ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ 2026ರ ಮಾರ್ಚ್ ತಿಂಗಳ 26, 27 ಮತ್ತು 28ರಂದು ನಡೆಯಲಿದ್ದು, ಈಗಾಗಲೇ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಬಂಟ್ವಾಳದ ಸುತ್ತಮುತ್ತಲೂ ಕನ್ನಡ ಧ್ವಜಗಳೊಂದಿಗೆ ವಾಹನಗಳು, ಪೇಟೆಯ ಅಲ್ಲಲ್ಲಿ ಬ್ಯಾನರುಗಳು ಕಂಡುಬರುತ್ತಿವೆ. ಈಗಾಗಲೇ ವಸ್ತು, ಪುಸ್ತಕ ಪ್ರದರ್ಶನ ಮಳಿಗೆಗಳು ಸಜ್ಜುಗೊಂಡಿದ್ದು, 26ರಂದು ಸಂಜೆ ಮೆರವಣಿಗೆಗೆ ಸಿದ್ಧತೆಗಳು ನಡೆದಿವೆ. ಬಂಟ್ವಾಳ ತಾಲೂಕಿನಲ್ಲಿ ನಡೆಯುತ್ತಿರುವ ಐದನೇ ಜಿಲ್ಲಾ ಸಾಹಿತ್ಯ ಸಮ್ಮೇಳನವಿದು.
ಮೊಡಂಕಾಪು, ಬಂಟ್ವಾಳ, ಅಳಿಕೆ ಹಾಗೂ ಪೊಳಲಿಯಲ್ಲಿ ಹಿಂದೆ ಜಿಲ್ಲಾ ಮಟ್ಟದ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದವು.

ತಂತ್ರಜ್ಞಾನ-ಸಾಹಿತ್ಯ-ಸಹಬಾಳ್ವೆ ಎಂಬ ಆಶಯದಲ್ಲಿ ರಾಣಿ ಅಬ್ಬಕ್ಕ ವೇದಿಕೆ, ಪಂಜೆ ಮಂಗೇಶರಾಯ ಸಭಾಂಗಣದಲ್ಲಿ ನಡೆಯಲಿರುವ ತ್ರಿದಿನ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಚಿದಂಬರ ಬೈಕಂಪಾಡಿ ವಹಿಸುವರು.

ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ಅಧ್ಯಕ್ಷರಾಗಿ ಬಿ.ರಘುನಾಥ ಸೋಮಯಾಜಿ ಎರಕಳ, ಕಾರ್ಯಾಧ್ಯಕ್ಷರಾಗಿ ಪಿಯೂಸ್ ಎಲ್. ರೋಡ್ರಿಗಸ್, ಪ್ರಧಾನ ಕಾರ್ಯದರ್ಶಿಯಾಗಿ ಅಬುಬಕ್ಕರ್ ಅಮ್ಮುಂಜೆ, ಕಾರ್ಯದರ್ಶಿಯಾಗಿ ದೇವಪ್ಪ ಕುಲಾಲ್, ರಾಮದಾಸ ಬಂಟ್ವಾಳ ಮತ್ತು ಚಂದ್ರಹಾಸ ಶೆಟ್ಟಿ ಮಂಗಳೂರು, ಕೋಶಾಧಿಕಾರಿಯಾಗಿ ಸುಭಾಶ್ಚಂದ್ರ ಜೈನ್ ಮತ್ತು ಸಂಚಾಲಕರಾಗಿ ವಿಶ್ವನಾಥ ಬಂಟ್ವಾಳ ತೊಡಗಿಸಿಕೊಂಡಿದ್ದಾರೆ. ಸಮ್ಮೇಳನದ ಯಶಸ್ಸಿಗೆ ಹಲವು ಸಮಿತಿಗಳನ್ನು ರಚಿಸಲಾಗಿದೆ.

ಸಮ್ಮೇಳನದಲ್ಲಿ 30ಕ್ಕೂ ಅಧಿಕ ಪುಸ್ತಕ ಮಳಿಗೆಗಳು, ಕರಾವಳಿಯ ಆಕರ್ಷಕ ವಸ್ತುಸಂಗ್ರಹ ಪ್ರದರ್ಶನ, ಗುಡಿಕೈಗಾರಿಕೆ, ಕರಕುಶಲ, ಕೈಮಗ್ಗ, ಆಹಾರ ಸಹಿತ ವಿವಿಧ ಮಳಿಗೆಗಳು, ಪಟ್ಟಾಂಗಕಟ್ಟೆಯಲ್ಲಿ ಅಜ್ಜಿಕಥೆ, ಉತ್ತರ ಹೇಳಿ ಪುಸ್ತಕ ಗೆಲ್ಲಿ, ಗ್ರಾಮೀಣ ಪ್ರತಿಭೆಗಳ ನೃತ್ಯ ಇರಲಿದೆ.
