ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆಮಾಡ ಎಂಬಲ್ಲಿ ಹಾಡಹಗಲೇ ಬೈಕ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದು ತಲವಾರು ತೋರಿಸಿ, ಬೆದರಿಸಿ, ಅವರ ಬಳಿಯಿದ್ದ 8.5 ಲಕ್ಷ ರೂ ನಗದನ್ನು ದೋಚಿದ ಘಟನೆ ಗುರುವಾರ ನಡೆದಿದೆ.
ಪೊಲೀಸರು ನೀಡಿರುವ ಪ್ರಕಟಣೆಯ ಪ್ರಕಾರ ವಿವರ ಹೀಗಿದೆ.
ಮಂಗಳೂರಿನ ಕಣ್ಣೂರು ಎಂಬಲ್ಲಿರುವ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟದ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಯ್ಯದಿ (40) ಎಂಬವರು, ತನ್ನ ಸಂಸ್ಥೆಯ ವ್ಯವಹಾರದ ಹಣವನ್ನು ವಿವಿಧ ಅಂಗಡಿಗಳಿಂದ ಸಂಗ್ರಹಿಸಿಕೊಂಡು ಬರುವ ಸಲುವಾಗಿ ಗುರುವಾರ ಬೈಕ್ ನಲ್ಲಿ ತೆರಳಿದ್ದರು. ಹಲವು ಅಂಗಡಿಗಳಿಂದ ನಗದು ಹಣವನ್ನು ಸಂಗ್ರಹಿಸಿ, ಬಂಟ್ವಾಳ ಕಕ್ಕೆಪದವಿನಿಂದ ಪಾಣೆಮಂಗಳೂರಿಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ, ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ, ಬಂಟ್ವಾಳ ಮಣಿನಾಲ್ಕೂರು ಮುಲ್ಕಾಜೆಮಾಡ ಎಂಬಲ್ಲಿ ತಲುಪಿದ ವೇಳೆ ಘಟನೆ ನಡೆದಿದೆ.
ಎರಡು ಬೈಕ್ ಗಳಲ್ಲಿ ಬಂದ ನಾಲ್ಕು ಜನ ಅಪರಿಚಿತರು, ಮಯ್ಯದಿಯವರಿಗೆ ತಲವಾರು ತೋರಿಸಿ, ಬೆದರಿಸಿ ಅವರ ಬಳಿಯಿದ್ದ 8,52,000 ರೂ ನಗದು ಹಣವನ್ನು ಸುಲಿಗೆ ನಡೆಸಿ ಪರಾರಿಯಾಗಿರುತ್ತಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.