ಕೇಂದ್ರ ಬಜೆಟ್ ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ಕೇಂದ್ರ ಬಜೆಟ್‌ನ್ನು ಮಂಡಿಸಿದ್ದಾರೆ. ಈ ಬಜೆಟ್ ಭಾರತದ ಆರ್ಥಿಕ ಬೆಳವಣಿಗೆಗೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ. “ವಿಕಸಿತ ಭಾರತ” ದ ಮಹಾತ್ವಾಕಾಂಕ್ಷೆಯನ್ನು ಪೂರೈಸಿಕೊಳ್ಳುವಲ್ಲಿ ಇದು ದಿಕ್ಸೂಚಿ ಎಂಬುವುದು ಸ್ಪಷ್ಟ. ಈ ಬಜೆಟ್ ನಲ್ಲಿ ಬಹುವಾಗಿ ಮೆಚ್ಚಿ ಕೊಳ್ಳಬಹುದಾದ ಅಂಶವೆಂದರೆ ಇದು ಜನಪ್ರಿಯತೆಗಿಂತ ಜನಹಿತಕ್ಕೆ, ಮಾತಿಗಿಂತ ಸುಧಾರಣೆಗೆ, ಅಸ್ಪಷ್ಟತೆಗಿಂತ ನಿಖರವಾದ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತದೆ.ಬಜೆಟ್‌ನ ಕೆಲವು ಪ್ರಮುಖ ಅಂಶಗಳು ಹೀಗಿವೆ:

1. ಬಂಡವಾಳ ವೆಚ್ಚ ಹೆಚ್ಚಳ: ಬಜೆಟ್‌ನಲ್ಲಿ ಬಂಡವಾಳ ವೆಚ್ಚವನ್ನು ₹12.2 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ, ಇದು ಜಿಡಿಪಿಯ 4.4% ಆಗಿದೆ. ಇದು ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡಲಿದೆ.
2. ಮೂಲಸೌಕರ್ಯ ಅಭಿವೃದ್ಧಿ: ಸರಕು ಸಾಗಣೆ ಕಾರಿಡಾರ್ಗಳು, 20 ಹೊಸ ಜಲಮಾರ್ಗಗಳು, 7 ಹೊಸ ರೈಲ್ವೆ ಕಾರಿಡಾರ್ ಗಳು , ಸೇರಿದಂತೆ ಹೆದ್ದಾರಿಗಳು, ರೈಲ್ವೆ, ಬಂದರುಗಳು ಮತ್ತು ವಿದ್ಯುತ್ ಯೋಜನೆಗಳಿಗೆ ಹೆಚ್ಚಿನ ಹಂಚಿಕೆ ಮಾಡಲಾಗಿದೆ. ಇದು ಆರ್ಥಿಕ ಬೆಳವಣಿಗೆಗೆ ಮತ್ತು ಉದ್ಯೋಗ ಸೃಷ್ಟಿಗೆ ಸಹಾಯ ಮಾಡಲಿದೆ.
3. ತೆರಿಗೆ ಸುಧಾರಣೆಗಳು:
ಜಾಗತಿಕ ಬದಲಾವಣಿಗಳಿಗೆ ಅನುಗುಣವಾಗಿ ಐಟಿ, ಡೇಟಾ ಸೆಂಟರ್ ಸೇವೆ ಗಳಿಗೆ ಅನುಕೂಲ ಮಾಡಿಕೊಡುವುದರೊಂದಿಗೆ ಜನತೆಗೆ ಅನುಕೂಲವಾಗುವಂತೆ ಮುನ್ಸಿಪಲ್ ಬಾಂಡ್, ಮೀನುಗಾರಿಕೆಗೆ ಉತ್ತಮ ಯೋಜನೆಗಳಿವೆ.
4. ತಂತ್ರಜ್ಞಾನ ಮತ್ತು ಉದ್ಯೋಗ: ಎಐ, ಸೈಬರ್ ಸೆಕ್ಯೂರಿಟಿ ಮತ್ತು ದೇಶೀಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಯೋಜನೆಗಳನ್ನು ರೂಪಿಸಲಾಗಿದೆ.
5. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ: ಕೃಷಿ ವಲಯಕ್ಕೆ ಹೆಚ್ಚಿನ ಬೆಂಬಲ ನೀಡಲಾಗಿದೆ. 50೦ ಜಲಾನಯನ ಪ್ರದೇಶಗಳು, ಅಮೃತ ಸರೋವರಗಳ ಅಭಿವೃದ್ದಿಗೆ ಯೋಜನೆ, ಗೋಡಂಬಿ ಕೋಕ್ಕೋ ವಾಲ್ನಟ್ಸ್ ಬಾದಾಮಿ ಪೈನ್ ನಟ್ಸ್ ಗಳ ಕೃಷಿ ವಿಸ್ತರಣೆಗೆ ಅವಕಾಶ ನೀಡಿರುವುದು ಹೊಸತು ಮತ್ತು ಮೆಚ್ಚುವಂತಹ ವಿಷಯವಾಗಿರುತ್ತದೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ಅದಲ್ಲದೆ ವಿಶೇಷ ಚೇತನರಿಗೆ ಉದ್ಯೋಗವಕಾಶ, ಮಾನಸಿಕ ಆರೋಗ್ಯ ಸಂಸ್ಥೆಗಳ ಉನ್ನತೀಕರಣ, ಕ್ಯಾನ್ಸರ್ ರೋಗಿಗಳಿಗಾಗಿ 17 ಔಷಧಗಳ ಮೇಲೆ ಸುಂಕ ವಿನಾಯಿತಿ ನೀಡಿರುವುದನ್ನು ನೋಡಿದಾಗ ಇದು ಜನಪರ ಬಜೆಟ್ ಎಂಬುವುದು ಸ್ಪಷ್ಟವಾಗಿ ಕಂಡುಬರುತ್ತದೆ.
ಒಟ್ಟಾರೆಯಾಗಿ, ಈ ಬಜೆಟ್ ವಿನೂತನವಾಗಿದ್ದು ಬಡವರು, ವಂಚಿತರು, ಮಹಿಳೆಯರು ಮತ್ತು ಹಿಂದುಳಿದಿರುವವರ ಮೇಲೆ ಗಮನ ಹರಿಸಿರುವುದು ಸ್ಪಷ್ಟವಾಗಿದೆ . ಇದರಿಂದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ನ್ಯಾಯ ಸಾಧ್ಯವಾಗಲಿದೆ.ಇದು ಭಾರತದ ಆರ್ಥಿಕ ಬೆಳವಣಿಗೆಗೆ ಹೊಸ ಆಯಾಮ ನೀಡುವ ವಾಸ್ತವಿಕ ಬಜೆಟ್ ಎನ್ನುವುದರಲ್ಲಿ ಸಂಶಯವಿಲ್ಲ.


Be the first to comment on "ಕೇಂದ್ರ ಬಜೆಟ್ 2026-27: ಸರ್ವೋದಯದ ಸಕಾರಾತ್ಮಕ ಬಜೆಟ್ – ಶಾಸಕ ರಾಜೇಶ್ ನಾಯ್ಕ್"