ನೆನಪಿದೆಯಾ?
ನೀವು ತೆರಳುತ್ತಿರುವ ವಾಹನ ಬಿ.ಸಿ.ರೋಡ್ ದಾಟಿ ಪಾಣೆಮಂಗಳೂರು ಸೇತುವೆ ಹಾದು, ಮೇಲ್ಕಾರ್ ಎಂಬ ಪುಟ್ಟ ಪ್ರದೇಶಕ್ಕೆ ತಲುಪುವ ಹಂತಕ್ಕೆ ಬಂದಾಗಲೇ ಮೈಲುದ್ದದ ಕ್ಯೂ…
ಬಿರುಬೇಸಗೆಯಲ್ಲಿ ವಾಹನ ನಿಂತಿದೆ ಎಂದರೆ ಮಧ್ಯಾಹ್ನ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ತೆರಳುವವರು ಊಟ ಮುಗಿದ ಮೇಲೆಯಷ್ಟೇ ತಲುಪುವ ಗ್ಯಾರಂಟಿ.
ಬೆಳಗ್ಗೆಯಂತೂ ಕಾಲೇಜು, ಶಾಲೆಗಳಿಗೆ ತೆರಳುವವರು ಗಂಟೆ ಮುಂಚಿತವಾಗಿ ಹೋಗಬೇಕು ಎಂಬಂಥ ಅಲಿಖಿತ ನಿಯಮ ತಂದಿತ್ತದ್ದು ಇದೇ ಟ್ರಾಫಿಕ್ ಜಾಮ್.
ಮೇಲ್ಕಾರ್ ಎಂದರೆ ಟ್ರಾಫಿಕ್ ಜಾಮ್ ಎಂದು ಕುಖ್ಯಾತಿ ಪಡೆವಷ್ಟು ರಸ್ತೆಯಲ್ಲಿಡೀ ವಾಹನಗಳು ಮುಗಿಬೀಳುವಂತೆ ಕಾಣಿಸುತ್ತಿದ್ದವು. ಅವುಗಳ ನಡುವೆ ವಾಹನಗಳ ಪೈಪೋಟಿ, ಎಲ್ಲೆಂದಲ್ಲಿ ನುಗ್ಗಿಸಿ ಮತ್ತೆ ಜ್ಯಾಮ್. ಜೊತೆಗೆ ಬಸ್ಸುಗಳ ನಿಲುಗಡೆ. ಮಳೆಗಾಲ ಬಂದರಂತೂ ನರಕದರ್ಶನ.
ಇದಷ್ಟೇ ಅಲ್ಲ, ಮೇಲ್ಕಾರಿನಿಂದ ಕೊಣಾಜೆ, ಮುಡಿಪು, ಮಂಚಿ, ಪಣೋಲಿಬೈಲಿಗೆ ತೆರಳುವವರೂ ಹೆದ್ದಾರಿ ಇಳಿದು ಇನ್ನೊಂದು ರಸ್ತೆಗೆ ತೆರಳಬೇಕೆಂದರೆ ಹಿಮಾಲಯವನ್ನೇ ಸುತ್ತಿಬಂದಂಥ ಅನುಭವ.
ಇವೆಲ್ಲಾ ನಿಮಗೆ ನೆನಪಿರಬೇಕು.
ಇಂಥದ್ದನ್ನೆಲ್ಲಾ ಸಹಿಸಿಕೊಂಡ ಮೇಲ್ಕಾರು ಎಂಬ ಪುಟ್ಟ ವ್ಯವಹಾರ ಕೇಂದ್ರವೀಗ ಬಿ.ಸಿ.ರೋಡಿಗೆ ಸರಿಸಮಾನವಾಗಿ ಬೆಳೆಯುತ್ತಿದೆ. ಇಡೀ ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆಗಳಲ್ಲಿ ಒಂದು ಎಂಬಂತೆ ಮೇಲ್ಕಾರ್ ಜಂಕ್ಷನ್ ಬೆಳವಣಿಗೆ ಕಾಣುತ್ತಿದೆ.
ಟ್ರಾಫಿಕ್ ಜಾಮ್ ಗೆ ಇನ್ನೊಂದು ಹೆಸರು ಎಂದೇ ಅಪಕೀರ್ತಿ ಪಡೆದಿದ್ದ ಮೇಲ್ಕಾರ್ ಈಗ ಎಲ್ಲರಿಂದಲೂ ಹೊಗಳಿಸಿಕೊಳ್ಳುವಂತಾದ ಯಶೋಗಾಥೆಯೇ ಕುತೂಹಲದಾಯಕ.
ಹಾಗೆ ನೋಡಿದರೆ, ರಾಷ್ಟ್ರೀಯ ಹೆದ್ದಾರಿ ಎಡ, ಬಲಗಳಲ್ಲಿ ಅಂಗಡಿಗಳಿರುವ ಮೇಲ್ಕಾರ್, ಎಲ್ಲ ಹೆದ್ದಾರಿ ಬದಿಯ ಕೇಂದ್ರಗಳಂತೆ ಪುಟ್ಟ ಪ್ರದೇಶ. ಆದರೆ ಮಂಚಿ, ಸಜಿಪ ಸಹಿತ ಪರಿಸರದ ಜನರಿಗೆ ಸಣ್ಣಪುಟ್ಟ ವ್ಯವಹಾರ ಕೇಂದ್ರವಾಗಿ ಬೆಳೆಯಲು ಆರಂಭಿಸಿದ ಮೇಲ್ಕಾರ್ ಗೆ ಬಂದರೆ ಬಿ.ಸಿ.ರೋಡಿಗೆ ಹೋಗುವ ಅಗತ್ಯವೇ ಇಲ್ಲ ಎಂಬಂತಾಗಿದೆ. ಏಕೆಂದರೆ ಬಹುತೇಕ ಎಲ್ಲ ವಾಣಿಜ್ಯ ವ್ಯವಹಾರಗಳೂ ಮೇಲ್ಕಾರ್ ನ ಬಹುಮಹಡಿ ಸಂಕೀರ್ಣಗಳಲ್ಲಿ ನಡೆಯುತ್ತಿವೆ.
