ಬಂಟ್ವಾಳ

ಬಂಟ್ವಾಳ: ಎಸ್.ವಿ.ಎಸ್. ಕಾಲೇಜು, ದ.ಕ.ಜಿಲ್ಲಾ ಕಸಾಪ ವತಿಯಿಂದ ದತ್ತಿ ಉಪನ್ಯಾಸ

“ಸಾಹಿತ್ಯ ಎನ್ನುವುದು ನಮ್ಮ ಜೀವಸೆಲೆ ಇದ್ದಂತೆ. ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದೆಂದರೆ ಅದೊಂದು ಸಂಭ್ರಮದ, ಸಡಗರದ ಹಬ್ಬದಂತೆ ಆಗಬೇಕು. ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಕಾರ್ಯಕ್ರಮಗಳಲ್ಲಿ ಆಸಕ್ತಿ ಬೆಳೆಸಿಕೊಂಡರೆ ಅದು ನಮ್ಮ ಖುಷಿಯ ಬದುಕಿಗೂ ಸಹಕಾರಿಯಾಗುತ್ತದೆ” ಎಂದು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ (ಎಸ್.ವಿ.ಎಸ್.) ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಎಂ.ಡಿ. ಮಂಚಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಯಕ್ಷಗಾನ ಒಂದು ಅದ್ಭುತ ವಿಶ್ವವಿದ್ಯಾಲಯ: ವಿ.ಸು. ಭಟ್

ದಾಮೋದರ ಗೌಡ ಮತ್ತು ದಿ. ಶೇಕರಪ್ಪ ಗೌಡ ಅವರಿಂದ ಸ್ಥಾಪಿತವಾದ ಬಿ. ಕೊರಗಪ್ಪ ಗೌಡ ನೆನಪಿನ ಯಕ್ಷಗಾನ – ಜೀವನದಲ್ಲಿ ಶಿಸ್ತು, ಧರ್ಮಾಚರಣೆ” ಎಂಬ ವಿಷಯದ ಕುರಿತು ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ವಿ.ಸುಬ್ರಹ್ಮಣ್ಯ  ಭಟ್ ಉಪನ್ಯಾಸ ನೀಡಿದರು.

ಜಾಹೀರಾತು

“ಯಕ್ಷಗಾನ ಕರಾವಳಿ ಮೂಲದ ಅದ್ಭುತ ಕಲಾ ಪ್ರಕಾರ. 12ನೇ ಶತಮಾನದಲ್ಲಿ ಪ್ರಾರಂಭಗೊಂಡು, 16ನೇ ಶತಮಾನದ ವೇಳೆಗೆ ಕೂಟಗಳ ರೂಪದಲ್ಲಿ ಬೆಳೆದುಬಂದ ಯಕ್ಷಗಾನವು ಇಂದು ಗತ್ತು-ಗಾಂಭೀರ್ಯದೊಂದಿಗೆ ಯಾವುದೇ ವಿಶ್ವವಿದ್ಯಾಲಯಕ್ಕೂ ಕಡಿಮೆಯಿಲ್ಲದಂತೆ ಬೆಳೆದಿದೆ. ಹೆಣ್ಣು-ಗಂಡು ಭೇದವಿಲ್ಲದೆ ಅಭಿನಯಿಸುವ ಹಾಗೂ ಆಸ್ವಾದಿಸುವ ಕಲೆಯಾಗಿ ಜನಪ್ರಿಯವಾಗಿದೆ. ಯಕ್ಷಗಾನದ ಪೋಷಕರಾಗಿ, ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಆದರ್ಶಪ್ರಾಯರಾಗಿದ್ದ ಸಂಘಟಕ ಬಿ. ಕೊರಗಪ್ಪ ಗೌಡರು ಇಂದಿಗೂ ನಮಗೆಲ್ಲ ಮಾದರಿ” ಎಂದು ಅವರು ಬಣ್ಣಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಅನನ್ಯ: ಸುರೇಖಾ ಯಳವರ

ಏರ್ಯ ಚಂದ್ರಭಾಗಿ ರೈ ಮತ್ತು ಕೃಷ್ಣ ರೈ ಹೆಸರಿನಲ್ಲಿ ಸ್ಥಾಪಿತವಾದ ಸಾಹಿತ್ಯ ಮತ್ತು ಮಹಿಳೆ” ವಿಷಯದ ಕುರಿತು ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ವಿಶೇಷ ಸಂಪನ್ಮೂಲ ವ್ಯಕ್ತಿ ಸುರೇಖಾ ಯಳವರ ವಿಚಾರ ಪ್ರಸ್ತುತಪಡಿಸಿದರು.

“ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಶತಮಾನಗಳಿಂದಲೂ ತಮ್ಮನ್ನು ತೊಡಗಿಸಿಕೊಂಡು ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅಕ್ಕಮಹಾದೇವಿ, ಮುಕ್ತಾಯಕ್ಕ, ಅಯ್ದಕ್ಕಿ ಲಕ್ಕಮ್ಮ ಮುಂತಾದವರ ವಚನಗಳು ಸಾರ್ವಕಾಲಿಕ ಮೌಲ್ಯ ಹೊಂದಿವೆ. 60ರ ದಶಕದಲ್ಲಿ ತ್ರಿವೇಣಿಯವರಂತಹ ಸೃಜನಶೀಲ ಲೇಖಕಿಯರ ಕೊಡುಗೆ ಅಪಾರ. ಇಂದಿನ ವಿದ್ಯಾರ್ಥಿನಿಯರು ಹೆಚ್ಚು ಬರವಣಿಗೆಯಲ್ಲಿ ತೊಡಗಿಸಿಕೊಂಡು ಸಾಹಿತಿ-ಕವಯತ್ರಿಯರಾಗಲು ಮನಸ್ಸು ಮಾಡಬೇಕು” ಎಂದು ಕರೆ ನೀಡಿದರು.

ವಿದ್ಯಾರ್ಥಿ ಕೇಂದ್ರೀತ ಚಟುವಟಿಕೆಗೆ ಕಸಾಪ ಆದ್ಯತೆ: ಡಾ. ಎಂ.ಪಿ. ಶ್ರೀನಾಥ್

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ, “ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದ 31 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕೇವಲ ಸಾರ್ವಜನಿಕರಿಗಷ್ಟೇ ಅಲ್ಲದೆ ವಿದ್ಯಾರ್ಥಿಗಳನ್ನು ತಲುಪುವ ನಿಟ್ಟಿನಲ್ಲಿ ಇಂತಹ ದತ್ತಿ ಉಪನ್ಯಾಸಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲೂ ಕಸಾಪ ತನ್ನ ಛಾಪು ಮೂಡಿಸಿದ್ದು, ವಿದ್ಯಾರ್ಥಿಗಳು ಇದರ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದರು.

ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಮಹೇಂದ್ರ ಹಡಗಲಿ ಉಪಸ್ಥಿತರಿದ್ದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಶಿವಣ್ಣ ಪ್ರಭು ಸ್ವಾಗತಿಸಿದರು. ಯಕ್ಷಿತಾ ಮತ್ತು ಬಳಗದವರು ನಾಡಗೀತೆ ಪ್ರಸ್ತುತಪಡಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಯೋಗವರ್ಧನ್ ವಂದಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಕಾಶೀನಾಥ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು

VNR GOLD
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.