ಬಂಟ್ವಾಳ: ಪೊಲೀಸ್ ಅಧಿಕಾರಿಯೊಬ್ಬರ ಸಮಯಪ್ರಜ್ಞೆಯಿಂದ ಅಪಘಾತ ನಡೆದ ಜಾಗದಲ್ಲಿ ವಾಹನದಲ್ಲಿ ಸಿಲುಕಿದವರ ಪ್ರಾಣರಕ್ಷಣೆಯಾಗಿದೆ. ಬಂಟ್ವಾಳ ಸಮೀಪ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಎಂಬಲ್ಲಿ ಪೆಟ್ರೋಲ್ ಬಂಕ್ ಸಮೀಪ ನಡೆದ ಅಪಘಾತದ ವೇಳೆ ವಿಟ್ಲ ಪೊಲೀಸ್ ಎಸ್.ಐ. ರಾಮಕೃಷ್ಣ ಮತ್ತು ಸಿಬ್ಬಂದಿ ಅವರ ಸಮಯಪ್ರಜ್ಞೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ದೊರಕಿದೆ.
ಸೂರಿಕುಮೇರು ಪೆಟ್ರೋಲ್ ಬಂಕ್ ಬಳಿಯ ಹೋಟೆಲ್ ಮುಂಭಾಗದಲ್ಲಿ ಕಾರೊಂದು ಜು.19ರ ಭಾನುವಾರ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿತು. ಕಾರಿನೊಳಗೆ ಮಗು, ಮಹಿಳೆ ಹಾಗೂ ಚಾಲಕ ಸಿಲುಕಿಕೊಂಡಿದ್ದರು. ಕ್ಷಣಾರ್ಧದಲ್ಲಿ ನೆರವು ಸಿಗದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇತ್ತು.
ಅದೇ ಸಮಯದಲ್ಲಿ ಸಮೀಪದಲ್ಲೇ ಮತ್ತೊಂದು ಪ್ರಮುಖ ಪ್ರಕರಣದ ಸಂಬಂಧ ಕರ್ತವ್ಯ ನಿರ್ವಹಿಸುತ್ತಿದ್ದ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಹಾಗೂ ಸಿಬ್ಬಂದಿ ಕರಣಾಕರ ಅವರಿಗೆ ಅಪಘಾತದ ಭಾರೀ ಶಬ್ದ ಕೇಳಿ ಬಂದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದರು.
ಕಾರಿನೊಳಗೆ ಸಿಲುಕಿದ್ದ ಮಗು, ಮಹಿಳೆ ಹಾಗೂ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸುವಲ್ಲಿ ಯಶಸ್ವಿಯದರು. ಎಸ್‌ಐ ರಾಮಕೃಷ್ಣ ಅವರು ಈ ಸಂದರ್ಭದಲ್ಲಿ ಅಸಾಧಾರಣ ಸಮಯಪ್ರಜ್ಞೆ ಮತ್ತು ಧೈರ್ಯ ಪ್ರದರ್ಶಿಸಿದರು. ಅಳುತ್ತಿದ್ದ ಪುಟ್ಟ ಮಗುವನ್ನು ತಮ್ಮ ಕೈಯಲ್ಲಿ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಕಂಡ ಸಾರ್ವಜನಿಕರು ಪೊಲೀಸ್ ಅಧಿಕಾರಿಯ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣದ ರಕ್ಷಣಾ ಕಾರ್ಯವೇ ಅವರ ಜೀವ ಉಳಿಯಲು ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಈ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ., “ಕರ್ತವ್ಯದ ಜೊತೆ ಮಾನವೀಯತೆ ಮೆರೆದ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಪೊಲೀಸ್ ಇಲಾಖೆಯ ಮೇಲಿನ ಜನರ ವಿಶ್ವಾಸ ಬಲಗೊಂಡಿದೆ.