—-ಎಸ್ ನಾವೂರ್
ಒಂದು ಕಾಲ ಇತ್ತು. ಊರಿನ ಹೆಸರು ಎತ್ತರಕ್ಕೆ ಏರಿದರೆ ಸಾಕು, ಇಡೀ ಊರೇ ಖುಷಿಪಡುತ್ತಿದ್ದ ಕಾಲ.
ಆಗ ಕ್ರೀಡೆ ಎಂದರೆ ಜರ್ಸಿ ಮೇಲಿನ ಹೆಸರಾಗಿರಲಿಲ್ಲ, ಎದೆಯೊಳಗಿನ ಊರಿನ ಹೆಸರಾಗಿತ್ತು. ಗದ್ದೆ-ಬಯಲಿನಲ್ಲೋ, ಶಾಲೆಯ ಮೈದಾನದಲ್ಲೋ ಒಂದು ಪಂದ್ಯ ಗೆದ್ದರೆ ಇಡೀ ಊರು ಗೆದ್ದಂತೆ ಸಂಭ್ರಮಿಸುತ್ತಿತ್ತು. ಸೋತರೆ ಇಡೀ ಊರು ಹೆಗಲ ಮೇಲೆ ಕೈ ಹಾಕಿ ಸಮಾಧಾನ ಹೇಳುತ್ತಿತ್ತು. ಅಲ್ಲಿ ಹಣವಿರಲಿಲ್ಲ, ಕ್ಯಾಮೆರಾ ಇರಲಿಲ್ಲ, ಆದರೆ ಮನಸ್ಸುಗಳನ್ನು ಬೆಸೆಯುವ ಒಗ್ಗಟ್ಟಿತ್ತು. ಕ್ರೀಡೆಯು ಒಂದು ಸಂಸ್ಕೃತಿಯಾಗಿತ್ತು.
ಕಾಲ ಕ್ರಮೇಣ ಚಿತ್ರ ಬದಲಾಯಿತು. ಕ್ರೀಡೆ ಸಂಸ್ಕೃತಿಯಿಂದ ವ್ಯವಹಾರವಾಗಿ ರೂಪು ಪಡೆಯಿತು. ಈಗ ಮೈದಾನಕ್ಕೊಂದು ಬೆಲೆ, ಆಟಗಾರನಿಗೊಂದು ಬೆಲೆ, ಪ್ರಸಾರಕ್ಕೊಂದು ಬೆಲೆ. ಗೆಲ್ಲುವುದು ಊರಿಗಾಗಿ ಅಲ್ಲ, ಕಂಪನಿಗಾಗಿ, TRP ಗಾಗಿ, ಹರಾಜಿನ ಕೋಟಿಗಾಗಿ. ಲಾಭ-ನಷ್ಟದ ಲೆಕ್ಕಾಚಾರದ ನಡುವೆ, ಕೆಲವೊಮ್ಮೆ ಮೋಸದ ಯೋಜನೆಗಳ ನಡುವೆ,
ಕೇವಲ ವ್ಯವಹಾರವಾಗಿ ಬೆಳೆದು ನಿಂತಿದೆ.
ಈ ಬದಲಾವಣೆಯ ನಡುವೆಯೇ ನಮಗೆ ದಾರಿ ತೋರುವವರು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್.
1936, ಬರ್ಲಿನ್ ಒಲಿಂಪಿಕ್ಸ್. ಹಿಟ್ಲರನ ಜರ್ಮನಿಯ ಎದುರು ಫೈನಲ್. ಭಾರತ 8-1 ರಿಂದ ಜರ್ಮನಿಯನ್ನು ಧೂಳೀಪಟ ಮಾಡಿತು. ಧ್ಯಾನ್ ಚಂದ್ ಅವರ ಸ್ಟಿಕ್ ನಲ್ಲಿ ಮೋಡಿ ಇದೆ ಎಂದು ಶಂಕಿಸಿ ಅವರ ಸ್ಟಿಕ್ ಅನ್ನು ಮುರಿದು ಪರೀಕ್ಷಿಸಲಾಯಿತು. ಎದುರಾಳಿ ಆಟಗಾರರು ಅವರ ಹಲ್ಲನ್ನೇ ಮುರಿದರು. ಆದರೂ ಅವರು ರಕ್ಷಾ ಪಾದುಕೆ ಇಲ್ಲದೆಯೂ, ಗಾಯದ ನೋವಿನಲ್ಲೂ ಪಂದ್ಯ ಗೆಲ್ಲಿಸಿಕೊಟ್ಟರು.
ಗೆಲುವಿನ ನಂತರ ಹಿಟ್ಲರ್ ಅವರಿಗೆ ಆಮಿಷವೊಡ್ಡಿದ – “ನೀನು ಜರ್ಮನಿ ಪರ ಆಡು, ನಮ್ಮ ಸೇನೆಯಲ್ಲಿ ನಿನಗೆ ದೊಡ್ಡ ಹುದ್ದೆ ಕೊಡುತ್ತೇವೆ.”
ಅದಕ್ಕೆ ಬ್ರಿಟಿಷ್ ಭಾರತದ ಸಾಮಾನ್ಯ ಸೈನಿಕ, ಕೂಲಿ ಕಾರ್ಮಿಕನ ಮಗನಾದ ಧ್ಯಾನ್ ಚಂದ್ ಹೇಳಿದ ಉತ್ತರ ಇತಿಹಾಸವಾಯಿತು:
“ನಾನು ಸಾಮಾನ್ಯ ಕೂಲಿ ಕೆಲಸಗಾರನಿರಬಹುದು, ಆದರೆ ನಾನು ಆಡುವುದು ನನ್ನ ಭಾರತಕ್ಕಾಗಿ ಮಾತ್ರ.”
ಇದು ಕೇವಲ ಕ್ರೀಡಾ ಸ್ಪೂರ್ತಿಯಲ್ಲ, ಇದು ಸ್ವಾಭಿಮಾನದ ರಾಷ್ಟ್ರೀಯತೆ. ಘೋಷಣೆಯಲ್ಲ, ನಿಲುವಿನ ರಾಷ್ಟ್ರೀಯತೆ. ಹಣ, ಹುದ್ದೆ, ಸೌಕರ್ಯಗಳ ಆಮಿಷದ ಮುಂದೆಯೂ ತನ್ನ ಮಣ್ಣನ್ನು ಮಾರಿಕೊಳ್ಳದ ನಿಲುವು.
ಇಂದು ನಾವು ಮತ್ತೆ ಅದೇ ಪ್ರಶ್ನೆಯ ಮುಂದೆ ನಿಂತಿದ್ದೇವೆ. ಕ್ರೀಡೆ ಎಂದರೆ ಏನು? ನಮ್ಮನ್ನು ಬೆಸೆಯುವ ಸಂಸ್ಕೃತಿಯೋ ಅಥವಾ ಮಾರುವ ಸರಕೋ?
ಧ್ಯಾನ್ ಚಂದ್ ಅವರು ನಮಗೆ ಕೊಟ್ಟ ಸಂದೇಶ ಸ್ಪಷ್ಟ – ನಿಜವಾದ ಆಟಗಾರ ಮೈದಾನದಲ್ಲಿ ಮಾತ್ರ ಗೆಲ್ಲುವುದಿಲ್ಲ, ಮಾರಾಟವಾಗದೆ ಉಳಿದಾಗಲೂ ಗೆಲ್ಲುತ್ತಾನೆ.