ಬಂಟ್ವಾಳ: ಆಟಿಡೊಂಜಿ ದಿನ, ಕೆಸರ್ ಡೊಂಜಿ ದಿನದಂತಹ ಆಚರಣೆಗಳ ಮೂಲಕ ಕರಾವಳಿಯ ಬದುಕು, ಸಂಸ್ಕೃತಿ ಹಾಗೂ ಆಹಾರ ವೈವಿಧ್ಯತೆಯನ್ನು ಪರಿಚಯಿಸುವ ಪರಂಪರೆ ಇದೆ. ಇದೇ ರೀತಿಯಲ್ಲಿ ಶ್ರಾವಣ ಮಾಸದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ವತಿಯಿಂದ ‘ಶ್ರಾವಣದಲ್ಲಿ ಒಂದು ದಿನ’ ಕಾರ್ಯಕ್ರಮ ನಡೆಯಿತು.
ಆ.30ರಂದು ಅಜೆಕಲ-ಬಂಟ್ವಾಳದಲ್ಲಿರುವ ವಿಶ್ವಕರ್ಮ ಸಮಾಜ ಸೇವಾ ಸಂಘದ ವಿಶ್ವಕರ್ಮ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಮಾಜ ಬಾಂಧವರು ತಮ್ಮ ಮನೆಗಳಿಂದ ಒಂದೊಂದು ವಿಶೇಷ ಖಾದ್ಯವನ್ನು ತಯಾರಿಸಿ ತಂದಿದ್ದರು. ವಿವಿಧ ಬಗೆಯ ಸಾಂಪ್ರದಾಯಿಕ ಹಾಗೂ ವೈವಿಧ್ಯಮಯ ಖಾದ್ಯಗಳು ಒಂದೇ ಸ್ಥಳದಲ್ಲಿ ಸೇರಿದ್ದು, ಎಲ್ಲರೂ ಒಟ್ಟಾಗಿ ಊಟ ಸವಿದು ಸಂಭ್ರಮ ಹಂಚಿಕೊಂಡರು. ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಿತು.
ಶ್ರಾವಣ ಆಚರಣೆಗಳ ಮಹತ್ವ
ಕಾರ್ಯಕ್ರಮದ ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿದ್ದ ಡಾ. ಎಸ್.ಪಿ. ಗುರುದಾಸ್ ಆಚಾರ್ಯ ಅವರು ಶ್ರಾವಣ ಮಾಸದಲ್ಲಿ ನಡೆಯುವ ವಿವಿಧ ಧಾರ್ಮಿಕ ಆಚರಣೆಗಳ ಮಹತ್ವವನ್ನು ವಿವರಿಸಿದರು. ಗುರುಪೂರ್ಣಿಮೆ, ರುಗುಪಾಕರ್ಮ ಹಾಗೂ ವರಮಹಾಲಕ್ಷ್ಮಿ ಪೂಜೆ ಸೇರಿದಂತೆ ಶ್ರಾವಣ ಮಾಸದ ಪ್ರಮುಖ ಆಚರಣೆಗಳ ಹಿನ್ನೆಲೆ ಮತ್ತು ಧಾರ್ಮಿಕ, ಸಾಂಸ್ಕೃತಿಕ ಮಹತ್ವವನ್ನು ತಿಳಿಸಿದರು.
ಶ್ರಾವಣ ಮಾಸವು ಪೂಜೆ-ಪುನಸ್ಕಾರಗಳಿಗೆ ಮಾತ್ರ ಸೀಮಿತವಾಗದೆ, ಗುರು-ಹಿರಿಯರಿಗೆ ಗೌರವ ನೀಡುವ, ಕುಟುಂಬದ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಾಗೂ ಸಂಸ್ಕಾರ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಂದರ್ಭವಾಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾತನಾಡಿ, ಸಮಾಜದ ಜಾಗೃತಿಗೆ ಸಂಸ್ಕಾರ ಪ್ರಮುಖವಾಗಿದೆ. ಸಂಸ್ಕಾರಯುತ ಕುಟುಂಬವು ಜಾಗೃತ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗಿದ್ದು, ಹಿರಿಯರು ಬೆಳೆಸಿಕೊಂಡು ಬಂದ ಮೌಲ್ಯ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಯುವಜನತೆ ಹಾಗೂ ಮಕ್ಕಳಿಗೆ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ವಿಶ್ವಜ್ಯೋತಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಿದ್ಯಾ ರತ್ನಾಕರ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆನೆಗುಂದಿ ಗುರುಸೇವಾ ಪರಿಷತ್, ಬಂಟ್ವಾಳ ಘಟಕದ ಕಾರ್ಯದರ್ಶಿ ರಮೇಶ್ ಪುರೋಹಿತ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಉಮೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಕರ್ಮ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ವಂದಿಸಿದರು. ಉಪಾಧ್ಯಕ್ಷ ಸಂದೀಪ್ ಆಚಾರ್ಯ ಅತಿಥಿಗಳನ್ನು ಪರಿಚಯಿಸಿದರು. ಸುಮನಾ ರಾಜೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಜಯಚಂದ್ರ ಆಚಾರ್ಯ, ಪ್ರಕಾಶ್ ಆಚಾರ್ಯ, ಪವಿತ್ರ ಆಚಾರ್ಯ, ಸುಮ ಯುವರಾಜ್, ಅನುಷಾ, ವಿದ್ಯಾ ಆಚಾರ್ಯ, ದಿವ್ಯ ಸುಧಾಕರ ಆಚಾರ್ಯ ಹಾಗೂ ಪ್ರಭಾಕರ್ ಆಚಾರ್ಯ ಸಹಕರಿಸಿದರು. ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಕೇಶವ ಆಚಾರ್ಯ, ಓಂ ಪ್ರಕಾಶ್ ಆಚಾರ್ಯ, ಸೌಭಾಗ್ಯ ಆಚಾರ್ಯ ಹಾಗೂ ವಾಣಿ ರಾವ್ ಸಹಕರಿಸಿದರು.
