
ಮಳೆ ಸಣ್ಣದಾಗಿ ಬಂದು ನೀರು ಹರಿದುಹೋದರೂ ರಸ್ತೆಗೆ ಮಣ್ಣೆಲ್ಲಾ ಬಂದು ಒಂದೆರಡು ಅಪಘಾತಗಳು ವರದಿಯಾಗುವುದು ಪ್ರತಿ ವರ್ಷದ ಮಳೆಗಾಲದ ಆರಂಭದ ಹತ್ತು ಹದಿನೈದು ದಿನಗಳ ಕಾಲದ ಸಂಕಟ. ಇಂಥದ್ದು ಆಗದಂತೆ ನೋಡಿಕೊಳ್ಳುವುದು ಆಡಳಿತಕ್ಕೆ ಪ್ರಥಮ ಸವಾಲು. ಫರಂಗಿಪೇಟೆಯಿಂದ ಪೆರ್ನೆವರೆಗೆ ಉದ್ದಕ್ಕೂ ಹೆದ್ದಾರಿಯ ಜೊತೆಗೆ ರಾಜ್ಯರಸ್ತೆಗಳೂ ಇರುವ ಬಂಟ್ವಾಳ ತಾಲೂಕಿನಲ್ಲಿ ಜೀವಹಾನಿಯಾಗದಂತೆ ರಸ್ತೆಯನ್ನು ಕಾಪಾಡಿಕೊಳ್ಳುವ ಕೆಲಸವಾಗಬೇಕಾಗಿದೆ.
ನೇತ್ರಾವತಿ ನದಿ ತುಂಬಿ ಹರಿಯಬೇಕಾದರೆ, ಬಂಟ್ವಾಳದಲ್ಲೇ ಮಳೆ ಬರಬೇಕು ಎಂದೇನೂ ಇಲ್ಲ. ಆದರೆ ಮಳೆಗಾಲದಲ್ಲಿ ನದಿಯ ಪಕ್ಕ ಜನರು ಸಾಗದಂತೆ ಎಚ್ಚರಿಕೆ ವಹಿಸಬೇಕಾಗಿರುವುದು ಆಡಳಿತದ ಜವಾಬ್ದಾರಿ. ಸಾರ್ವಜನಿಕರು ಅಪಾಯಕಾರಿ ಜಾಗಗಳಿಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಸ್ಥಳೀಯಾಡಳಿತಗಳು ಕೈಗೊಳ್ಳಬೇಕಾಗುತ್ತದೆ. ಕೆಲ ವರ್ಷಗಳ ಹಿಂದೆ ಧಾರಾಕಾರ ಮಳೆ ಬಂದಾಗ ಪಂಜಿಕಲ್ಲು ಗ್ರಾಮದ ಮುಕುಡದಲ್ಲಿ ಗುಡ್ಡ ಜರಿದು ಕಾರ್ಮಿಕರು ಸಾವನ್ನಪ್ಪಿದ್ದರು. ಅಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ.
ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಕುಸಿದ ಬಿ.ಸಿ.ರೋಡ್ ನಗರದ ಹೃದಯಭಾಗದಲ್ಲಿರುವ ಅಜ್ಜಿಬೆಟ್ಟು ಪ್ರಾಥಮಿಕ ಶಾಲಾ ಕಂಪೌಂಡ್ ಅನುದಾನದ ಕೊರತೆಯಿಂದ ಇನ್ನೂ ರಿಪೇರಿಯಾಗಿಲ್ಲ. ಈ ವರ್ಷ ಅಂಥ ಕಂಪೌಂಡ್ ಗಳು, ಗೇಟ್ ಗಳು , ಕಟ್ಟಡಗಳು ಕುಸಿಯುವ ಹಂತದಲ್ಲಿರುವುದನ್ನು ಗಮನಿಸದೇ ಇದ್ದರೆ ಸಮಸ್ಯೆ ಖಚಿತ.
ಕಳೆದ ಮಳೆಗಾಲದ ಸಂದರ್ಭ, ರಾಷ್ಟ್ರೀಯ ಹೆದ್ದಾರಿಯ ಹಲವು ಭಾಗಗಳಲ್ಲಿ ನಿರ್ಮಾಣ ಕಾರ್ಯದ ಅವ್ಯವಸ್ಥೆಗಳಿಂದ ತೊಂದರೆಗಳು ಉಂಟಾಗಿತ್ತು. ಈ ಬಾರಿ ಹೆದ್ದಾರಿ ಕಾಮಗಾರಿ ಬಂಟ್ವಾಳ ತಾಲೂಕಿನ ಭಾಗದಲ್ಲಿ ಪೂರ್ಣಗೊಂಡಿದೆ. ಆದರೆ ಮಣ್ಣಿನ ರಾಶಿ, ಚರಂಡಿ ಸಮಸ್ಯೆಗಳು ಇದ್ದು, ಅವುಗಳ ಕುರಿತು ಸ್ಥಳೀಯಾಡಳಿತ ಗಮನಹರಿಸಬೇಕಿದೆ. ಬಿ.ಸಿ.ರೋಡಿನಲ್ಲಿ ಗೈಲ್ ಸಂಸ್ಥೆ ಅನಿಲ ಕೊಳವೆ ಹಾಕುವ ಕಾರ್ಯವನ್ನು ಮಾಡುತ್ತಿದ್ದು, ಅದಿನ್ನೂ ಪೂರ್ಣವಾಗಬೇಕಷ್ಟೆ. ಆದರೆ ಅಲ್ಲಲ್ಲಿ ಹೊಂಡಗಳನ್ನು ನಿರ್ಮಿಸಿ, ಮಣ್ಣು ರಸ್ತೆ ಬದಿಯಲ್ಲೇ ಹರಡಿಕೊಂಡಿದ್ದು ಸಮಸ್ಯೆ ಉಂಟುಮಾಡಿದೆ.
