ಉತ್ತಮ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ದೃಢತೆಯ ಕೊರತೆ ಪ್ರಸಕ್ತ ದಿನಗಳಲ್ಲಿ ಎಲ್ಲ ಪೀಳಿಗೆಯವರಲ್ಲೂ ಕಂಡುಬರುತ್ತಿದ್ದು, ಹಲವು ಅಹಿತಕರ ಘಟನೆಗಳು ಕಣ್ಣಮುಂದೆಯೇ ನಡೆಯುತ್ತಿರುವುದನ್ನು ಕಾಣಬಹುದು. ಇದಕ್ಕೆ ಆಪ್ತಸಲಹೆ ಆಶಾಕಿರಣವಾಗಿದೆ ಎನ್ನುತ್ತಾರೆ ಬೆಂಗಳೂರಿನಲ್ಲಿರುವ ಆಪ್ತ ಸಲಹಾಕೇಂದ್ರದ ಟ್ರಸ್ಟಿ ಉದಯಶಂಕರ ಪದ್ಯಾಣ (ಆಪ್ತ ಸಲಹಾ ಕೇಂದ್ರ ಬೆಂಗಳೂರು ಉಚಿತ ಸಹಾಯವಾಣಿ ಸಂಖ್ಯೆ-6362055380 ) ಈ ಕುರಿತು ಅವರು ಬಂಟ್ವಾಳನ್ಯೂಸ್ ಗಾಗಿ ಬರೆದ ಲೇಖನ ಇಲ್ಲಿದೆ.
ವಿಭಕ್ತ ಕುಟುಂಬಗಳಿಂದಾಗಿ ಮನೆಗಳಲ್ಲಿ ಹಿರಿಯರಿಂದ ಸಿಗುವ ಮಾರ್ಗದರ್ಶನ ಕಡಿಮೆಯಾಗಿ ಅಥವಾ ಸಲಹೆ ಕೇಳುವ ತಾಳ್ಮೆ ಇಲ್ಲದೆ, ಆಪ್ತ ಸಲಹೆಗಳ ಅಗತ್ಯತೆ ಅನಿವಾರ್ಯವಾಗಿದೆ.
ಆಪ್ತಸಲಹೆ ಅಂದರೆ ಏನು?
ಆಪ್ತಸಲಹೆ ಅಂದರೆ ಸಾಮಾನ್ಯ ಸಲಹೆ ಅಲ್ಲ ಅಂದರೆ ತಂದೆ ಮಗನಿಗೆ ,ಹಿರಿಯರು ಕಿರಿಯರಿಗೆ, ಮೇಷ್ಟ್ರು ಮಕ್ಕಳಿಗೆ ಮಾಡುವಂತಹ ಸಲಹೆಗಳು ಆಪ್ತಸಲಹೆಯ ವ್ಯಾಪ್ತಿಗೆ ಬರುವುದಿಲ್ಲ.
ಇಂತಹ ಮಾರ್ಗದರ್ಶನ ಅಥವಾ ಸಾಮಾನ್ಯ ಸಲಹೆಗಳ ಸನ್ನಿವೇಶದಲ್ಲಿ ಒಬ್ಬರಿಗೊಬ್ಬರು ಇಷ್ಟೊತ್ತಿಗೆ ತಿಳಿದುಕೊಂಡಿದ್ದು ಅವರ ಬಗ್ಗೆ ಒಂದು ನಿಶ್ಚಿತ ಅಭಿಪ್ರಾಯವನ್ನು ಹೊಂದಿರುತ್ತಾರೆ. ಇವನು ಹೀಗೆ ಸರಿಯಾಗುವವನಲ್ಲ, ಈ ಪರಿಸ್ಥಿತಿ ಹೀಗೆ ಬದಲಾಗುವುದಿಲ್ಲ ಎನ್ನುವ ಪೂರ್ವಾಗ್ರಹದಲ್ಲಿ ಇರುವ ಕಾರಣ ಅವರ ಮಧ್ಯೆ ಯಾವುದೇ ಆಪ್ತಸಲಹೆ ಸಾಧ್ಯವಿಲ್ಲ. ಈ ತೆರನಾದ ಸಂವಹನವನ್ನು ಸಾಮಾನ್ಯ ಸಲಹೆ ಅಥವಾ ಮಾರ್ಗದರ್ಶನ ಎಂದು ಮಾತ್ರ ಹೇಳಬಹುದು.
“ಪ್ರಿಸ್ಕ್ರಿಪ್ಷನ್” ಅಥವಾ “ಅಡ್ವೈಸನ್ನು” ಆಪ್ತಸಲಹೆ ಎನ್ನಲು ಸಾಧ್ಯವಿಲ್ಲ.
