ಕುಂಬಳೆ ಶ್ರೀಧರ ರಾವ್ ಸ್ಮೃತಿಯ ಕೃತಿ ಶ್ರೀಧರಯಾನ ಅನಾವರಣ ಹಾಗೂ ಸ್ಮೃತಿ ಗೌರವ ಕಾರ್ಯಕ್ರಮ ಉಪ್ಪಿನಂಗಡಿಯಲ್ಲಿ ನಡೆಯಿತು.
ಯಕ್ಷಗಾನ ಕಲೆಯನ್ನು ಪ್ರೇಕ್ಷಕರ ಮಟ್ಟಕ್ಕೆ ತರಬೇಡಿ..ಪ್ರೇಕ್ಷಕರನ್ನು ಯಕ್ಷಗಾನ ಕಲೆಯ ಮಟ್ಟಕ್ಕೆ ಏರಿಸಿ..
ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಅವರು ಒಂದೇ ವಾಕ್ಯದಲ್ಲಿ ನೀಡಿದ ಸಂದೇಶವಿದು.
ಉಪ್ಪಿನಂಗಡಿ ಶ್ರೀ ಸುಧೀಂದ್ರ ಕಲಾ ಮಂದಿರದಲ್ಲಿ ಜುಲೈ 5ರ ಭಾನುವಾರ ಮಧ್ಯಾಹ್ನ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರ ಸ್ಮರಣೆಯ ಸಂದರ್ಭ, ಸ್ಮೃತಿ ಗೌರವ ಸ್ವೀಕರಿಸಿದ ಅರ್ಥಧಾರಿ, ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಒಂದೇ ವಾಕ್ಯದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಹಂಪಿ ಕನ್ನಡ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಮೋಹನ ಕುಂಟಾರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾವಿದರಿಗೂ ಸಮಾಜಕ್ಕೂ ಹಿಂದೆ ಸಾಮಾಜಿಕ ಕಂದರವಿತ್ತು. ಆದರೆ ಈಗ ಹಾಗಿಲ್ಲ. ಕಲಾವಿದರಿಗೆ ಮನ್ನಣೆ ದೊರಕುತ್ತಿದೆ. ಈಗಿನ ಕಲಾವಿದರು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಎದುರಿಸುತ್ತಿದ್ದಾರೆ ಎಂದು ಪ್ರಸ್ತುತ ಸನ್ನಿವೇಶದ ಕುರಿತು ವಿವರಿಸಿದ್ದರು.
ನಾ.ಕಾರಂತ ಪೆರಾಜೆ ಸಂಪಾದಕತ್ವದ ಶ್ರೀಧರಯಾನ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಚಿನ್ನಪ್ಪ ಗೌಡ, ವ್ಯಕ್ತಿ, ಕಲಾವಿದ, ಕಲೆಯ ಸಂಬಂಧಗಳ ಕುರಿತು ಮಾತನಾಡಿ, ಕಲೆ ಮತ್ತು ಕಲಾವಿದ ಒಂದಾದರೆ, ವ್ಯಕ್ತಿ ಮತ್ತೊಂದು. ವ್ಯಕ್ತಿಯಾಗಿಯೂ ಕಲೆಯಲ್ಲಿ ತೊಡಗಿಸಿಕೊಂಡು ಕಲಾವಿದರಾಗಿ ಏಕೀಭವಿಸಿ ಜೀವಿಸಿದವರು ಕುಂಬಳೆ ಶ್ರೀಧರ ರಾಯರು ಎಂದರು.
ಉಪ್ಪಿನಂಗಡಿಯ ವೈದ್ಯ ಡಾ.ಸುಪ್ರೀತ್ ಲೋಬೊ ಮಾತನಾಡಿ, ಶ್ರೀಧರ ರಾವ್ ಜೊತೆಗಿನ ಒಡನಾಟ ಸ್ಮರಿಸಿದರು. ವಿಶ್ರಾಂತ ಪ್ರಾಧ್ಯಾಪಕ ಪೂವಪ್ಪ ಶೆಟ್ಟಿ ಅಳಿಕೆ ಕುಂಬಳೆ ಶ್ರೀಧರ ರಾವ್ ಸ್ಮರಣೆ ಮಾಡಿದರು.
ಈ ಸಂದರ್ಭ ಸ್ಮೃತಿ ಗೌರವ ಕಾರ್ಯಕ್ರಮ ನಡೆಯಿತು. ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಅವರು ಗೌರವ ಸ್ವೀಕರಿಸಿದರು. ದೇವಿಪ್ರಸಾದ ಕುಂಬ್ಳೆ ಸನ್ಮಾನಪತ್ರ ವಾಚಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಅವರು, ಕಲೆಯನ್ನು ಯಾವತ್ತೂ ಪ್ರೇಕ್ಷಕರ ಮಟ್ಟಕ್ಕೆ ಇಳಿಸಬೇಡಿ, ಪ್ರೇಕ್ಷಕರನ್ನು ಕಲೆಯ ಮಟ್ಟಕ್ಕೆ ಏರಿಸಿ ಎಂದರು.
ಶ್ರೀಧರ ರಾವ್ ಪತ್ನಿ ಸುಲೋಚನಾ ಶ್ರೀಧರ ರಾವ್, ಮಕ್ಜಳಾದ ಗಣೇಶ ಪ್ರಸಾದ ಕುಂಬ್ಳೆ, ದೇವಿಪ್ರಸಾದ ಕುಂಬ್ಳೆ ಉಪಸ್ಥಿತರಿದ್ದರು. ಕುಂಬಳೆ ಶ್ರೀಧರ ರಾವ್ ಸಹೋದರ ಗೋಪಾಲ ಕುಂಬ್ಳೆ ಸ್ವಾಗತಿಸಿದರು. ಹಿರಿಯ ಕಲಾವಿದ, ಪತ್ರಕರ್ತ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ಪ್ರಸಾದ ಕುಂಬ್ಳೆ ವಂದಿಸಿದರು.