ಮೂರು ದಿನಗಳು ನಡೆಯುವ ಕಾರ್ಯಕ್ರಮಗಳ ವಿವರ ಇಲ್ಲಿದೆ
ಮಾರ್ಚ್ 26, ಗುರುವಾರ
ಮಾರ್ಚ್ 26ರಂದು ಗುರುವಾರ ಸಂಜೆ 4 ಗಂಟೆಗೆ ಬಿ.ಸಿ.ರೋಡ್ ನ ಪೊಳಲಿ ದ್ವಾರ ಕೈಕಂಬದಿಂದ ಸಮ್ಮೇಳನ ನಡೆಯುವ ಸ್ಪರ್ಶ ಕಲಾ ಮಂದಿರದವರೆಗೆ ಕನ್ನಡ ಸಾಂಸ್ಕೃತಿಕ ದಿಬ್ಬಣ ನಡೆಯಲಿದ್ದು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಉದ್ಘಾಟಿಸುವರು. ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಮತ್ತು ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಸಂಜೆ 6 ಗಂಟೆಯಿಂದ ಕನ್ನಡ ನಾಟಕ ಮೂರು ಮುತ್ತು ಪ್ರದರ್ಶನಗೊಳ್ಳಲಿದೆ. ಆಕರ್ಷಕ ಮೆರವಣಿಗೆಯಲ್ಲಿ ದಕ್ಷಿಣ ಕನ್ನಡದ ಜಾನಪದ ಸಂಸ್ಕೃತಿ ಅನಾವರಣಗೊಳ್ಳಲಿದೆ.
ಮಾರ್ಚ್ 27, ಶುಕ್ರವಾರ:
ಮಾರ್ಚ್ 27ರಂದು ಶುಕ್ರವಾರ ಬೆಳಗ್ಗೆ 8ರಿಂದ 9 ಗಂಟೆಯ ಅವಧಿಯಲ್ಲಿ ರಾಜೇಶ್ ಪೊಳಲಿ ಮತ್ತು ಬಳಗದಿಂದ ವಾದ್ಯಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 9ರಿಂದ ರಾಷ್ಟ್ರಧ್ವಜಾರೋಹಣವನ್ನು ಬಂಟ್ವಾಳ ತಹಸೀಲ್ದಾರ್ ಜಿ.ಮಂಜುನಾಥ್, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ, ಸಮ್ಮೇಳನ ಧ್ವಜಾರೋಹಣವನ್ನು ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಮಾಡುವರು.
ಬೆಳಗ್ಗೆ 9.45ರಿಂದ 12.10ರವರೆಗೆ ಉದ್ಘಾಟನಾ ಕಾರ್ಯಕ್ರಮವಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸುವರು. ಚಿದಂಬರ ಬೈಕಂಪಾಡಿ ಸಮ್ಮೇಳನಾಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಉಪಸ್ಥಿತರಿರುವರು. ಸ್ಮರಣ ಸಂಚಿಕೆಯನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಬಿಡುಗಡೆ ಮಾಡುವರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ವಸ್ತುಪ್ರದರ್ಶನವನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ನೆರವೇರಿಸುವರು. ಪುಸ್ತಕ ಮತ್ತು ಇತರ ಮಳಿಗೆಗಳನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸುವರು. ಉದ್ಯಮಿ ಎರಕಳ ಬಿ.ರಘುನಾಥ ಸೋಮಯಾಜಿ ಸ್ವಾಗತಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ್ ಕಾರ್ಬಾರಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ಜಿಲ್ಲೆ ನಿಕಟಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರಾವಳಿ ವಾಚಕಿಯರ ಲೇಖಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಟಿ.ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಜ್ಯೋತಿಷಿಗಳಾದ ಬ್ರಹ್ಮರಕೂಟ್ಲು ಅನಿಲ್ ಪಂಡಿತ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ.ಪುಷ್ಪಗಿರಿ, ಜ್ಯೋತಿಷಿ ಚೈತನ್ಯ ಕಲ್ಯಾಣತ್ತಾಯ ಉಪಸ್ಥಿತರಿರುವರು. ಆಶಯ ನುಡಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ ಮಾಡಲಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿದ್ಯಾರ್ಥಿಗಳು ವಂದೇ ಮಾತರಂ, ನಾಡಗೀತೆ ಮತ್ತು ರೈತಗೀತೆ ಹಾಡುವರು.
