
ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯು ಫೆ. 28ರಿಂದ ಮಾ. 4ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಜಾತ್ರೆಗೆ ಪೂರ್ವಭಾವಿಯಾಗಿ ದಾನಿಗಳಾದ ಸರಪಾಡಿ ಗ್ರಾಮದ ಪಡ್ಡಾಯಿಬೆಟ್ಟುವಿನ ಪ್ರಗತಿಪರ ಕೃಷಿಕ ರಘುರಾಮ ಶೆಟ್ಟಿ ಅವರ ಮನೆಯವರಿಂದ ಸಮರ್ಪಣೆಗೊಳ್ಳಲಿರುವ ಚಂದ್ರಮಂಡಲ ರಥದ ಸಮರ್ಪಣಾ ಮೆರವಣಿಗೆಯು ಫೆ. 22ರಂದು ಮಧ್ಯಾಹ್ನ 3ಕ್ಕೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ಸನ್ನಿಧಿಯ ಬಳಿಯಿಂದ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ತಿಳಿಸಿದರು.

ಅವರು ಬಿ.ಸಿ.ರೋಡಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನವು 2024ರಲ್ಲಿ ಸುಮಾರು 6 ಕೋ.ರೂ.ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು ಅದ್ದೂರಿಯ ಬ್ರಹ್ಮಕಲಶೋತ್ಸವ ನಡೆದಿದ್ದು, ಪ್ರಸ್ತುತ ಹಂತ ಹಂತವಾಗಿ ಹಲವು ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳಲುತ್ತಿದೆ. ದೇವಸ್ಥಾನದ ಮೂಲ ಸೌಕರ್ಯಗಳಾದ ರಥದ ಕೊಟ್ಟಿಗೆ, ಭೋಜನಾ ಶಾಲೆ, ಅನ್ನಛತ್ರ, ದೇವಳದ ಕಚೇರಿ ನಿರ್ಮಾಣಕ್ಕೆ 50 ಲಕ್ಷ ರೂ.ಗಳ ಯೋಜನೆ ಹಾಕಿಕೊಂಡು ಒಂದು ಹಂತದ ಕಾರ್ಯ ಪೂರ್ಣಗೊಂಡು ಫೆ. 28ರಂದು ಜಾತ್ರೆಯ ಸಂದರ್ಭದಲ್ಲಿ ಉದ್ಘಾಟನೆಗೊಳ್ಳುತ್ತದೆ. ದೇವಸ್ಥಾನಗಳಿಗೆ ಉದ್ಯಮಿಗಳು ರಥ ಸಮರ್ಪಣೆ ಮಾಡುವುದು ಸಾಮಾನ್ಯವಾಗಿದ್ದು, ಪ್ರಸ್ತುತ ಅಪರೂಪವೆಂಬಂತೆ ರೈತನೋರ್ವ ನಮ್ಮ ದೇವಸ್ಥಾನಕ್ಕೆ ರಥ ಸಮರ್ಪಣೆ ಮಾಡುತ್ತಿದ್ದಾರೆ. ಫೆ. 22ರಂದು ಮಧ್ಯಾಹ್ನ 3ಕ್ಕೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ಸನ್ನಿಧಿಯ ಬಳಿಯಿಂದ ಅದ್ದೂರಿಯ ಮೆರವಣಿಗೆ ಹೊರಡಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಸಹಿತ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸರಪಾಡಿಯಲ್ಲಿ ಮಣಿನಾಲ್ಕೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಬಳಿಯಿಂದ ವಿವಿಧ ಕಲಾತಂಡಗಳೊಂದಿಗೆ ಪಾದಯಾತ್ರೆಯ ಮೆರವಣಿಗೆ ನಡೆಯುತ್ತದೆ. ಫೆ. 25ರಂದು ಸಂಜೆ ನೂತನ ಭೋಜನಾ ಶಾಲೆಯ ಕಟ್ಟಡ ಹಾಗೂ ನೂತನ ರಥಕ್ಕೆ ವಾಸ್ತು ಪೂಜೆ ಸಹಿತ ವೈದಿಕ ಕಾರ್ಯ ನಡೆದು ಫೆ. 26ರಂದು ಬೆಳಗ್ಗೆ ಗಣಹೋಮ, ಕಲಶಾಭಿಷೇಕ ನಡೆಯುತ್ತದೆ ಎಂದರು.