ಮತ್ತೆ ಆಪ್ತ ಸಲಹೆ ಮಾರ್ಗದರ್ಶನವೂ ಅಲ್ಲ ಅಥವಾ ಇಂಗ್ಲಿಷ್ನಲ್ಲಿ ಏನು “ಡೈರೆಕ್ಷನ್” ಅಂತ ಹೇಳ್ತೇವೆ ಅದೂ ಅಲ್ಲ.
ಆಪ್ತ ಸಲಹೆಯು ನಮಗೆ ಪರಿಚಯವಿಲ್ಲದ ಮೂರನೇ ನುರಿತ ಆಪ್ತ ಸಲಹಾಕಾರನೊಂದಿಗೆ ಸಂವಾದದಿಂದ ಶುರುವಾಗುತ್ತದೆ. ಇದರಲ್ಲಿ ಪೂರ್ಣಪ್ರಮಾಣದಲ್ಲಿ ಗೋಪ್ಯತೆಯನ್ನು ಕಾಪಾಡಲಾಗುತ್ತದೆ ಮತ್ತು “ನಾನ್ ಜಡ್ಜಮೆಂಟಲ್” ಅಪ್ರೋಚ್ ಇರುತ್ತದೆ. ಈ ವ್ಯವಸ್ಥೆಯಲ್ಲಿ ತೊಂದರೆಗೊಳಗಾದವರು ಯಾವುದೇ ಮುಜುಗರವಿಲ್ಲದೆ ತನ್ನ ಕಷ್ಟ-ಸುಖವನ್ನು ಆಪ್ತ ಸಲಹಾಕಾರನೊಂದಿಗೆ ಮುಕ್ತವಾಗಿ ಚರ್ಚಿಸಬಹುದಾಗಿದೆ.
ಆಪ್ತ ಸಮಾಲೋಚನೆಯಲ್ಲಿ ತನ್ನ ತೊಂದರೆಯನ್ನು ,ಕಷ್ಟವನ್ನು ಸರಿಪಡಿಸಿಕೊಳ್ಳುವ ಬಾಧ್ಯತೆ, ಜವಾಬ್ದಾರಿ ಯಾಚಕನದ್ದೇ ಆಗಿರುತ್ತದೆ. ಇದರಿಂದಾಗಿ ತಾನೇ ಕಂಡುಕೊಂಡ ಪರಿಹಾರವನ್ನು ಅನುಷ್ಠಾನಗೊಳಿಸಲು ಅವನು ಹೆಚ್ಚು ಉತ್ಸುಕನಾಗಿರುತ್ತಾನೆ .
ಆಪ್ತಸಲಹೆಯ ವೈಶಿಷ್ಟ್ಯತೆಗಳು ಏನು?
ಆಪ್ತಸಲಹೆ ಯಾರಿಗೆ ಬೇಕಾಗಿದೆ?
ವ್ಯಕ್ತಿಗಳ ಪರಸ್ಪರ ಘರ್ಷಣೆಗಳಿಂದ ಆತಂಕ ಖಿನ್ನತೆ ತಲೆದೋರುತ್ತದೆ. ಇಂತಹ ಸಂದರ್ಭಗಳಲ್ಲಿ 15 ದಿನಗಳಿಗಿಂತಲೂ ಹೆಚ್ಚು ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ತೊಂದರೆ ಇದ್ದರೆ ಅವರು ಆಪ್ತ ಸಲಹಾ ಕಾರರನ್ನು ಭೇಟಿಯಾಗುವುದು ಉತ್ತಮ.
ಇದು ಕುಟುಂಬದ ಮಧ್ಯೆಯಿರುವ ವೈಮನಸ್ಸು, ಉದ್ಯೋಗದಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ಆದ ಭಿನ್ನಾಭಿಪ್ರಾಯಗಳಿಂದ ಇರಬಹುದು ಅಥವಾ ವ್ಯವಹಾರದಲ್ಲಿ ಆದಂತಹ ತೊಂದರೆಗಳಿಂದ ಇರಬಹುದು .
ಯಾವುದೇ ಕಾರಣಕ್ಕೆ ಇಂತಹ ಆತಂಕಕ್ಕೊಳಗಾಗಿದ್ದರೆ ಆಪ್ತ ಸಲಹೆ ಪಡೆಯುವುದು ಯೋಗ್ಯ.