ಬೆಳಗ್ಗೆ 12ರಿಂದ 1ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಭಾಷಾ ಸಾಮರಸ್ಯ ಕುರಿತು ವಿಚಾರಗೋಷ್ಠಿ ನಡೆಯಲಿದೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ವಿಚಾರ ಮಂಡಿಸುವರು. ಸಮ್ಮೇಳನ ಸ್ವಾಗತ ಸಮಿತಿ ಕೋಶಾಧ್ಯಕ್ಷ ಸುಭಾಶ್ಚಂದ್ರ ಜೈನ್ ಮತ್ತು ಕಾವೂರು ವ್ಯ.ಸೇ.ಸಹಕಾರಿ ಬ್ಯಾಂಕ್ ಅಧ್ಯಕ್ಷ ಲೋಕೇಶ್ ಭಂಡಾರಿ ಅಮ್ಮುಂಜೆಗುತ್ತು, ಕಸಾಪ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಉಪಸ್ಥಿತರಿರುವರು. ಮಧ್ಯಾಜಹ್ನ 1ರಿಂದ 2ವರೆಗೆ ಕೆನರಾ ತಾಂತ್ರಿಕ ಮಹಾವಿದ್ಯಾಲಯ ಬೆಂಜನಪದವಿನಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.
ಕೃತಿಗಳ ಲೋಕಾರ್ಪಣೆ:
ಶುಕ್ರವಾರ ಮಧ್ಯಾಹ್ನ 2ರಿಂದ 3.30ವರೆಗೆ ನೂತನ 12 ಕೃತಿಗಳನ್ನು ವಿಶ್ರಾಂತ ಕುಲಪತಿ ಹಾಗೂ ವಿದ್ವಾಂಸ ಪ್ರೊ.ಕೆ.ಚಿನ್ನಪ್ಪ ಗೌಡ ಬಿಡುಗಡೆಗೊಳಿಸುವರು. ಸುಲೋಚನ ಪುತ್ತೂರು, ಉಮಾಶಂಕರಿ ಮರಿಕೆ, ಜಯಪ್ರಕಾಶ್ ಪುತ್ತೂರು, ವಿಮಲಾರುಣ ಪಡ್ಡಂಬೈಲು, ಎಂ.ಆಶಿರುದ್ದೀನ್ ಸಾರ್ತಬೈಲ್, ನಿರಂಜನ್ ಜೈನ್ ಕುದ್ಯಾಡಿ, ನಾರಾಯಣ ನೀರಬಿದಿರೆ, ಅಕ್ಷತಾ ನೀರಬಿದಿರೆ, ಆಕೃತಿ ಐ. ಎಸ್. ಭಟ್, ಸಂಪ್ರೀತಾ ಎಸ್. ಶೆಟ್ಟಿಗಾರ್ ಮತ್ತು ಡಾ.ಟಿ.ಕೃಷ್ಣಮೂರ್ತಿ ಉಜಿರೆ ಅವರ ಕೃತಿಗಳು ಬಿಡುಗಡೆಯಾಗಲಿವೆ. ಈ ವೇಳೆ ಮಹಿಳಾ ಮಂಡಳ ಒಕ್ಕೂಟ ಗೌರವಾಧ್ಯಕ್ಷೆ ವಿಜಯಲಕ್ಷ್ಮೀ ಬಿ.ಶೆಟ್ಟಿ, ಪ್ರಕಾಶಕ ಕಲ್ಲೂರು ನಾಗೇಶ್, ಉಳ್ಳಾಲ ತಾಲೂಕು ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬಳೆ ಉಪಸ್ಥಿತರಿರುವರು.
