ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಮಂಗಳೂರು ಕಡೆಗೆ (ಫ್ಲೈಓವರ್) ಹೋಗುವ ಹೆದ್ದಾರಿಯ ಆರಂಭದಲ್ಲಿ ಗೂಡಿನಬಳಿಯಿಂದ ಬರುವ ರಸ್ತೆ ಸಂಧಿಸಿ ಸ್ವಲ್ಪ ಮುಂದಕ್ಕೆ ಇರುವ ಹೊಂಡ ಮತ್ತಷ್ಟು ಆಳವಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಭಾರಿ ಮಳೆ ಬಂದ ವೇಳೆ ನೀರು ನಿಂತು ಮತ್ತಷ್ಟು ಸಮಸ್ಯೆ ಉಂಟಾಗುತ್ತಿದ್ದು, ಸೋಮವಾರ ವಾಹನದಟ್ಟಣೆ ಹೆಚ್ಚಾಗಿದ್ದು, ಬೆಳ್ಳಂಬೆಳಗ್ಗೆ ಮಳೆಯೂ ಸುರಿಯುತ್ತಿದ್ದು, ವಾಹನ ಸವಾರರು ತೀವ್ರ ತೊಂದರೆಗೆ ಒಳಗಾದರು. ಪರಿಣಾಮ ಸಂಚಾರದಟ್ಟಣೆ ಉಂಟಾಗಿದ್ದು, ಟ್ರಾಫಿಕ್ ಪೊಲೀಸರು ಮಳೆಯಲ್ಲೂ ನಿಯಂತ್ರಣಕ್ಕೆ ಹರಸಾಹಸಪಟ್ಟರು.
ಕಾರಣವೇನು?
ಇಲ್ಲಿ ಸರ್ಕಲ್ ವಿಸ್ತೀರ್ಣಕ್ಕೆ ತಕ್ಕಂತೆ ರಸ್ತೆ ಅಗಲವಿಲ್ಲ ಎಂಬುದು ಪ್ರಯಾಣಿಕರ, ಸಾರ್ವಜನಿಕರ ದೂರಾದರೆ, ಇದೆಲ್ಲವೂ ತಜ್ಞರಿಂದ ಮಾಡಿಸಲ್ಪಟ್ಟಿದೆ ಎಂದು ಸಂಬಂಧಪಟ್ಟವರು ಹೇಳುತ್ತಾರೆ. ಆದರೆ ಸದ್ಯಕ್ಕಂತೂ ಬಂಟ್ವಾಳದಿಂದ ಬಿ.ಸಿ.ರೋಡಿಗೆ ತಿರುಗುವ ವೇಳೆ ಅಲ್ಲೇ ಪುತ್ತೂರು ಕಡೆಯಿಂದ ಬರುವ ವಾಹನಗಳೂ ಮುಖಾಮುಖಿಯಾಗುವ ಸಂಭವ ಇದ್ದು, ಅಲ್ಲಿಂದ ಮುಂದಕ್ಕೆ ಬಿ.ಸಿ.ರೋಡಿಗೆ ಹೋಗುವ ವೇಳೆ ಹೊಂಡವೂ ಕಾಣಿಸುತ್ತದೆ. ಈ ಹೊಂಡ ತಪ್ಪಿಸಲು ಮತ್ತಷ್ಟು ಬಲಕ್ಕೆ ವಾಹನಗಳು ಚಲಿಸುವ ಕಾರಣ, ಸಮಸ್ಯೆ ಬಿಗಡಾಯಿಸಿದೆ. ವಾಹನ ಸವಾರರ ಗೊಂದಲಗೊಂಡಾದ ನಿಧಾನಗತಿಯ ಸಂಚಾರ ಉಂಟಾಗುತ್ತದೆ. ಹೀಗಾಗಿ ವಾಹನಗಳು ಒಂದರ ಹಿಂದೆ ಮತ್ತೊಂದು ನಿಂತು, ಬಾಕಿಯಾಗುತ್ತಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಸೋಮವಾರ ಬೆಳಗ್ಗೆಯೂ ಹೀಗೇ ಆಯಿತು.
ಕಚೇರಿಗಳಿಗೆ ತೆರಳುವ ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದರು.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಟ್ರಾಫಿಕ್ ಪೊಲೀಸರು ವಾಹನ ಸಂಚಾರವನ್ನು ಸುಗಮಗೊಳಿಸಲು ಹರಸಾಹಸಪಟ್ಟರು. ವಾಹನಗಳನ್ನು ಹಂತ ಹಂತವಾಗಿ ಕಳುಹಿಸುವ ಮೂಲಕ ಸಂಚಾರವನ್ನು ನಿಯಂತ್ರಿಸಲು ಪ್ರಯತ್ನಿಸಿದ ಪರಿಣಾಮ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿತು. ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚಿ, ಸಮರ್ಪಕ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.