2003-04 ನೇ ಸಾಲಿನಲ್ಲಿ ಆರಂಭವಾದ ನಮ್ಮ ಶಾಲೆ ನೂರು ಪ್ರತಿಶತ ಫಲಿತಾಂಶ ಪಡೆಯಬೇಕೆಂಬುದು ಶಾಲಾ ಸ್ಥಾಪಕ ಜಗನ್ನಾಥ ಶೆಟ್ಟಿ ಸೇರಿದಂತೆ ನಮ್ಮೆಲ್ಲರ ಆಶಯ ಆಗಿತ್ತು. ಪ್ರಸ್ತುತ ವರ್ಷ ಆ ಆಶಯ ಈಡೇರಿದೆ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹೇಳಿದರು.

ಅವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೊದಲ ಬಾರಿಗೆ ನೂರು ಶೇಕಡಾ ಫಲಿತಾಂಶ ದಾಖಲಿಸಿದಕ್ಕಾಗಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಅಭಿನಂದಿಸಿ ಮಾತನಾಡಿದರು.
ಇದೇ ವೇಳೆ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ಸಮಸ್ಯೆ ಇರುವಂತಹ ವಿದ್ಯಾರ್ಥಿಗಳಿದ್ದರೆ ಅವರಿಗೆ ಬೇಕಾದ ಸಹಾಯ ನೀಡಲು ಸದಾ ಸಿದ್ಧ ಎಂದರು. ಇನ್ನು ಪ್ರತಿ ವರ್ಷ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು ಮತ್ತು ಉನ್ನತ ವಿದ್ಯಾಭ್ಯಾಸ ಪೂರೈಸಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲಾ ಪ್ರಯೋಗಾಲಯಕ್ಕೆ ಅಗತ್ಯವಾದ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಗಣೇಶ್, ವೀಣಾ, ಸುಜಾತ ಅಧ್ಯಾಪಕರಾದ ಭಾರತಿ, ಪ್ರಕಾಶ, ಸರಸ್ವತಿ,ಗೀತಾ ಉಡುಪಿ, ಪ್ರಿಯಾ, ಪದ್ಮ, ಶಾಲಾ ಕಚೇರಿ ಸಹಾಯಕರಾದ ಹರೀಶ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿ ಪ್ರಾರ್ಥಿಸಿ, ಹರಿಪ್ರಸಾದ್ ನಿರೂಪಿಸಿ, ವಂದಿಸಿದರು.


Be the first to comment on "ಬೊಂಡಾಲ ಹೈಸ್ಕೂಲ್ ಗೆ ನೂರು ಪ್ರತಿಶತ ಫಲಿತಾಂಶ: ಅಭಿನಂದನಾ ಕಾರ್ಯಕ್ರಮ"