ಈ ಬಾರಿ ಆಳ್ವಾಸ್ ನುಡಿಸಿರಿಯ ಆವರಣದಲ್ಲಿ ಕಾಣಿಸಿಕೊಂಡ ಕಲ್ಲಡ್ಕದ ಗೊಂಬೆಗಳು ನೋಡುಗರಿಗೆ ಸಂಭ್ರಮ .
ಆಳ್ವಾಸ್ ನುಡಿಸಿರಿಯ ಮೆರವಣಿಗೆಯಿಂದ ತೊಡಗಿ, ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ವಿಶೇಷ ಆಕರ್ಷಣೆಯಾಗಿ ಮೆರುಗು ನೀಡುತ್ತಾ ಬಂದಿರುವ ಕಲ್ಲಡ್ಕದ ಶಿಲ್ಪಾಗೊಂಬೆ ಬಳಗದ ಗೊಂಬೆಗಳು ಈ ಬಾರಿಯ ನುಡಿಸಿರಿಯಲ್ಲಿ ಸೆಲ್ಫೀ ವಿದ್ ಗೊಂಬೆ ಎನ್ನುವ ಹಿರಿಮೆಯನ್ನು ಪಡೆದುಕೊಂಡಿದೆ. ಆವರಣದ ಅಲ್ಲಲ್ಲಿ ತಿರುಗಾಡುತ್ತಿದ್ದ ಕಲ್ಲಡ್ಕದ ಗೊಂಬೆಗಳು ಕನ್ನಡಾಭಿಮಾನಿಗಳಿಗೆ ವಿಶೇಷ ಖುಷಿಕೊಟ್ಟಿದೆ ಎನ್ನುವುದಕ್ಕೆ ಗೊಂಬೆಗಳ ಜೊತೆ ಸೆಲ್ಫೀ ಫೊಟೋ ಕ್ಲಿಕ್ಕಿಸುತ್ತಿದ್ದ ದೃಶ್ಯಗಳೇ ಸಾಕ್ಷಿ.
ಕಳೆದ ವರ್ಷ ನಾಲ್ಕೈದು ಗೊಂಬೆಗಳಷ್ಟೇ ಕ್ಯಾಂಪಸ್ ನಲ್ಲಿತ್ತು, ಆ ಗೊಂಬೆಗಳ ಬಗ್ಗೆ ಕನ್ನಡಾಭಿಮಾನಿಗಳಿಂದ ವ್ಯಕ್ತವಾದ ಸಂತಸಕ್ಕೆ ಪ್ರತಿಕ್ರಿಯೆಯಾಗಿ ಡಾ.ಆಳ್ವರು ಈ ಬಾರಿ ಹತ್ತಕ್ಕೂ ಅಧಿಕ ಕಲ್ಲಡ್ಕದ ಗೊಂಬೆಗಳನ್ನು ವ್ಯವಸ್ಥೆಗೊಳಿಸಿದ್ದಾರೆ.
ನುಡಿಸಿರಿಯ ಪ್ರವೇಶದ್ವಾರದಿಂದ ತೊಡಗಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಗೋರಿಲ್ಲ, ಪಂಜಾಬಿ ಗೊಂಬೆ, ಹಂಸ ಜೋಕರ್, ಯಕ್ಷಗಾನ ಸ್ತ್ರೀವೇಷ, ಹತ್ತಿ ತಲೆಯ ರಾವಣ, ಅಜ್ಜ ಅಜ್ಜಿ ಗೊಂಬೆ, ಕುಳ್ಳ ಗೊಂಬೆ ಹಾಗೂ ಜೋಕರ್ ಗೊಂಬೆಗಳು ನುಡಿಸಿರಿಯ ಆವರಣ ಸುತ್ತುವ ಕನ್ನಡಾಭಿಮಾನಿಗಳ ಆಯಾಸ ಕಳೆಯುತ್ತಿದೆ. ನಿತಿನ್ ಕಲ್ಲಡ್ಕ ಗೊಂಬೆಗಳ ನಿರ್ವಹಣೆಯ ಉಸ್ತುವಾರಿ ವಹಿಸಿದ್ದಾರೆ. ಗೊಂಬೆಯ ರೂಪ, ಚಲನವಲನಕ್ಕೆ ಮನಸೋತ ಸಾವಿರಾರು ಮಂದಿ ಗೊಂಬೆಗಳ ಜೊತೆಗೆ ಸೆಲ್ಫೀ ಫೊಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂತು.
ಡಾ.ಎಂ.ಮೋಹನ ಆಳ್ವರು ಉತ್ತಮ ಕಲಾಪೋಷಕರು. ಈ ನುಡಿಸಿರಿ ಯಿಂದಾಗಿ ಅದೆಷ್ಟೋ ಕಲಾವಿದರಿಗೆ ಅನುಕೂಲವಾಗಿದೆ. ಕಲ್ಲಡ್ಕ ಶಿಲ್ಪಾಗೊಂಬೆ ಬಳಗವನ್ನೂ ಡಾ.ಆಳ್ವರು ಬೆಂಬಲಿಸುತ್ತಲೇ ಬಂದಿದ್ದಾರೆ. ಅವರ ಅಪೇಕ್ಷೆಯಂತೆ ಈ ಬಾರಿ ಹತ್ತಕ್ಕೂ ಅಧಿಕ ಗೊಂಬೆಗಳು ನುಡಿಸಿರಿಗೆ ಬಂದ ಕನ್ನಡಾಭಿಮಾನಿಗಳ ಜೊತೆ ಬೆರೆತಿದೆ ಎಂದು ಶಿಲ್ಪಾಗೊಂಬೆ ಬಳಗದ ಮಾಲಕ ರಮೇಶ್ ಕಲ್ಲಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
Be the first to comment on "ಆಳ್ವಾಸ್ ನಲ್ಲಿ ಮಿಂಚಿದ ಕಲ್ಲಡ್ಕದ ಗೊಂಬೆಗಳು"