ವಿಶೇಷ ಉಪನ್ಯಾಸ, ಗೋಷ್ಠಿ:
ಮಧ್ಯಾಹ್ನ 3.30ರಿಂದ ಡಾ. ಪ್ರದೀಪ್ ಆಟಿಕುಕ್ಕೆ ಅವರಿಂದ ಡಿ.ವಿ.ಜಿ. ಕಗ್ಗ ರಸಧಾರೆ ಕುರಿತು ವಿಶೇಷ ಉಪನ್ಯಾಸ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ಉದ್ಯಮಿ ಚಂದ್ರಹಾಸ ಶೆಟ್ಟಿ ರಂಗೋಲಿ, ತುಳಸಿ ಪುರಂದರ ಇರಾ ಉಪಸ್ಥಿತಿಯಲ್ಲಿ ನಡೆಯಲಿದೆ. ಮಧ್ಯಾಹ್ನ 3.ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ ಸಂಸ್ಕೃತಿ ಕುರಿತು ಗೋಷ್ಠಿಗಳು ಉಮೇಶ್ ಸಾಲಿಯಾನ್ ಬೆಂಜನಪದವು, ಆನಂದ ಭಂಡಾರಿ ಹೊಸಬೆಟ್ಟು, ಬೆಳ್ತಂಗಡಿ ತಾಲೂಕು ಕಸಾಪ ಅಧ್ಯಕ್ಷ ಡಿ.ಯದುಪತಿ ಗೌಡ ಉಪಸ್ಥಿತಿಯಲ್ಲಿ ನಡೆಯಲಿದ್ದು, ದಕ ಜಿಲ್ಲೆಯ ಸಾಹಿತ್ಯದ ಸ್ಥಿತ್ಯಂತರಗಳ ಕುರಿತು ಡಾ. ಅನುರಾಧಾ ಕುರುಂಜಿ ಮಾತನಾಡುವರು. ಪತ್ರಕರ್ತ ಕೆ.ಎಂ.ಅಬುಬಕ್ಕರ್ ಸಿದ್ದೀಕ್ ಮೋಂಟುಗೋಳಿ ದ.ಕ.ಜಿಲ್ಲೆಯ ಸಾಂಸ್ಕೃತಿಕ ಪಲ್ಲಟಗಳ ಕುರಿತು ವಿಚಾರ ಮಂಡಿಸುವರು.
ವಾಚನ, ಗಾಯನ ಕುಂಚ:
ಕವಿಗೋಷ್ಠಿ, ವಾಚನ, ಗಾಯನ, ಕುಂಚ ಕಾರ್ಯಕ್ರಮ ಸಂಜೆ 3.50ರಿಂದ 5.30ವರೆಗೆ ನಡೆಯಲಿದೆ. ರಾಜಶ್ರೀ ರೈ ಪೆರ್ಲ, ಗೀತಾ ಎನ್. ನರಿಕೊಂಬು, ಕಿಶೋರ್ ಕುಮಾರ್ ರಾಮಕುಂಜ, ಮಮತಾ ರವೀಶ್ ಪಡ್ಡಂಬೈಲು, ಅನಿತಾ ಶೆಟ್ಟಿ, ಸುಮಾ ಉಜಿರೆ, ಸೌದಾಮಿತಿ ಶೆಟ್ಟಿ, ಶ್ರೀಶಾ ವಾಸವಿ ಮತ್ತು ರವಿರಾಜ್ ಎಸ್. ಮಂಗಳೂರು ಕವನ ವಾಚಿಸುವರು.ಕೆ.ಆರ್.ಗೋಪಾಲಕೃಷ್ಣ ಸುಳ್ಯ ಮತ್ತು ಭಾಗ್ಯಶ್ರೀ ಕಾಂಚನ ಗಾಯನ, ಜಯಪ್ರಕಾಶ್, ಭಾಸ್ಕರ ನೆಲ್ಯಾಡಿ ಮತ್ತು ಜಯಶ್ರೀ ಶರ್ಮ ಚಿತ್ರ ಬಿಡಿಸುವರು.
ಸಂಜೆ 5.30ರಿಂದ 6ವರೆಗೆ ಅಗಲಿದ ಗಣ್ಯರಿಗೆ ನುಡಿನಮನವನ್ನು ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಮಾಡುವರು.ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದಫ್, ಸುರತ್ಕಲ್ ನಾಟ್ಯಾಂಜಲಿಯ ನಾಟ್ಯರಂಜಿನಿ ಹಾಗೂ ಸ್ಥಳೀಯ ಗಾಯಕರ ರಸಮಂಜರಿ ಇರಲಿದೆ.
