ಬಂಟ್ವಾಳ: ಮನೆಯಲ್ಲಿ ಯಾರು ಇಲ್ಲದ ವೇಳೆ ಮುಂಬಾಗಿಲಿನ ಚಿಲಕ ಮುರಿದು ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಲಾಗಿದ್ದ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ಸಾವಿರಾರು ರೂ ನಗದು ಕಳವು ಮಾಡಿದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಗೋರೆಮಾರ್ ಎಂಬಲ್ಲಿ ನಡೆದಿದೆ.
ಗೋರೆಮಾರ್ ನಿವಾಸಿ ಪ್ರಕಾಶ್ ಎಂಬವರ ಮನೆಯಿಂದ ಒಟ್ಟು ರೂ. 4,13,000 ಮೌಲ್ಯದ ಬೆಲೆಬಾಳುವ ಸೊತ್ತುಗಳು ಕಳವಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಕೋಣೆಯೊಳಗೆ ಇರಿಸಲಾಗಿದ್ದ ಸ್ಟೀಲ್ ಕವಾಟಿನ ಲಾಕರ್ ನಲ್ಲಿ ಇಟ್ಟಿದ್ದ ಸುಮಾರು 16 ಗ್ರಾಂ ತೂಕದ 3 ಜೊತೆ ಚಿನ್ನದ ಬೆಂಡೋಲೆ, ಸುಮಾರು 18 ಗ್ರಾಂ ತೂಕದ ಕೈ ಉಂಗುರಗಳು 3 ಹಾಗೂ ನಗದು ರೂ. 65,000 ಮನೆಯ ದೇವರ ಮಂಟಪದಲ್ಲಿದ್ದ ಸುಮಾರು 20,000 ಮೌಲ್ಯದ ಬೆಳ್ಳಿಯ ಶ್ರೀಕೃಷ್ಣ ದೇವರ ವಿಗ್ರಹ ಮತ್ತು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು ರೂ. 5000 ಕಳವು ಆಗಿರುತ್ತದೆ. ಕಳವಾದ ಚಿನ್ನದ ಅಂದಾಜು ಬೆಲೆ 3,23,000 ಮತ್ತು ಕಳವಾದ ಸೊತ್ತುಗಳು ಹಾಗೂ ನಗದು ಸೇರಿ ಒಟ್ಟು ಮೌಲ್ಯ ರೂ 4,13,000 ಆಗಬಹುದು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.