ಒಕ್ಕೆತ್ತೂರು ನದಿಗೆ ಸೇರುವ ತೊರೆಗಳಗಳಲ್ಲಿ ನೀರಿನ ಹರಿವು ಉತ್ತಮವಾಗಿದ್ದು, ಸದ್ಯ ಹರಿದು ಸಮುದ್ರ ಸೇರುತ್ತಿದೆ. ಇದಕ್ಕೆ ಮರಳಿನ ಅಣೆಕಟ್ಟು ನಿರ್ಮಿಸಿ ನೀರು ತಡೆಹಿಡಿಯುವುದರಿಂದ ಸಾಕಷ್ಟು ನೀರು ಲಭ್ಯವಾಗಲಿದೆ. ವಿದ್ಯಾರ್ಥಿಗಳ ಜತೆಗೆ ಊರಿನ ಉತ್ಸಾಹಿಗಳ ಸಹಕಾರದಲ್ಲಿ ಸುಮಾರು 8 ರಿಂದ 10 ಅಡಿ ಎತ್ತರದಲ್ಲಿ ಅಣೆಕಟ್ಟು ನಿರ್ಮಿಸಲು ಮುಂದಾಗಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಅಣಕಟ್ಟು ನಿರ್ಮಿಸುವ ಉದ್ದೇಶವನ್ನು ವಿಟ್ಲ ಪಪಂ ಹೊಂದಿದೆ.
- ಕುಡಿಯುವ ನೀರಿಗಾಗಿ ತೊರೆಗೆ ಅಣೆಕಟ್ಟು ನಿರ್ಮಿಸಲು ಮುಂದಾದ ಪಪಂ
ವಿಟ್ಲ: ಒಂದೆಡೆ ಅಂತರ್ಜಲ ಮಟ್ಟ ಕುಸಿತ, ಇನ್ನೊಂದೆಡೆ ನೀರಿಗಾಗಿ ಈಗಲೇ ಪರದಾಟ ಆರಂಭದ ಮುನ್ಸೂಚನೆ.
ಇಂಥ ಸನ್ನಿವೇಶದಲ್ಲೇ ವಿಟ್ಲ ಪಟ್ಟಣ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ಇರುವ ತೊರೆ ನದಿಗೆ ಅಣೆಕಟ್ಟು ನಿರ್ಮಿಸುವ ಯೋಜನೆ ಹಾಕಿಕೊಂಡಿದೆ.
ಇದಕ್ಕೆ ವಿಟ್ಲ ವಿಠಲ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಾಥ್ ನೀಡಿದೆ. ಇಂತಹ ಕಾರ್ಯದಿಂದ ವಿಟ್ಲ ಪೇಟೆಯ ಭಾಗದಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆಯನ್ನು ನಿವಾರಿಸಬಹುದು ಎಂಬ ನಂಬಿಕೆ ಪಪಂನದ್ದು.
ಕಳೆದ ಬೇಸಿಗೆಯಲ್ಲಿ ವಿಟ್ಲ ಪೇಟೆ ಭಾಗಕ್ಕೆ ನೀರಿನ ಅಭಾವ ಉಂಟಾಗಿ ಟ್ಯಾಂಕರ್ ಮೂಲಕ ನೀರು ಪೂರೈಗೆ ಲಕ್ಷಾಂತರ ರೂಪಾಯಿಯನ್ನು ಪಂಚಾಯಿತಿ ಆಡಳಿತ ವ್ಯಯಿಸಿದೆ. ಇದರಿಂದ ಎಚ್ಚೆತ ಆಡಳಿತ ಕೊಳವೆ ಬಾವಿಗಳಿಂದ ನದಿ – ತೊರೆಗಳ ನೀರಿಗೆ ಆದ್ಯತೆ ನೀಡುವ ಜತೆಗೆ ಹಳೆಯ ಮದಕ – ಕೆರೆ – ಬಾವಿಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಹಾಕಿಕೊಂಡಿತು.
ಸುಮಾರು 28 ನೀರಿನ ಟ್ಯಾಂಕ್ ಇದ್ದು, ಇದಕ್ಕೆ ಕೊಳವೆ ಭಾವಿ ಹಾಗೂ ನದಿಯ ಬಾವಿಗಳಿಂದ ನೀರು ತುಂಬಿಸಿ ವಿತರಣೆ ಮಾಡುವ ಕಾರ್ಯವಾಗುತ್ತಿದೆ. ವಿಟ್ಲದ ವನಭೋಜನ, ಕೂಟೇಲು, ಒಕ್ಕೆತ್ತೂರು, ಸಿ.ಪಿ.ಸಿ.ಆರ್.ಐ, ಚಂದಪ್ಪಾಡಿ(ಕಲ್ಲಕಟ್ಟ), ದೇವಸ್ಯ, ಕಾಯಾರ್ಮಾರ್ ಭಾಗದಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ. ಇದರಿಂದ ಭೂಮಿಯಲ್ಲಿ ತಗ್ಗಿದ ಅಂತರ್ಜಲದ ಮಟ್ಟವನ್ನು ಮೇಲೇರಿಸಬಹುದೆಂಬುದು ತಜ್ಞರ ಅಭಿಪ್ರಾಯ.
ಪಂಚಾಯಿತಿಗೆ ಅನುದಾನದ ಕೊರತೆ ಇರುವುದರಿಂದ ಸಾರ್ವಜನಿಕರು ಹಾಗೂ ಉತ್ಸಾಹಿ ವಿದ್ಯಾರ್ಥಿ ಸಂಘಟನೆಯನ್ನೇ ಇದಕ್ಕೆ ಬಳಸಿಕೊಂಡು ಕಾಮಗಾರಿ ನಡೆಸುವ ಯೋಚನೆಯಲ್ಲಿ ಪಂಚಾಯಿತಿ ಇದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ಲಭಿಸಿದೆ. ಈಗಾಗಲೇ ವಿದ್ಯಾರ್ಥಿಗಳ ತಂಡ ಕಾರ್ಯಪ್ರವೃತ್ತವಾಗಿದ್ದು, ಸುಮಾರು 800ಕ್ಕೂ ಅಧಿಕ ಮರಳಿನ ಗೋಣಿ ಚೀಲಗಳನ್ನು ಸಿದ್ದಪಡಿಸಿದೆ. ವಾರದೊಳಗೆ ಎಲ್ಲಾ ಅಣೆಕಟ್ಟುಗಳೂ ನಿರ್ಮಾಣವಾಗಿ ನೀರು ನಿಲ್ಲಿಸುವ ಕಾರ್ಯ ನಡೆಯಲಿದೆ.
ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಸದಸ್ಯ ಮಂಜುನಾಥ ಕಲ್ಲಕಟ್ಟ ನೇತೃತ್ವದ ತಂಡ ನದಿ ನೀರುಗಳನ್ನು ಸಂಗ್ರಹ ಮಾಡಲು ಮುಂದಾಗಿದ್ದಾರೆ. ಇವರಿಗೆ ಬೆಂಬಲವಾಗಿ ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಾನ್ ಡಿಸೋಜ, ವಿಠಲ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಅಣ್ಣಪ್ಪ ಸಾಸ್ತಾನ ಅವರು ತಮ್ಮ ವಿದ್ಯಾರ್ಥಿಗಳ ತಂಡ ಈ ಕಾರ್ಯಗಳಿಗೆ ವಿನಿಯೋಗಿಸಿದ್ದಾರೆ.
Be the first to comment on "ವಿಟ್ಲ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಎನ್ನೆಎಸ್ಸೆಸ್ ವಿದ್ಯಾರ್ಥಿಗಳ ಸಾಥ್"