ಟ್ರಾಫಿಕ್ ಜಾಮ್ ನಿಂದ ಈ ಪ್ರದೇಶದ ಇಡೀ ವಾಣಿಜ್ಯ ಚಟುವಟಿಕೆಗಳೇ ಸ್ತಬ್ದವಾದಂತಾಗುತ್ತಿತ್ತು. ಆದರೆ ಯಾವಾಗ ಹೆದ್ದಾರಿ ಅಗಲೀಕರಣ ಆರಂಭವಾಯಿತೋ ಅಂದಿಗೆ ಮೇಲ್ಕಾರಿನ ಚಿತ್ರಣವೇ ಬದಲಾಗಲು ಮುನ್ನುಡಿ ಬರೆದಂತಾಯಿತು.
ಅಲ್ಲಿಂದ ನಡೆದದ್ದೆಲ್ಲಾ ಬದಲಾವಣೆ ಪರ್ವ. ರಸ್ತೆ ಅಗಲಗೊಳಿಸುವ ಸಂದರ್ಭ ಇಲ್ಲಿನ ವರ್ತಕರು, ಸಾರ್ವಜನಿಕರು ಪಕ್ಷಬೇಧ ಮರೆತು ಬೆಂಬಲ ನೀಡಿದರು. ಪೇಟೆ ಅಭಿವೃದ್ಧಿಯಾಗಬೇಕಾದರೆ, ಇಲ್ಲಿಗೆ ಜನರು ಬರಬೇಕು ಎಂಬುದನ್ನು ಮನಗಂಡಿದ್ದ ವ್ಯಾಪಾರಸ್ಥರು ಮೇಲ್ಕಾರಿನ ಸ್ವರೂಪವನ್ನೇ ಬದಲಾಯಿಸಲು ಸಹಕರಿಸಿದರು.
ಇದೇ ಸಂದರ್ಭ ಮೇಲ್ಕಾರಿನಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಆರಂಭಗೊಂಡಿತು. ಮೇಲ್ಕಾರಿನ ಟ್ರಾಫಿಕ್ ಜಾಮ್ ನ ಸಂತ್ರಸ್ತರಲ್ಲಿ ಪೊಲೀಸರೂ ಒಳಗೊಂಡಿದ್ದ ಕಾರಣ, ಟ್ರಾಫಿಕ್ ಎಸ್. ಐ. ಚಂದ್ರಶೇಖರಯ್ಯ ಅವರೂ ಹೆದ್ದಾರಿ ಅಗಲೀಕರಣ ಸಂದರ್ಭ ವಾಹನ ನಿಲುಗಡೆ, ಸುಗಮ ಸಂಚಾರಕ್ಕೆ ಬೇಕಾದ ರೂಪುರೇಷೆಗಳನ್ನು ಸಾರ್ವಜನಿಕರ ಸಹಕಾರದೊಡನೆ ಮಂಡಿಸಿದರು.
ಇದಕ್ಕೆ ಸಾರ್ವಜನಿಕರು, ಜನಪ್ರತಿನಿಧಿಗಳ ಬೆಂಬಲವೂ ದಕ್ಕಿತು. ನೋಡನೋಡುತ್ತಿದ್ದಂತೆ ಮೇಲ್ಕಾರಿನ ಚಿತ್ರಣವೇ ಬದಲಾಗಿ ಹೋಯಿತು.
ಬಸ್ ನಿಲ್ದಾಣ, ಬಸ್ ಬೇ ಯಂಥ ವ್ಯವಸ್ಥೆಗಳು ಆಗಬೇಕಷ್ಟೇ. ಏಕೆಂದರೆ ಬಿ.ಸಿ.ರೋಡ್ – ಅಡ್ಡಹೊಳೆ ರಸ್ತೆ ಸಂಪೂರ್ಣ ಕಾಂಕ್ರೀಟ್ ಆಗುವತ್ತ ಹೊರಟಿದೆ.
ಈಗಂತೂ ಮೇಲ್ಕಾರಿಗೆ ಬದಲಾವಣೆಯ ಪರ್ವಕಾಲ.
ಬಂಟ್ವಾಳದ ಪ್ರಮುಖ ಜಂಕ್ಷನ್ ಆಗಿ ರೂಪುಗೊಂಡಿರುವ ಮೇಲ್ಕಾರ್ ಹೊಸತನಕ್ಕೆ ತೆರೆದುಕೊಳ್ಳುತ್ತಿದೆ.
ಇದು ಆರಂಭವಷ್ಟೇ…
ಚಿತ್ರಗಳು: ಲಕ್ಷ್ಮಣ್, ಪೂಜಾ ಡಿಜಿಟಲ್ ಸ್ಟುಡಿಯೋ ಮೇಲ್ಕಾರ್
ಮೇಲ್ಕಾರ್ ಹೇಗಿದ್ದರೆ ಚೆನ್ನಾಗಿರುತ್ತದೆ? ಏನಾಗಬೇಕು – ಯೋಚನೆಗಳು ನಿಮ್ಮಲ್ಲೂ ಇರಬಹುದು. ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com
Be the first to comment on "ಬದಲಾಗುತ್ತಿದೆ ಮೇಲ್ಕಾರು"