ಆಪ್ತ ಸಲಹಾಕಾರರು ತಮ್ಮೊಂದಿಗೆ ಚರ್ಚಿಸಿದ ವಿಷಯಗಳನ್ನು ಗೌಪ್ಯವಾಗಿ ಇಡುತ್ತಾರೆ .ಅದು ಅವರ ವೃತ್ತಿ ಧರ್ಮ. ಇದರಿಂದಾಗಿ ತೊಂದರೆಗೊಳಗಾದವರು ತನ್ನ ಎಲ್ಲಾ ಸಮಸ್ಯೆಗಳನ್ನು ಏನೂ ಹಿಂಜರಿಕೆ ಇಲ್ಲದೆ ಆಪ್ತ ಸಲಹಾಕಾರನಿಗೆ ತಿಳಿಸುತ್ತಾನೆ.
ಈ ತರಹದಲ್ಲಿ ಪೂರ್ತಿ ವಿವರಗಳನ್ನು ಸಾಧಾರಣವಾಗಿ ತನ್ನ ಸಂಬಂಧಿಕರಲ್ಲಿ ಅಥವಾ ಸ್ನೇಹಿತರಲ್ಲಿ ಯಾರೂ ಹೇಳಿಕೊಳ್ಳುವುದಿಲ್ಲ.
ಯಾವ ಸಂದರ್ಭದಲ್ಲಿ ಮನೋವೈದ್ಯರನ್ನು ಭೇಟಿಯಾಗಬೇಕು?
ಕೆಲವು ಸಂದರ್ಭಗಳಲ್ಲಿ ಆತಂಕ ಖಿನ್ನತೆ ಉಲ್ಬಣಗೊಂಡು ವ್ಯಕ್ತಿಯು ಆಪ್ತಸಮಾಲೋಚನೆ ಪಡೆಯಲು ತಯಾರಿರುವುದಿಲ್ಲ.
ಅಂತಹ ಸಂದರ್ಭದಲ್ಲಿ ಆಪ್ತ ಸಲಹಾಕಾರರು ರೋಗಿಯನ್ನು ಮಾನಸಿಕ ವೈದ್ಯರ ಸಲಹೆ ಪಡೆಯುವಂತೆ ಸೂಚಿಸುತ್ತಾರೆ.
ಚಿತ್ತವೈಕಲ್ಯತೆ (ಸ್ಕಿಜೋಫ್ರೇನಿಯಾ) , ದ್ವಿಧ್ರುವಿ ಅಸ್ವಸ್ಥತೆ /ಉನ್ಮಾದದ ಖಿನ್ನತೆ (ಬೈಪೋಲಾರ್) ಅಥವಾ ಆತ್ಮಹತ್ಯೆ ಯೋಚನೆಯಂತಹ ಸಂದರ್ಭಗಳಲ್ಲಿ ಇಂತಹ ಸಲಹೆಗಳನ್ನು ಪಡೆಯುವುದು ಸೂಕ್ತ. ಈ ಸಂದರ್ಭಗಳಲ್ಲಿ ಅವರಿಗೆ ಔಷಧೀಯ ಉಪಚಾರದ ಅಗತ್ಯವೂ ಇರಬಹುದು.
ತಡೆಗಟ್ಟುವ ವಿಧಾನ ಏನು?
ಉತ್ತಮ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ದೃಢತೆ ಗಾಗಿ ಮನೆಯಲ್ಲಿ ಉತ್ತಮ ಸಂಸ್ಕಾರ, ಶಿಸ್ತು ಮನೆಕೆಲಸದಲ್ಲಿ ಮಕ್ಕಳನ್ನು ಸೇರಿಸಿಕೊಳ್ಳುವುದು. ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದು, ಸಾಮಾಜಿಕ ಪರಿಜ್ಞಾನದಿಂದ ನಡೆದುಕೊಳ್ಳುವುದು, ಪಂಚ ಯಜ್ಞಗಳ ಆಚರಣೆಯ ಜೀವನಶೈಲಿ ತುಂಬಾ ಮುಖ್ಯ.
ಮುಖ್ಯವಾಗಿ ಹಿರಿಯರಿಗೆ ಗೌರವ , ಪ್ರಕೃತಿಯೊಂದಿಗೆ ಬದುಕುವುದು ,ದೇವರ ಮೇಲೆ ಭಕ್ತಿ ,ಸಮಾಜಸೇವೆ ಈ ರೀತಿಯಾದ ನಮ್ಮ ಪಂಚ ಋಣಗಳನ್ನು ತೀರಿಸುತ್ತಾ ಜೀವಿಸುವುದರಿಂದ ಉತ್ತಮ ಸಂಸ್ಕಾರ ಬೆಳೆದು ಮಾನಸಿಕ ತೊಂದರೆಯಿಂದ ಆದಷ್ಟು ಮಟ್ಟಿಗೆ ಪ್ರಭಾವವಾಗದೆ ಉಳಿಯುವ ಸಾಧ್ಯತೆ ಇದೆ.