 ವರ್ಷಗಳಲ್ಲಿ ಸಾರ್ಥಕ ಸೇವೆ ನೀಡುವುದರ ಜೊತೆಗೆ ಉತ್ತಮ ಸಾಧನೆ ಮಾಡಿದೆ ಎಂದ ಅವರು, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶಯದಂತೆ ಸಣ್ಣ ರೈತರು, ದುರ್ಬಲ ವರ್ಗದವರ ಅಭಿವೃದ್ಧಿಗೆ ಅವಕಾಶ ಕಲ್ಪಿಸಿ, ಕುಟುಂಬಗಳು ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ಪೂರಕ ಕಾರ್ಯಕ್ರಮಗಳನ್ನು ಯೋಜನೆ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದರು.
ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ ಕಾರಂತ ಮಾತನಾಡಿ, ಸ್ವಾರ್ಥ, ಫಲಾಪೇಕ್ಷೆ ಇಲ್ಲದೆ ಸಾರ್ಥಕ ಸೇವೆ ನಡೆಸುವುದರ ಮೂಲಕ ಮಾದರಿಯಾಗಬೇಕು. ಪ್ರತಿಯೊಬ್ಬರೂ ಸ್ವಾವಲಂಬಿಯಾಗುವುದರ ಜೊತೆಗೆ ಪರರಿಗೆ ಸಹಾಯ ಮಾಡುವಷ್ಟು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಇದೇ ವೇಳೆ ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಕೃಷಿಯುತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ ಅಮ್ಟಾಡಿ ಮಾತನಾಡಿ, ಯೋಜನೆ ವತಿಯಿಂದ ಜನವರಿ 2017ರ 11, 12ರಂದು ಬಂಟ್ವಾಳದಲ್ಲಿ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು, ಎಲ್ಲರ ಸಹಕಾರ ಕೋರಿದರು.
ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ತಹಸೀಲ್ದಾರ್ ಪುರಂದರ ಹೆಗ್ಡೆ, ಯೋಜನಾಧಿಕಾರಿ ಸುನೀತಾ ನಾಯಕ್, ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ, ಜನಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಎ.ರುಕ್ಮಯ ಪೂಜಾರಿ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ಚಂದಪ್ಪ ಮೂಲ್ಯ ಅನಿಸಿಕೆ ವ್ಯಕ್ತಪಡಿಸಿದರು. ನೂತನ ಅಧ್ಯಕ್ಷ ಸದಾನಂದ ಗೌಡ ಮತ್ತು ತಂಡದ ಪದಗ್ರಹಣ ನಡೆಯಿತು.
ತಾಲೂಕು ಮೇಲ್ವಿಚಾರಕಿ ನಳಿನಾಕ್ಷಿ ಸ್ವಾಗತಿಸಿದರು. ತಾಲೂಕು ಕೃಷಿ ಅಧಿಕಾರಿ ನಾರಾಯಣ ವಂದಿಸಿದರು. ಜನಾರ್ದನ ಹಾಗೂ ಜಯಂತಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಜನವರಿ 11, 12ಕ್ಕೆ ಬಂಟ್ವಾಳದಲ್ಲಿ ಕೃಷಿ ಮೇಳ"