
“ಜನರು ಕೇವಲ ಮನೆಯಲ್ಲಿ ಕುಳಿತು ಮೊಬೈಲ್ ಹಿಡಿದುಕೊಂಡರೆ ಸಾಲದು, ನಮ್ಮ ಹಕ್ಕುಗಳಿಗಾಗಿ ಪ್ರತಿಯೊಬ್ಬರೂ ಬೀದಿಗಿಳಿದು, ಪ್ರತಿಭಟನೆಯ ಮೂಲಕ ಒಂದು ಹೆಜ್ಜೆ ಮುಂದಿಟ್ಟು ಬೃಹತ್ ಸಂಖ್ಯೆಯಲ್ಲಿ ಹೋರಾಟ ನಡೆಸಬೇಕಾಗಿದೆ” ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ರಾಜ್ಯ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಭಾರತೀಯ ಜನತಾ ಪಾರ್ಟಿ ಬಂಟ್ವಾಳ ನಗರ ಮಹಾಶಕ್ತಿಕೇಂದ್ರದ ಆಶ್ರಯದಲ್ಲಿ ಜನಾಂದೋಲನ ರೂಪದಲ್ಲಿ ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಪಾದಯಾತ್ರೆ ಹಾಗೂ ಹಕ್ಕೊತ್ತಾಯ ಸಭೆ ಬಂಟ್ವಾಳ ಪುರಸಭೆ ಮುಂಭಾಗ ಸೋಮವಾರ ನಡೆಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, “ಕಾಂಗ್ರೆಸ್ ಸರ್ಕಾರವು ಕ್ಷೇತ್ರಕ್ಕೆ ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳನ್ನು ತರದೆ, ಈಗಾಗಲೇ ಜನರಿಗಿದ್ದ ಮೂಲ ಸೌಲಭ್ಯಗಳನ್ನು ಒಂದೊಂದಾಗಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಜನರ ಹಕ್ಕನ್ನು ಕಸಿಯುತ್ತಿರುವ ಸರ್ಕಾರದ ವಿರುದ್ಧದ ಈ ಹೋರಾಟವು ಪ್ರತಿ ಗ್ರಾಮ ಗ್ರಾಮಗಳಿಗೂ ತಲುಪಲಿದ್ದು, ಎಲ್ಲೆಡೆ ವ್ಯಾಪಕವಾಗಿ ಆಯೋಜಿಸಲಾಗಿದೆ. ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದರು.
ರಾಜ್ಯ ನಾಯಕ ವಿಕಾಸ್ ಪುತ್ತೂರು ಮಾತನಾಡಿ, ಇವತ್ತು ನಮ್ಮ ಪುರಸಭೆ ಎದುರು ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಕಗ್ಗತ್ತಲು ಆವರಿಸಿದೆ. ಮೂರು ವರ್ಷಗಳ ಹಿಂದೆ ಯಾವ ರೀತಿ ಇತ್ತು, ಇವತ್ತು ಯಾವ ರೀತಿ ಇದೆ ಪರಿಸ್ಥಿತಿ ಎಂದು ನಾವು ವಿಮರ್ಶೆ ಮಾಡಬೇಕು. ಸ್ಥಳೀಯಾಡಳಿತಗಳಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಜಿಲ್ಲಾ ಪಂಚಾಯಿತಿ, ತಾಪಂ ಚುನಾವಣೆ ನಡೆಸದೆ ಐದಾರು ವರ್ಷಗಳಾದವು. ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಆಗಬೇಕು ಎಂಬುದು ಮಹಾತ್ಮಾ ಗಾಂಧೀಜಿ ಅವರ ಕನಸಾಗಿತ್ತು. ಅವರ ಹೆಸರಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ ಪಕ್ಷ ಇವತ್ತು ತಿಲಾಂಜಲಿ ಇಟ್ಟಿದೆ. ಜನಪ್ರತಿನಿಧಿಗಳು ಜನರ ಧ್ವನಿಯಾಗಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಇರಬೇಕು. ಇದು ಬಿಜೆಪಿ ಆಗ್ರಹ. ಇವತ್ತು ಸರಕಾರದಲ್ಲಿ ದುಡ್ಡಿಲ್ಲ. ಇಡೀ ರಾಜ್ಯದಲ್ಲಿ ಕೆಲಸ ಆಗುತ್ತಿಲ್ಲ. ಯಾರೂ ಇದರ ವಿರುದ್ಧ ಧ್ವನಿ ಎತ್ತಬಾರದು ಎಂದು ಚುನಾವಣೆ ನಡೆಸುತ್ತಿಲ್ಲ ಎಂದರು.
ಪ್ರಮುಖರಾದ ರಾಮದಾಸ ಬಂಟ್ವಾಳ, ಹರಿಕೃಷ್ಣ ಬಂಟ್ವಾಳ, ಆರ್. ಚೆನ್ನಪ್ಪ ಕೋಟ್ಯಾನ್, ದಿನೇಶ ಅಮ್ಟೂರು, ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ಸುರೇಶ್ ಕುಲಾಲ್, ದಿನೇಶ್ ಭಂಡಾರಿ, ಸುರೇಶ್ ಕುಮಾರ್,, ಗೋವಿಂದ ಪ್ರಭು, ಹರಿಪ್ರಸಾದ್, ಪ್ತಣಾಮ್ ರಾಜ್, ಗಂಗಾಧರ ಪೂಜಾರಿ, ವಿದ್ಯಾವತಿ ಪ್ರಮೋದ್ ಕುಮಾರ್, ಶಶಿಕಲಾ, ಪುರುಷೋತ್ತಮ ಶೆಟ್ಟಿ ವಾಮದಪದವು, ಕೇಶವ ದೈಪಲ, ಮಹೇಶ್ ಶೆಟ್ಟಿ ಸಹಿತ ಬಿಜೆಪಿಯ ನಾನಾ ಘಟಕಗಳ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಬಂಟ್ವಾಳ ಬೈಪಾಸ್ ಜಂಕ್ಷನ್‌ನಿಂದ ಬಂಟ್ವಾಳ ಪುರಸಭೆಯವರೆಗೆ ಪಾದಯಾತ್ರೆ ನಡೆಯಿತು.


Be the first to comment on "ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ: ಬಂಟ್ವಾಳದಲ್ಲಿ ಬಿಜೆಪಿ ಪ್ರತಿಭಟನೆ – ಹೋರಾಟ ಅಗತ್ಯ: ಶಾಸಕ ರಾಜೇಶ್ ನಾಯ್ಕ್ ಹೇಳಿದ್ದೇನು?"