ಮಾರ್ಚ್ 28, ಶನಿವಾರದ ಕಾರ್ಯಕ್ರಮಗಳು:
ಬೆಳಗ್ಗೆ 8ರಿಂದ 9ವರೆಗೆ ಡಾ. ಎಂ.ಎಸ್.ಭಟ್ ಮತ್ತು ಬಳಗದ ಶಾಸ್ತ್ರೀಯ ಸಂಗೀತ ಇರಲಿದೆ. ಬಳಿಕ 9 ಗಂಟೆಯಿಂದ ಸಾಹಿತ್ಯ ಹೊಸ ತಲೆಮಾರು ವಿಚಾರಗೋಷ್ಠಿಯಲ್ಲಿ ಕತೆ ಕಾದಂಬರಿ ಕುರಿತು ಪುತ್ತೂರು ಪ್ರ.ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಸುಬ್ಬಪ್ಪ ಕೈಕಂಬ, ವಿಮರ್ಶೆ ಸಂಶೋಧನೆ ಕುರಿತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಪ್ರೊ.ಗಿರೀಶ್ ಭಟ್ ಅಜಕ್ಕಳ ವಿಚಾರ ಮಂಡಿಸುವರು. ಕಸಾಪ ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಜು ಮತ್ತು ಪ್ರೀತಮ್ ಬಲ್ಯಾಯ ಸಾಲೆತ್ತೂರು ಉಪಸ್ಥಿತರಿರುವರು.
11ರಿಂದ ಕನ್ನಡ ಭಾಷೆಯಲ್ಲಿ ವೈದ್ಯವಿಜ್ಞಾನ ಮತ್ತು ವೈದ್ಯಕೀಯ ಕಲಿಕೆ ಕುರಿತು ನಿಟ್ಟೆ ವಿವಿಯ ಪ್ರೊ.ಆನಂದ ಬಂಗೇರ ವಿಚಾರ ಮಂಡಿಸುವರು. ಮುಲ್ಕಿ ಕಸಾಪ ಅಧ್ಯಕ್ಷ ಮಿಥುನ್ ಉಡುಪ, ಮೊಡಂಕಾಪು ಕಾರ್ಮೆಲ್ ಕಾಲೇಜು ಉಪಪ್ರಾಂಶುಪಾಲ ಸುರೇಶ್ ನಂದೊಟ್ಟು, ಧವಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಉಪಸ್ಥಿತರಿರುವರು.
ಬೆಳಗ್ಗೆ 11.30ರಿಂದ 11.50ವರೆಗೆ ದ.ಕ.ಜಿಲ್ಲೆಯ ರಂಗಭೂಮಿ ಮತ್ತು ಬದುಕು ಕುರಿತು ರಂಗಕರ್ಮಿ ಶಶಿರಾಜ್ ಕಾವೂರು ವಿಚಾರ ಮಂಡಿಸುವರು. ಚಂದ್ರಪ್ರಕಾಶ ಶೆಟ್ಟಿ ತುಂಬೆ, ಸುಖೇಶ್ ಚೌಟ, ವೆಂಕಟೇಶ ನಾವಡ ಹಾಗೂ ಕಸಾಪ ಮೂಡುಬಿದಿರೆ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿರುವರು. 11.50ರಿಂದ 12.05ವರೆಗೆ ಸಿದ್ಧಕಟ್ಟೆ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡುವರು.
12.15ರಿಂದ 12.45ವರೆಗೆ ಕನ್ನಡ ಮಾಧ್ಯಮ ಶಾಲೆಗಳ ವಾಸ್ತವ ಮತ್ತು ಭವಿಷ್ಯ ಕುರಿತು ಶಿಕ್ಷಣತಜ್ಞ ಡಾ. ಚಂದ್ರಶೇಖರ ದಾಮ್ಲೆ ವಿಚಾರ ಮಂಡಿಸುವರು. ಮಂಗಳೂರು ಕಸಾಪ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್, ಪದ್ಮಶೇಖರ ಜೈನ್, ದೇವಪ್ಪ ಕುಲಾಲ್, ಪ್ರಸಾದ್ ಅಮ್ಮುಂಜೆ ಉಪಸ್ಥಿತರಿರುವರು.
