
ಇಲ್ಲಿ ಮಳೆ ಬಂದಿತ್ತೇ ಎಂದು ಅನುಮಾನಿಸುವಷ್ಟು ಬಿಸಿಲು. ಸೂರ್ಯನನ್ನೇ ಮುಚ್ಚುವಷ್ಟು ಮೋಡ, ಕೆಲವೊಮ್ಮೆ ಬೆಳಗ್ಗೆ ಮಂಜು ಕವಿದ ವಾತಾವರಣ. ಇವೆಲ್ಲವನ್ನೂ ತಪ್ಪಿಸಿ ಕೆಲವೊಮ್ಮೆ ಗುಡುಗಿನ ಸದ್ದಿನೊಂದಿಗೆ ಮಳೆ.!!

ರೋಗ ಉಗಮವಾಗಲು ಹೇಳಿ ಮಾಡಿಸಿಟ್ಟಂತಿರುವ ಈ ಸೀಸನ್ ನಲ್ಲಿ ಮನುಷ್ಯನ ದೇಹಕ್ಕೆ ರೋಗಗಳು ಬರುತ್ತಿರುವುದು ಮಾತ್ರವಲ್ಲ, ರಸ್ತೆಗೂ ಈ ಪರಿಣಾಮ ಆಗಿದೆ. ಸರಿಯಾಗಿ ನಾಲ್ಕು ಹನಿ ಮಳೆ ಬೀಳದಿದ್ದರೂ ರಸ್ತೆಗಳು ಮಳೆಯ ಕಾರಣವೊಡ್ಡಿ ಹಾಳಾಗಿವೆ.

ಬೇರೆಲ್ಲೂ ನೋಡುವುದು ಬೇಡ!!. ಬಿ.ಸಿ.ರೋಡ್ ಪೇಟೆಗೆ ಬಂದರೆ ಸಾಕು. ಇಲ್ಲಿ ಫ್ಲೈಓವರ್ ನ ಕೆಳಭಾಗದಲ್ಲಿ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಉತ್ಪತ್ತಿಯಾಗಿವೆ. ಕಳೆದ ವರ್ಷ ಎಲ್ಲಿ ಹೊಂಡವಿತ್ತೋ ಅಲ್ಲೇ ಮತ್ತೆ ಗುಂಡಿ. ಇದಕ್ಕೆ ಫ್ಲೈಓವರ್ ಮೇಲೆ ಸಂಗ್ರಹಗೊಂಡ ನೀರು ಓವರ್ ಫ್ಲೋ ಆಗಿ ಅಲ್ಲಿ ಬೀಳುತ್ತದೆ ಎಂಬ ನೆಪವಾದರೂ ಡಾಂಬರು ಕಿತ್ತು ಹೋಗಲು ಏನು ಕಾರಣ ಎಂದು ತಜ್ಞರೇ ಹೇಳಬೇಕು.

ನಿತ್ಯ ನೂರಾರು ವಾಹನಗಳು ಸಂಚರಿಸುವ ಹೆದ್ದಾರಿಯಲ್ಲಿ ರಸ್ತೆ ಹೊಂಡ ಪ್ರಯಾಣಿಕರ ಜೀವ ಹಿಂಡುತ್ತಿವೆ.ವಾಹನಗಳ ನಿರಂತರ ಚಾಲನೆಯ ವೇಳೆ ಇಲ್ಲಿ ಹೊಂಡ ತಪ್ಪಿಸಿ ಚಲಾಯಿಸುವುದೇ ಕಷ್ಟ ಎಂಬ ಪರಿಸ್ಥಿತಿ ಉದ್ಭವವಾಗಿದೆ.
ಮುಚ್ಚಿದರೂ ತೆರೆದುಕೊಳ್ಳುತ್ತವೆ!!
ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಈ ಹೊಂಡಗಳು ಇರುವ ಕುರಿತು ನೆನಪು ಮಾಡಿದರೆ, ಸಂಬಂಧಪಟ್ಟವರು ತೇಪೆ ಹಾಕುತ್ತಾರೆ. ಕೆಲ ದಿನಗಳಲ್ಲಿ ಮುಚ್ಚಿಟ್ಟದ್ದೆಲ್ಲ ಹೊರಬರುತ್ತವೆ. ಹೊಂಡ ಬಾಯ್ದೆರೆದು ನಿಲ್ಲುತ್ತದೆ. ಇದನ್ನು ತಪ್ಪಿಸಲು ಎಡಬದಿ ಸಂಚರಿಸಿದರೆ, ಅಲ್ಲಿ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲುವ ಕಾರಣ ವಾಹನಗಳ ದಟ್ಟಣೆ ಜಾಸ್ತಿಯಾಗುತ್ತದೆ.ಪಾಣೆಮಂಗಳೂರಿನಿಂದ ನಂದಾವರ ಒಳರಸ್ತೆ, ಪಣೋಲಿಬೈಲು ರಸ್ತೆ, ಕಡೇಶ್ವಾಲ್ಯ ರಸ್ತೆ ಸಹಿತ ಹಲವು ಭಾಗದ ರಸ್ತೆಗಳು ಹೊಂಡ ಗುಂಡಿಗಳಾಗಿ ಬದಲಾಗಿದೆ.ಮಾಧ್ಯಮಗಳಲ್ಲಿ ಪ್ರಕಟವಾದ ದಿನ ತೇಪೆ ಹಾಕಲಾಗುತ್ತದೆ, ಮತ್ತೆ ಅದೇ ಸ್ಥಿತಿ..!

ಸರ್ಕಲ್ ನ ಪಕ್ಕದಲ್ಲಿಯೂ ಇದೇ ಸ್ಥಿತಿ. ಹೊಂಡಗಳಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ತೇಪೆ ಹಾಕಲಾಗಿತ್ತು. ಮರುದಿನ ಮತ್ತೆ ಅದೇ ಹೊಂಡಗಳು ತನ್ನನ್ನು ಮುಚ್ಚಿಲ್ಲ ಎಂಬುದನ್ನು ಸಾಬೀತುಪಡಿಸಿತು. ಇಲ್ಲಿನ ಸರ್ಕಲ್ ಅನ್ನು ಸುತ್ತುವುದು, ಅಷ್ಟದಿಕ್ಕುಗಳನ್ನೂ ಗಮನಿಸಬೇಕಾಗುವುದು ಒಂದು ಕೆಲಸವಾದರೆ, ಹೊಂಡಗಳಿವೆಯೇ ಎಂಬುದನ್ನು ಗುರುತಿಸುವುದೂ ಮತ್ತೊಂದು ಸವಾಲು.


Be the first to comment on "ಹೆದ್ದಾರಿ ಹೊಂಡಗಳ ಕಣ್ಣಾಮುಚ್ಚಾಲೆ | ಮುಚ್ಚಿದ ಮರುದಿನವೇ ಪ್ರತ್ಯಕ್ಷವಾಗುತ್ತದೆ | ಮಳೆ ಇಲ್ದಿದ್ರೂ ರಸ್ತೆ ಹಾಳಾಗೋದು ತಪ್ಪಲಿಲ್ಲ"