ಫ್ಲೆಕ್ಸ್, ಬ್ಯಾನರ್ ಕಂಟಕ
ಬಿ.ಸಿ.ರೋಡ್ ನಲ್ಲಿ ಬಿರುಗಾಳಿಗೆ ಹಲವು ಫ್ಲೆಕ್ಸ್ ಗಳು ಪ್ರತಿ ಮಳೆಗಾಲದ ಆರಂಭದಲ್ಲೂ ಉದುರಿ ಬೀಳುವುದುಂಟು. ಈ ವರ್ಷ ಕೆಲ ದಿನಗಳ ಹಿಂದೆ ಗಾಳಿಗೆ ಬಿ.ಸಿ.ರೋಡ್ ನಲ್ಲಿ ಫ್ಲೆಕ್ಸ್ ಬಿದ್ದ ಘಟನೆಯೂ ನಡೆದಿತ್ತು. ವಿದ್ಯುತ್ ಕಂಬಕ್ಕೆ ಕಟ್ಟುವ ಫ್ಲೆಕ್ಸ್, ಬಂಟಿಂಗ್ ಗಳು, ರಸ್ತೆಯಂಚಿನಲ್ಲೇ ಇರುವ ಬ್ಯಾನರ್, ಫ್ಲೆಕ್ಸ್ ಗಳಿಗೆ ಕಡಿವಾಣ ಹಾಕದೇ ಇದ್ದರೆ, ಗಾಳಿ ಮಳೆಗೆ ಪ್ರಾಣ ತೆಗೆಯುವುದು ಖಚಿತ.
ಬಂಟ್ವಾಳ ತಾಲೂಕಿನ ಹಲವೆಡೆ ಕಲ್ಲು ಕೋರೆಗಳು ಉಪಯೋಗವಿಲ್ಲದಿದ್ದರೂ ಹಾಗೆಯೇ ಬಿಟ್ಟ ಕಾರಣ ನೀರು ತುಂಬುವ ಸಾಧ್ಯತೆ ಇರುವ ವಿಚಾರ ಪ್ರತಿ ಸಿದ್ಧತಾ ಸಭೆಯಲ್ಲಿ ಪ್ರಸ್ತಾಪವಾಗುತ್ತದೆ. ಈ ಬಾರಿ ಸಿದ್ಧತಾ ಸಭೆ ಶಾಸಕರ ನೇತೃತ್ವದಲ್ಲಿ ನಡೆಯಲಿದೆ. ಬೇಸಗೆಯಲ್ಲಿಯೇ ಕಲುಷಿತ ನೀರು ಸೇವನೆಯಿಂದ ಸಮಸ್ಯೆಗಳು ಉಂಟಾಗುತ್ತವೆ. ಇನ್ನು ಮಳೆ, ಬಿಸಿಲು ಪರಿಸ್ಥಿತಿ ಇದ್ದರೆ, ಡೆಂಘೆ, ಮಲೇರಿಯಾ ಕಾದು ಕುಳಿತು ಸಮಸ್ಯೆ ಕಾಡಲಾರಂಭಿಸುತ್ತವೆ. ಕಲುಷಿತ ನೀರು, ಕಸದ ರಾಶಿ ಇದ್ದರೆ ಸ್ಥಳೀಯಾಡಳಿತಕ್ಕೆ ನಾಗರಿಕರೂ ತಿಳಿಸಬೇಕು. ಪರಿಸರ ಮಾಲಿನ್ಯವಾಗದಂತೆ ಜಾಗ್ರತೆ ವಹಿಸುವ ಅಗತ್ಯವಿದೆ. ಬೀದಿನಾಯಿಗಳು ಅಲ್ಲಲ್ಲಿ ಕಸವನ್ನು ಎಳೆದಾಡುವ ದೃಶ್ಯ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲೇ ಕಂಡುಬರುತ್ತಿದ್ದು, ಇವಕ್ಕೂ ಕಡಿವಾಣ ಹಾಕದಿದ್ದರೆ ಮಳೆಗಾಲದಲ್ಲಿ ಕಸ, ತ್ಯಾಜ್ಯದ ಜೊತೆ ನಾಯಿಗಳು ಕಚ್ಚಿ ಎಳೆದಾಡುವ ದೃಶ್ಯಗಳನ್ನು ಅನಿವಾರ್ಯವಾಗಿ ನೋಡಬೇಕಾಗುತ್ತದೆ.


Be the first to comment on "ಮಣ್ಣೆಲ್ಲಾ ರಸ್ತೆಗೆ ಬಾರದಂತೆ ನೋಡಿಕೊಳ್ಳುವುದು ದೊಡ್ಡ ಸವಾಲು"