ಮಕ್ಕಳ ಭವಿಷ್ಯಕ್ಕಾಗಿ ಹೆತ್ತವರು ಶ್ರಮವಹಿಸಿ ದುಡಿಯುತ್ತಾರೆ. ಆ ಮೂಲಕ ಮಕ್ಕಳ ಭವಿಷ್ಯಕ್ಕೆ ಹೆತ್ತವರು ಬೆಳಕಾಗುತ್ತಾರೆ. ಅಂತಹ ಹೆತ್ತವರನ್ನು ವಿದ್ಯಾರ್ಥಿಗಳು ಯಾವತ್ತಿಗೂ ಮರೆಯಬಾರದು. ಅವರೇ ನಮಗೆ ನಿಜವಾದ ದೇವರು ಎಂಬ ಮನೋಭಾವ ನಮ್ಮಲ್ಲಿ ಯಾವತ್ತಿಗೂ ಇರಬೇಕು ಎಂದು ಖ್ಯಾತ ಚಿತ್ರನಟ, ರಂಗಭೂಮಿ ಕಲಾವಿದ ನವೀನ್ ಡಿ.ಪಡೀಲ್ ಹೇಳಿದರು.
ಬಿ.ಸಿ ರೋಡ್ ಹಾಗೂ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಎಂಐಟಿಇ ಟೆಕ್ನಿಕಲ್ ಆ್ಯಂಡ್ ಪ್ರೊಫೆಶನಲ್ ಕಾಲೇಜು ವತಿಯಿಂದ ಬಿ.ಸಿ ರೋಡ್ ನ ಸ್ಪರ್ಶ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಲಾದ “ಮೈಟ್ ಫೆಸ್ಟ್ 2ಕೆ26” ಉದ್ಘಾಟಿಸಿ ಅವರು ಮಾತನಾಡಿದರು.
ರಾಕೇಶ್ ಕುಮಾರ್ ಅವರ ನಿರಂತರ ಪರಿಶ್ರಮದ ಮೂಲಕ ಎಂಐಟಿಇ ಟೆಕ್ನಿಕಲ್ ಆ್ಯಂಡ್ ಪ್ರೊಫೆಶನಲ್ ಕಾಲೇಜು ಕಳೆದ ಹಲವು ವರ್ಷಗಳಿಂದ ವೃತ್ತಿಪರವಾದ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಹೇಳಿದ ಅವರು, ವಿದ್ಯೆ ನೀಡಿದ ಗುರುಗಳನ್ನು ಯಾವತ್ತಿಗೂ ಮರೆಯಬಾರದು ಹಾಗೂ ವಿದ್ಯಾಭ್ಯಾಸಕ್ಕೆ ಬರುವ ಮಕ್ಕಳು ಯಾವುದೇ ಕಾರಣಕ್ಕೂ ಜಾತಿ, ಧರ್ಮದ ಆಧಾರದಲ್ಲಿ ಇರದೆ ಅನ್ಯೋನ್ಯವಾಗಿ ಒಂದಾಗಿ ಬಾಳುವ ಮನೋಭಾವ ಬೆಳೆಸಬೇಕಿದೆ ಎಂದರು.
ಚಿತ್ರನಟಿ ಹಾಗೂ ರೂಪದರ್ಶಿ ಸವಿತಾ ಆಂಚನ್, ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಶುಭ ಹಾರೈಸಿದರು.
ಎಂಐಟಿಇ ಟೆಕ್ನಿಕಲ್ ಆ್ಯಂಡ್ ಪ್ರೊಫೆಶನಲ್ ಕಾಲೇಜಿನ ಅಧ್ಯಕ್ಷ ರಾಕೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕಿ ನಿಶ್ಮಿತ ರಾಕೇಶ್ ಕುಮಾರ್, ಸಂಸ್ಥೆಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಮುಖರಾದ ಅಶ್ರಫ್, ಗೀತಾ, ವಿದ್ಯಾರ್ಥಿ ಮುಖಂಡರಾದ ವಿಕ್ರಂ, ದಿಶಾ ಮುಂತಾದವರು ಉಪಸ್ಥಿತರಿದ್ದರು.
ಮಹಿಮಾ ಅವರು ಸ್ವಾಗತಿಸಿ ನಿರೂಪಿಸಿದರು. ಭವ್ಯಶ್ರೀ ಹಾಗೂ ಶಾಂತೇರಿ ಶೆಣೈ ಅತಿಥಿಗಳ ಪರಿಚಯ ಮಾಡಿದರು.
ಬಳಿಕ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧಾ ಕೂಟ ನೆರವೇರಿತು.