ಜಾತ್ರೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ರೈ ಕೊಟ್ಟುಂಜ ಮಾತನಾಡಿ, ಫೆ. 28ರಂದು ಮಧ್ಯಾಹ್ನ ಧ್ವಜಾರೋಹಣಗೊಂಡು ಜಾತ್ರೆ ಆರಂಭಗೊಳ್ಳಲಿದ್ದು, ಪ್ರತಿನಿತ್ಯ ವಿವಿಧ ವೈದಿಕ ಕಾರ್ಯಗಳು, ದೇವರ ಬಲಿ ಉತ್ಸವ, ಅನ್ನಪ್ರಸಾದವಿರುತ್ತದೆ. ಮೊದಲ ದಿನ ರಾತ್ರಿ 8ಕ್ಕೆ ಪಾಕಶಾಲೆ, ಉಗ್ರಾಣ, ದೇವಳದ ಕಚೇರಿ ಕಟ್ಟಡ, ರಥದ ಕೊಟ್ಟಿಗೆಯನ್ನು ಮುಂಬಯಿ ಭವಾನಿ ಫೌಂಡೇಶನ್ ಅಧ್ಯಕ್ಷ ಕುಸುಮೋಧರ ಡಿ.ಶೆಟ್ಟಿ ಉದ್ಘಾಟಿಸಲಿದ್ದು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ವಿಜಯ ವಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸಹಿತ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಬಳಿಕ ಫ್ರೆಂಡ್ಸ್ ಮಿಯಾರುಪಲ್ಕೆಯ ಕಲಾವಿದರಿಂದ ಪಿರ ಬನ್ನಗ-೨ ನಾಟಕ ಪ್ರದರ್ಶನಗೊಳ್ಳಲಿದೆ. ಮಾ. 1ರಂದು ಬೆಳಗ್ಗಿನಿಂದ ವಿವಿಧ ವೈದಿಕ ಕಾರ್ಯ ಸಹಿತ ರಾತ್ರಿ ಪಲ್ಲಕಿ ಉತ್ಸವ, ಬಳಿಕ ಕಾಯರಪಲ್ಕೆ ಹೆಗ್ಡೇಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸರಪಾಡಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಝೆಂಕಾರ ಪ್ರದರ್ಶನಗೊಳ್ಳಲಿದೆ. ಮಾ. 2ರಂದು ಬೆಳಗ್ಗಿನಿಂದ ವೈದಿಕ ಕಾರ್ಯ ನಡೆದು, ರಾತ್ರಿ ಧರ್ಮದೈವ ಪಂಜುರ್ಲಿ ನೇಮ, ಚಂದ್ರಮಂಡಲೋತ್ಸವ ನಡೆಯುತ್ತದೆ. ಮಾ. 3ರಂದು ಬೆಳಗ್ಗಿನಿಂದ ವಿವಿಧ ವೈದಿಕ ಕಾರ್ಯ ಸಹಿತ ದೇವರ ರಥಾರೋಹಣಗೊಂಡು ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಥಾವರೋಹಣ, ಧ್ವಜಾವರೋಹಣ, ವಿಶೇಷ ಗ್ರಹಣ ಶಾಂತಿ ಹೋಮ ನಡೆಯುತ್ತದೆ.
ರಾತ್ರಿ ಗ್ರಹಣ ಮೋಕ್ಷದ ಬಳಿಕ ದೇವರಿಗೆ ಕಲಶಾಭಿಷೇಕ, ಧ್ವಜಾರೋಹಣ, ದೇವರು ರಥಾರೋಹಣ, ವಿವಿಧ ಭಜನಾ ತಂಡಗಳಿಂದ ಭಜನಾ ಕಮ್ಮಟೋತ್ಸವ, ಶಾಂತಿಗುಡ್ಡೆಯಲ್ಲಿ ಧರ್ಮದೈವ ಶ್ರೀ ರಕ್ತೇಶ್ವರಿ ದೈವದ ನೇಮ, ವಲಸರಿ ಇಳಿಯುವುದು, ದೈವ-ದೇವರ ಭೇಟಿ, ಮಹಾರಥೋತ್ಸವ ನಡೆಯುತ್ತದೆ. ಮಾ. 4ರಂದು ರಾತ್ರಿ ಶ್ರೀ ಕಲ್ಲುರ್ಟಿ ದೈವದ ನೇಮ, ಓಕುಳಿ, ನೇತ್ರಾವತಿ ನದಿಯಲ್ಲಿ ಅವಭೃತ ಸ್ನಾನ, ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಹಾಪೂಜೆ, ದೈವಕ್ಕೆ ಹರೆಕೆ ಒಪ್ಪಿಸುವುದು ಬಳಿಕ ಧ್ವಜಾವರೋಹಣಗೊಳ್ಳಲಿದೆ. ಮಾ. 5ರಂದು ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆಯ ಮೂಲಕ ಜಾತ್ರೆ ಸಮಾಪ್ತಿಗೊಳ್ಳುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ ಪಡ್ಡಾಯಿಬೆಟ್ಟು, ಜಾತ್ರೋತ್ಸವ ಸಮಿತಿಯ ಕಾರ್ಯದರ್ಶಿ ಚೇತನ್ ಬಜ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಕಾಶ್ಚಂದ್ರ ಆಳ್ವ, ರಾಹುಲ್ ಕೋಟ್ಯಾನ್ ಉಪಸ್ಥಿತರಿದ್ದರು.


Be the first to comment on "ಫೆ.22ರಂದು ಸರಪಾಡಿ ದೇವಸ್ಥಾನಕ್ಕೆ ಚಂದ್ರಮಂಡಲ ರಥ ಸಮರ್ಪಣಾ ಮೆರವಣಿಗೆ"