ಪ್ರಮುಖ ಸುದ್ದಿಗಳು

ವೃದ್ಧೆಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣ, ಮೂರು ದಿನಗಳೊಳಗೇ ಆರೋಪಿಗಳ ಬಂಧಿಸಿದ ಪೊಲೀಸರು

  • ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ

ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿ ನಲ್ಲಿ ಮಧ್ಯಾಹ್ನದ ವೇಳೆಗೆ ವೃದ್ಧ ಮಹಿಳೆಯೊಬ್ಬರು ಇರುವ ಮನೆಗೆ ಆಗಮಿಸಿ, ಬಾಡಿಗೆ ವಿಚಾರದ ಕುರಿತು ಮಾತನಾಡಿ, ಮಹಿಳೆಗೆ ಹಲ್ಲೆ ನಡೆಸಿ, ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ವಿವರ:

ಮಂಗಳೂರಿನ ಊರ್ವ ಮಠದಕಣಿ ನಿವಾಸಿ  ಬಾಲಸುಬ್ರಮಣ್ಯ (49) ಮತ್ತು ತೊಕ್ಕೊಟ್ಟು ಮೂಲದ ಮಣ್ಣಗುಡ್ಡ ನಿವಾಸಿ ಶ್ಯಾಮ್ ಕುಮಾರ್ (33) ಬಂಧಿತರು.

ಜಾಹೀರಾತು

ಆರೋಪಿಗಳಿಂದ ಸುಲಿಗೆ ಮಾಡಲಾದ ಸಂಪೂರ್ಣ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಉಪಯೋಗಿಸಿದ ಬೈಕ್ ನ್ನು ಸ್ವಾಧೀನ ಪಡಿಸಲಾಗಿದೆ. ಪ್ರಕರಣ ವರದಿಯಾದ ಕೇವಲ 3 ದಿನಗಳೊಳಗಾಗಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

OPTIC WORLD

ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ನಡೆಸಿದ ತನಿಖೆಯ ಸಂದರ್ಭದಲ್ಲಿ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ, ಶುಕ್ರವಾರ ಮರೋಳಿ ಎಂಬಲ್ಲಿ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ.

ಮುಡಿಪುವಿನಲ್ಲಿ ಆಗಸ್ಟ್ 3ರಂದು ಮಧ್ಯಾಹ್ನ ಸುಮಾರು 1.15 ಗಂಟೆಗೆ 76 ವರ್ಷದ ವೃದ್ಧ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿದ್ದ ಸಂದರ್ಭದಲ್ಲಿ, ಮನೆಯ ಬಾಗಿಲನ್ನು ಯಾರೋ ಬಡಿಯುತ್ತಿರುವುದನ್ನು ಗಮನಿಸಿ ಬಾಗಿಲು ತೆರೆದಾಗ, ಮನೆಯ ಮೆಟ್ಟಿಲಿನ ಬಳಿ ಇಬ್ಬರು ವ್ಯಕ್ತಿಗಳು ನಿಂತುಕೊಂಡಿದ್ದು, ಮನೆ ಬಾಗಿಲನ್ನು ತೆಗೆದು ಅವರನ್ನು ವಿಚಾರಿಸುತ್ತಿದ್ದಾಗಲೇ ಮನೆ ಬಾಡಿಗೆಗೆ ಎಂದು ಮಾಡನಾಡುತ್ತಾ ಆರೋಪಿಗಳು ಬಾಗಿಲನ್ನು ಬಲವಂತವಾಗಿ ದೂಡಿ, ಮನೆಯೊಳಗೆ ನುಗ್ಗಿ ವೃದ್ಧ ಮಹಿಳೆಯನ್ನು ಕೆಳಕ್ಕೆ ಬೀಳಿಸಿ, ಅವರ ಮೇಲೆ ಹಲ್ಲೆ ನಡೆಸಿ, ಆಕೆಯ ಬಳಿಯಿದ್ದ  ಒಂದು ಚಿನ್ನದ ಸರ ಹಾಗೂ ಬಳೆಯನ್ನು ಬಲವಂತವಾಗಿ ದೋಚಿಕೊಂಡು ಪರಾರಿಯಾಗಿರುತ್ತಾರೆ. ಸುಲಿಗೆ ಮಾಡಲಾದ ಚಿನ್ನಾಭರಣಗಳ ಒಟ್ಟು ತೂಕ 24 ಗ್ರಾಂ ಆಗಿದ್ದು, ಅಂದಾಜು ಮೌಲ್ಯ ರೂ.3 ಲಕ್ಷ ಆಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

VNR GOLD

ಆರೋಪಿಗಳ ಪೈಕಿ ಆರೋಪಿ ಬಾಲಸುಬ್ರಮಣ್ಯ ವಿರುದ್ಧ ಈ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ 2 ಸುಲಿಗೆ ಪ್ರಕರಣಗಳು, ಮುಲ್ಕಿ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ ದಾಖಲಾಗಿರುತ್ತವೆ.

ಈ ಪತ್ತೆ ಕಾರ್ಯವು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ವಿಜಯಕ್ರಾಂತಿ ಅವರ ನೇತೃತ್ವದಲ್ಲಿ ನಡೆದಿದ್ದು, ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ವಿರೂಪಾಕ್ಷ ಸ್ವಾಮಿ ಹಾಗೂ ಕೊಣಾಜೆ ಪೊಲೀಸ್ ಠಾಣೆಯ ಪಿ.ಎಸ್.ಐ. ನಾಗರಾಜ್ ಮತ್ತು ಪುನೀತ್ ಗಾಂವಕರ್, ಪೊಲೀಸ್ ಸಿಬ್ಬಂದಿಗಳಾದ ಎ.ಎಸ್.ಐ. ಸೃಜನ್ ಶೆಟ್ಟಿ, ಹೆಚ್.ಸಿ. ಇಸಾಕ್, ಎಚ್.ಸಿ. ಸುನೀಲ್, ಎಚ್.ಸಿ. ಶೈಲೇಂದ್ರ ಹಾಗೂ ಎಚ್.ಸಿ. ಬಸವನಗೌಡ ಮತ್ತು ಇತರರು ಭಾಗವಹಿಸಿರುತ್ತಾರೆ.

ಇಂತಹ ಅಪರಾಧಗಳನ್ನು ತಡೆಗಟ್ಟಲು, ಅಪರಿಚಿತರು ಬಂದಾಗ ಎಚ್ಚೆತ್ತುಕೊಳ್ಳದೇ ಬಾಗಿಲು ತೆಗೆಯುವುದು, ಒಂಟಿ ಮಹಿಳೆಯರು ಇದ್ದಾಗ ಮನೆಯ ಆವರಣಗಳಲ್ಲಿ  ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.