
ಮಂಗಳೂರು: ಬುಧವಾರ ನಸುಕಿನ ಜಾವ ನಡೆದ ಘಟನೆಯಲ್ಲಿ ಮಳೆಯಿಂದ ಧರೆ ಮನೆಗೆ ಬಿದ್ದು, ಮನೆ ಕುಸಿದು ಅದರಡಿಯಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.
ಅನಾಮಿಕ ಚೌರಾಸಿಯ (8), ಪರಿ (4), ಶಾಂತಾ (46) ಮೃತಪಟ್ಟರೆ, ಅಗ್ನಿಶಾಮಕ ದಳ ಮತ್ತು ಸಾರ್ವಜನಿಕರು ಸೇರಿ ಮಾಡಿದ ರಕ್ಷಣಾ ಕಾರ್ಯದಲ್ಲಿ ಅಲ್ಕಾ (14), ಅನುಷಾ (11), ಬಾಲಕೃಷ್ಣ (48) ಅವರನ್ನು ಸುರಕ್ಷಿತವಾಗಿ ಹೊರಗೆ ತೆಗೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮೂಲತ ಬಿಹಾರ ರಾಜ್ಯದವರಾಗಿದ್ದು, ಪ್ರಸ್ತುತ ಕಂಕನಾಡಿ ಗ್ರಾಮದ, ಕಂಕನಾಡಿ ಪೊಲೀಸ್ ಠಾಣಾ ಹಿಂಭಾಗದಲ್ಲಿ ಕಳೆದ 20 ವರ್ಷಗಳಿಂದ ಈ ಕುಟುಂಬ ವಾಸ ಮಾಡಿಕೊಂಡಿದೆ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಸಹಿತ ಅಧಿಕಾರಿಗಳು ಭೇಟಿ ನೀಡಿದರು.

ನಾಗೂರಿ ದುರಂತ: ಸಚಿವ ಖಾದರ್ ದೆಹಲಿ ಪ್ರವಾಸ ಮೊಟಕು
ನಗರದ ನಾಗೂರಿಯಲ್ಲಿ ಮನೆ ಕುಸಿದು ಮೂವರು ಸಾವನ್ನಪ್ಪಿದ ಘಟನೆಯ ಹಿನ್ನಲೆಯಲ್ಲಿ ದೆಹಲಿ ಪ್ರವಾಸದಲ್ಲಿರುವ ಆರೋಗ್ಯ ಸಚಿವ ಯು ಟಿ ಖಾದರ್ ಅವರು ತಮ್ಮ ಭೇಟಿಯನ್ನು ಮೊಟಕುಗೊಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಸಚಿವರು, ತ್ವರಿತ ಪರಿಹಾರ ಕ್ರಮಗಳಿಗೆ ಸೂಚಿಸಿದರು.
ಗಾಯಾಳುಗಳಿಗೆ ಸರಕಾರದ ವತಿಯಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ಹಾಗೂ ಮೃತರ ಕುಟುಂಬದವರಿಗೆ ಇಂದೇ ಪರಿಹಾರ ಮೊತ್ತ ನೀಡಲು ಅವರು ನಿರ್ದೇಶಿಸಿದ್ದಾರೆ.ಸಚಿವರು ಇಂದು ಮಧ್ಯಾಹ್ನ ಮಂಗಳೂರು ತಲುಪಲಿದ್ದಾರೆ.

ಮಂಗಳೂರು ಕಂಕನಾಡಿ ಸಮೀಪ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ತಡೆಗೋಡೆ ಕುಸಿದು ಮನೆ ಮೇಲ್ಛಾವಣಿಗೆ ಬಿದ್ದ ಪರಿಣಾಮ ಓರ್ವ ಮಹಿಳೆ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟ ದುರ್ಘಟನೆ ಅತ್ಯಂತ ವಿಷಾದನೀಯವಾಗಿದೆ. ಈ ದುರಂತಕ್ಕೆ ಸಚಿವ ಯು.ಟಿ. ಖಾದರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಆರೋಗ್ಯ ಇಲಾಖೆಯ ವಿವಿಧ ಸಭೆಗಳಲ್ಲಿ ಭಾಗವಹಿಸಲು ದೆಹಲಿಗೆ ತೆರಳಿರುವ ಸಚಿವರು, ಈ ದುಃಖದ ಸುದ್ದಿ ತಿಳಿದ ತಕ್ಷಣ ಮಂಗಳೂರು ಕಡೆಗೆ ಪ್ರಯಾಣಿಸಲು ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಬಳಿ ಮಾತನಾಡಿರುವ ಸಚಿವ ಖಾದರ್ ಗಾಯಾಳುಗಳ ಚಿಕಿತ್ಸೆಗೆ ಸರಕಾರದಿಂದಲೇ ವೆಚ್ಚ ಭರಿಸಲು,ಮೃತಪಟ್ಟ ಕುಟುಂಬದವರಿಗೆ ಇಂದೇ ಪರಿಹಾರ ಮೊತ್ತ ನೀಡಲು ಸೂಚನೆ ನೀಡಿದ್ದಾರೆ.ಅಗ್ನಿಶಾಮಕ ಹಾಗೂ ತುರ್ತು ಸೇವಾ ದಳದ ಸಿಬ್ಬಂದಿಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಮನೆಯಲ್ಲಿ ಸಿಲುಕಿರುವ ಮೃತದೇಹಗಳನ್ನು ಮೇಲಕ್ಕೆತ್ತುವ ಕಾರ್ಯವೂ ಮುಂದುವರಿದಿದೆ.


Be the first to comment on "ಮಂಗಳೂರಿನಲ್ಲಿ ದುರಂತ: ಮನೆ ಕುಸಿದು ಮೂವರ ದಾರುಣ ಅಂತ್ಯ – UPDATES"