12.45ರಿಂದ 1.30ವರೆಗೆ ಶ್ರೀಕೃಷ್ಣ ಭಕ್ತಿ ಎಂಬ ಗಮಕವನ್ನು ಮಧೂರು ವಿಷ್ಣುಪ್ರಸಾದ ಕಲ್ಲೂರಾಯ ಹಾಗೂ ಮಧೂರು ಮೋಹನ ಕಲ್ಲೂರಾಯ ಪ್ರಸ್ತುತಪಡಿಸುವರು. 1.30ರಿಂದ 2ವರೆಗೆ ಎಸ್.ಡಿ.ಎಂ.ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡುವರು.
ಹಳೆಗನ್ನಡ ಸಾಹಿತ್ಯದ ರಸಧಾರೆ ಕುರಿತು ಮಧ್ಯಾಹ್ನ 2ರಿಂದ 2.30ವರೆಗೆ ಕಟೀಲು ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ ವಿಚಾರ ಮಂಡಿಸುವರು. ಕೈಯೂರು ನಾರಾಯಣ ಭಟ್, ದಿನೇಶ್ ಎಲ್. ಬಂಗೇರ, ದಯಾನಂದ ಬಂಟ್ವಾಳ, ಮತ್ತು ಕಸಾಪ ಬಂಟ್ವಾಳ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಉಪಸ್ಥಿತರಿರುವರು.
2.30ರಿಂದ 3ವರೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದವನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಪುಷ್ಪರಾಜ್, ಪತ್ರಕರ್ತರಾದ ಉದಯಶಂಕರ ನೀರ್ಪಾಜೆ, ಗಣೇಶ ಪ್ರಸಾದ ಪಾಂಡೇಲು, ಹರೀಶ ಮಾಂಬಾಡಿ, ಮಾಲತಿ ಶೆಟ್ಟಿ ಮಾಣೂರು, ಉಜಿರೆ ಎಸ್.ಡಿ.ಎಂ.ಕಾಲೇಜು ಸಹಪ್ರಾಧ್ಯಾಪಕ ಡಾ. ನಾಗಣ್ಣ ಡಿ.ಎ. ನಡೆಸಿಕೊಡುವರು. ಜೀವರಾಜ ಶೆಟ್ಟಿ ಅಮ್ಮುಂಜೆಗುತ್ತು ಮತ್ತು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಉಪಸ್ಥಿತರಿರುವರು.
3 ಗಂಟೆಗೆ ಬಹಿರಂಗ ಅಧಿವೇಶನದಲ್ಲಿ ಕಸಾಪ ಜಿಲ್ಲಾ ಕೋಶಾಧ್ಯಕ್ಷ ಐತಪ್ಪ ನಾಯ್ಕ್ ನಿರ್ಣಯ ಮಂಡಿಸುವರು. ಪುತ್ತೂರು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದಿಂದ 3.30ಕ್ಕೆ ನೃತ್ಯರಂಜಿನಿ ಇರಲಿದೆ.
ಸನ್ಮಾನ ಮತ್ತು ಸಮಾರೋಪ:
ಸನ್ಮಾನ ಮತ್ತು ಸಮಾರೋಪ 4ರಿಂದ 5.30ವರೆಗೆ ನಡೆಯಲಿದೆ. ಸಮಾರೋಪ ಭಾಷಣವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಮಾಡುವರು. ಸನ್ಮಾನ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ, ಕಾರ್ಯಾಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ ನೆರವೇರಿಸುವರು. ಅಭ್ಯಾಗತರಾಗಿ ಕಟೀಲು ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಎಂಆರ್ ಪಿಎಲ್ ನಿಗಮಿತ ಸಂಪರ್ಕ ವಿಭಾಗ ಪ್ರಧಾನ ವ್ಯವಸ್ಥಾಪಕ ರುಡಾಲ್ಫ್ ಜೋಯರ್ ನೊರೊನ್ಹ, ರೋಟರಿ ಮಾಜಿ ಗವರ್ನರ್ ಪ್ರಕಾಶ್ ಕಾರಂತ, ಉಜಿರೆ ಎಸ್.ಡಿಎಂ ಐಟಿ ಮತ್ತು ವಸತಿನಿಲಯ ಆಡಳಿತ ವಿಭಾಗ ಸಿಇಒ ಪೂರನ್ ವರ್ಮ, ಉಜಿರೆ ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ, ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹಿರಿಯ ನ್ಯಾಯವಾದಿ ಜಯರಾಮ ರೈ ಭಾಗವಹಿಸುವರು. ಚಿದಂಬರ ಬೈಕಂಪಾಡಿ ಸಮ್ಮೇಳನಾಧ್ಯಕ್ಷರ ನೆಲೆಯಲ್ಲಿ, ಡಾ. ಎಂ.ಪಿ. ಶ್ರೀನಾಥ ಜಿಲ್ಲಾಧ್ಯಕ್ಷರ ನೆಲೆಯಲ್ಲಿ ಮಾತನಾಡುವರು.
