ಬಂಟ್ವಾಳ ಪುರಸಭಾ ವ್ಯಾಪ್ತಿಯ ವಿವಿಧೆಡೆ ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಹುಲ್ಲು, ಪೊದೆಗಳಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದು, ಇದನ್ನು ನಿವಾರಿಸಲು ಪುರಸಭೆಯಲ್ಲಿ ಹಣವಿಲ್ಲ ಎಂದು ಪುರಸಭಾ ಮಾಜಿ ಸದಸ್ಯರು ಶಾಸಕರ ಬಳಿ ದೂರು ನೀಡಿದ ಹಿನ್ನೆಲೆ ಶಾಸಕ ರಾಜೇಶ್ ನಾಯ್ಕ್ ವೈಯಕ್ತಿಕ ಖರ್ಚಿನಿಂದ ನೆರವಾಗಿದ್ದಾಗಿ ಶಾಸಕರ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಪುರಸಭಾ ಮಾಜಿ ಸದಸ್ಯರುಗಳ ಸಹಕಾರಿಂದ ಕಾರ್ಮಿಕರನ್ನು ನಿಯೋಜಿಸಿ ತೆರವು ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ರಸ್ತೆ ಬದಿಗಳಲ್ಲಿ ಹುಲ್ಲು ಹಾಗೂ ಪೊದೆಗಳು ಬೆಳೆದು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿತ್ತು. ಹಲವು ಕಡೆ ವಾಹನಗಳ ಸಂಚಾರಕ್ಕೂ ಅಡಚಣೆಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ, ಪೊದೆಗಳ ನಡುವೆ ಹಾವು ಸೇರಿದಂತೆ ವಿಷಜಂತುಗಳು ಸೇರಿಕೊಳ್ಳುವ ಸಾಧ್ಯತೆಯಿಂದ ಸ್ಥಳೀಯರಲ್ಲಿ ಆತಂಕ ಕುರಿತು ಪುರಸಭಾ ಮಾಜಿ ಸದಸ್ಯರು ಹಾಗೂ ಸಾರ್ವಜನಿಕರಾದ ವಿದ್ಯಾವತಿ ಪ್ರಮೋದ್ ಕುಮಾರ್, ಚೈತನ್ಯ ಗಣೇಶ್ ದಾಸ್, ಜಯಂತಿ, ದೇವಕಿ, ಶಶಿಕಲಾ ಸೇರಿದಂತೆ ಹಲವರು ಶಾಸಕರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು. ರಸ್ತೆ ಬದಿಯ ಹುಲ್ಲು ಹಾಗೂ ಪೊದೆಗಳನ್ನು ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎಂದು ಶಾಸಕರಲ್ಲಿ ಅವರು ಆರೋಪಿಸಿದ್ದರು.