ವೈವಿಧ್ಯಮಯ ಖಾದ್ಯಗಳ ಸವಿ
‘ಶ್ರಾವಣದಲ್ಲಿ ಒಂದು ದಿನ’ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಮನೆಮನೆಗಳ ಕೈರುಚಿಯಲ್ಲಿ ನೀರ್ ಪುಂಡಿ, ಕ್ಯಾಪ್ಸಿಕಂ ಪಲ್ಯ, ಕ್ಯಾರೆಟ್ ಹಲ್ವ, ಕಾಶಿ ಹಲ್ವ, ಸಬ್ಬಸಿಗೆ ಇಡ್ಲಿ, ಹೆಸರು-ಬಟಾಟೆ ಗಸಿ, ರಾಗಿ ಮಣ್ಣಿ, ಪುಲಾವ್, ಪತ್ರೊಡೆ ಫ್ರೈ, ಅಂಬಡೆ, ಅಡ್ಕಬಾರೆ ಪಲ್ಯ, ತೊಂಡೆಕಾಯಿ ಎಲೆ ಚಟ್ನಿ, ಹುರುಳಿ ಚಟ್ನಿ, ಹುರುಳಿ-ಬಾಳೆಪೂಂಬೆ ಪಲ್ಯ, ಲಡ್ಡು, ಚಟ್ಟೆಸೊಪ್ಪಿನ ಪಲ್ಯ, ಶೇಮಿಗೆ-ತೋವೆ, ಅಕ್ಕಿ ಉಂಡೆ, ಕೆಸುವಿನ ಚಟ್ನಿ, ಬೆಳ್ಳುಳ್ಳಿ ಚಟ್ನಿ, ಗುಜರಾತಿ ಡೋಕ್ಲಾ, ಮಸಾಲಾ ವಡೆ, ಪುಳಿಯೋಗರೆ, ಉಪ್ಪಡ್ ಪಚ್ಚಿರ್, ಕೊಬ್ಬರಿ ಮಿಠಾಯಿ, ಬಾಳೆದಿಂಡಿನ ಪಲ್ಯ, ಮದ್ದೂರ್ ವಡೆ, ಚಿಗುರಿನ ಚಟ್ನಿ, ಚಟ್ಟಂಬಡೆ ಸೇರಿದಂತೆ ಹಲವು ಬಗೆಯ ಖಾದ್ಯಗಳಿದ್ದವು.
ಪ್ರತಿಯೊಂದು ಮನೆಯಿಂದ ಒಂದು ರುಚಿಯನ್ನು ತಯಾರಿಸಿ ತಂದು ಎಲ್ಲರೊಂದಿಗೆ ಹಂಚಿಕೊಂಡು ತಿನ್ನುವ ಮೂಲಕ ಆಹಾರ ಸಂಸ್ಕೃತಿಯ ವೈವಿಧ್ಯತೆಯನ್ನು ಪರಿಚಯಿಸುವ ಪ್ರಯತ್ನ ನಡೆಯಿತು.
ಮಹಿಳೆಯರು ಹಾಗೂ ಮಕ್ಕಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಶ್ವಕರ್ಮ ಸೇವಾ ಸಂಘ, ಆನೆಗುಂದಿ ಸಂಸ್ಥಾನ ಗುರುಸೇವಾ ಪರಿಷತ್, ವಿಶ್ವಜ್ಯೋತಿ ಮಹಿಳಾ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶ್ರಾವಣ ಮಾಸದ ಧಾರ್ಮಿಕ ಮಹತ್ವವನ್ನು ತಿಳಿದುಕೊಳ್ಳುವುದರೊಂದಿಗೆ ಮನೆಗಳ ಸಾಂಪ್ರದಾಯಿಕ ಆಹಾರಗಳನ್ನು ಪರಸ್ಪರ ಹಂಚಿಕೊಳ್ಳಲು, ಮಹಿಳೆಯರು ಮತ್ತು ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಲು ಹಾಗೂ ಸಮಾಜ ಬಾಂಧವರು ಒಂದೆಡೆ ಸೇರಲು ‘ಶ್ರಾವಣದಲ್ಲಿ ಒಂದು ದಿನ’ ಕಾರ್ಯಕ್ರಮ ಅವಕಾಶ ಕಲ್ಪಿಸಿತು