ಸನ್ಮಾನ ಕಾರ್ಯಕ್ರಮ:
ಮಹಾಸಾಧಕರು, ಮಹಾದಾನಿಗಳು, ಸಮಾಜಚಿಂತಕರು, ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಮಹಾವ್ಯಕ್ತಿಗಳ ನೆಲೆಯಲ್ಲಿ ಡಾ. ಪಿ.ದಯಾನಂದ ಪೈ, ನಾಡೋಜ ಜಿ.ಶಂಕರ್, ಡಾ. ಕೆ.ಪ್ರಕಾಶ್ ಶೆಟ್ಟಿ ಬಂಜಾರ, ಕೆ.ಡಿ.ಶೆಟ್ಟಿ, ರವಿಶಂಕರ ಶೆಟ್ಟಿ ಬಡಾಜೆಗುತ್ತು, ಪಟ್ಲ ಸತೀಶ ಶೆಟ್ಟಿ, ಉದಯ ಸುವರ್ಣ, ವಿನೋದ್ ಶೆಣೈ, ಕಿಶೋರ್ ಆಳ್ವ ಅವರನ್ನು ಸನ್ಮಾನಿಸಲಾಗುವುದು.
ಜಗನ್ನಾಥ ಚೌಟ ಬದಿಗುಡ್ಡೆ, ಎಸ್.ಆರ್. ಸತೀಶ್ಚಂದ್ರ, ಭುವನೇಶ್ ಪಚ್ಚಿನಡ್ಕ, ಜಗನ್ನಾಥ ಬಂಗೇರ ನಿರ್ಮಲ್ ಅವರಿಗೆ ಸಾಧಕಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪದ್ಮನಾಭ ಭಟ್ ಎಕ್ಕಾರು, ಕೆ.ಟಿ.ವಿಶ್ವನಾಥ, ಡಾ. ಈ.ಕೆ.ಎ.ಸಿದ್ದೀಕ್ ಅಡ್ಡೂರು, ಪುರಂದರ ಭಟ್, ರವೀಶ್ ಪಡುಮಲೆ, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಸದಾನಂದ ನಾರಾವಿ, ಶಾಂತಾರಾಮ ಕುಂದರ್, ಕೆ.ರಾಜಾರಾಮ ಶರ್ಮ ಬೆಳಾಲು, ಕೇಶವ ಎ.ಕೊಯ್ಲ, ಮುರಳೀದರ ವೈ.ಕೆ, ಅಬ್ದುಲ್ ಲತೀಫ್ ಗುರುಪುರ, ಗೋಪಾಲ ಅಂಚನ್, ದೇವಿಪ್ರಸಾದ್ ಬೆಳ್ತಂಗಡಿ, ಲೂವಿಝಾ ಕುಟಿನ್ಹೊ, ಶಂಕರ ಐತಾಳ ಅವರಿಗೆ ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಗಡಿನಾಡು ಸೇವೆಗಾಗಿ ಡಾ. ಎಸ್.ಆರ್.ನರಹರಿ, ಸಂಸ್ಥೆಯಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಅವರನ್ನು ಗೌರವಿಸಲಾಗುವುದು.
ಸಂಜೆ 5.30ರಿಂದ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ನಿರ್ದೇಶಕ ಜೀವನ್ ರಾಮ್ ಸುಳ್ಯ ತಂಡದಿಂದ ಕನ್ನಡ ಗಾನ ಗುಚ್ಛ, 6.30ರಿಂದ ಶ್ರದ್ಧಾ ಕಲ್ಲಡ್ಕ ಬಳಗದ ನೃತ್ಯವೈಭವ ಇರಲಿದೆ. 7.30ರಿಂದ 9ವರೆಗೆ ಶರಸೇತುಬಂಧನ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.


Be the first to comment on "ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಯಾರಿ, ಮೂರು ದಿನ ಬಂಟ್ವಾಳದಲ್ಲಿ ಅಕ್ಷರಜಾತ್ರೆ"