ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ವತಿಯಿಂದ ಜನವರಿ 18ರಿಂದ ಫೆ.1ರವರೆಗೆ ತಾಲೂಕಿನ 12 ಕಡೆಗಳಲ್ಲಿ ಹಿಂದು ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಈ ವಿಷಯವನ್ನು ಕಾರ್ಯಕ್ರಮದ ಸಂಯೋಜಕರಾದ ಪ್ರಸಾದ್ ಕುಮಾರ್ ಬಿ.ಸಿ.ರೊಡಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಮಾಜಿಕ ಸೇವಾ, ಸಹಕಾರ, ಸ್ವಾವಲಂಬನೆ ವೃದ್ಧಿಸುವ ಸಲುವಾಗಿ, ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸೇವಾ, ಕ್ರೀಡಾ, ಕಲಾ, ಸಹಕಾರಿ ಇತ್ಯಾದಿ ಎಲ್ಲ ಪ್ರಕಾರದ ಸ್ವಯಂಸೇವಾ ಸಂಸ್ಥೆಗಳು ಮತ್ತು ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಕೌಟುಂಬಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರಸ್ಯದ ಜಾಗರಣ, ಪರಿಸರ ಸಂರಕ್ಷಣೆಯ ಸಂಕಲ್ಪ, ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಜೀವನ ಪದ್ಧತಿ ಮತ್ತು ನಾಗರಿಕ ಕರ್ತವ್ಯಗಳ ಪಾಲನೆಯ ಅನುಷ್ಠಾನದಂಥ ಆದರ್ಶಗಳ ಅಡಿಯಲ್ಲಿ ಸಮಾಜಕ್ಕಾಗಿ ಸಂಘಟಿತವಾಗಿ ಸ್ಥಳೀಯ ಸಮಾಜವೇ ನಡೆಸುವ ಕಾರ್ಯಕ್ರಮಗಳಿವು ಎಂದವರು ಮಾಹಿತಿ ನೀಡಿದರು. ಶೋಭಾಯಾತ್ರೆ ಅಪರಾಹ್ನ 2.30ಕ್ಕೆ ಆರಂಭಗೊಂಡರೆ, 3ಕ್ಕೆ ಕಾರ್ಯಕ್ರಮ ಆರಂಭಗೊಳ್ಳುವುದು.

18ರಂದು ಅಪರಾಹ್ನ ಗಂಟೆ 3ಕ್ಕೆ ಫರಂಗಿಪೇಟೆ ಮಂಡಲದ ಫರಂಗಿಪೇಟೆಯಲ್ಲಿ ಆಂಜನೇಯ ದೇವಸ್ಥಾನದಲ್ಲಿ (ಕಡೆಗೋಳಿ ಪೊಳಲಿ ದ್ವಾರದಿಂದ ಮೆರವಣಿಗೆ), ಚೆನ್ನೈತೋಡಿ ಮಂಡಲದ ಆಲದಪದವಿನ ಶ್ರೀನಿವಾಸನಗರದಲ್ಲಿ (ವಾಮದಪದವು ಮತ್ತು ಇರ್ವತ್ತೂರಿನಿಂದ ಶೋಭಾಯಾತ್ರೆ), 25ರಂದು ಸಂಗಬೆಟ್ಟು ಮಂಡಲದ ಕಾರ್ಯಕ್ರಮ ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ (ಶ್ರೀರಾಮನಗರ ಮೈದಾನದಿಂದ ಶೋಭಾಯಾತ್ರೆ), ಬಂಟ್ವಾಳ ಕಸ್ಬಾ ಮಂಡಲದಿಂದ ಮಣಿಹಳ್ಳದ ಪಣೆಕ್ಕಳಪಡ್ಪು ಮೈದಾನದಲ್ಲಿ (ಜಕ್ರಿಬೆಟ್ಟು ವೆಂಕಟ್ರಮಣ ಭಜನಾ ಮಂದಿರದಿಂದ ಮೆರವಣಿಗೆ), ಅರಳ ಮಂಡಲದಿಂದ ಕೊಯಿಲದ ಶ್ರಿಯಾ ಗಾರ್ಡನ್ ನಲ್ಲಿ )ಕೊಯಿಲ ಶಾರದಾ ಮಂಟಪ, ರಾಯಿ ಮಹಾಲಿಂಗೇಶ್ವರ ದೇವಸ್ಥಾನ, ಕೊಯಿಲ ಕ್ವಾರ್ಟಸ್ ನಿಂದ ಶೋಭಾಯಾತ್ರೆ),ಕರಿಯಂಗಳ ಮಂಡಲದಿಂದ ಪುಂಚಮೆಯಿಂದ ಶೋಭಾಯಾತ್ರೆ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಚೆಂಡಿನಗದ್ದೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಫೆ.1ರಂದು ಸರಪಾಡಿ ಮಂಡಲ ಮುನ್ನಲಾಯಿಪದವುನಿಂದ ಶೋಭಾಯಾತ್ರೆ, ಪೆರಿಯಪಾದೆ ದುಗಲಾಯ ಕೊಡಮಣಿತ್ತಾಯ ಪರಿವಾರ ದೈವಸ್ಥಾನದಲ್ಲಿ ಕಾರ್ಯಕ್ರಮ, ಮೇರಮಜಲು ಬ್ರಹ್ಮರಕೂಟ್ಲು ಬ್ರಹ್ಮಸನ್ನಿಧಿಯಿಂದ ಮೆರವಣಿಗೆ ಪೆರಿಯೋಡಿಬೀಡು ಬಾಕಿಮಾರುಗದ್ದೆಯಲ್ಲಿ ಕಾರ್ಯಕ್ರಮ, ಕಾವಳಮೂಡೂರು ಮಂಡಲದಿಂದ ಬಾಂಬಿಲ ಅಗ್ನಿದುರ್ಗೆ ದೇವಸ್ಥಾನ ದ್ವಾರದಿಂದ ಮೆರವಣಿಗೆ, ಮಧ್ವ ಕೊಡಮಣಿತ್ತಾಯ ದೈವಸ್ಥಾನ ಮುಂಭಾಗ ಕಾರ್ಯಕ್ರಮ, ಅಮ್ಟಾಡಿ ನಲ್ಕೆಮಾರ್ ಸೊಸೈಟಿ ಬಳಿಯಿಂದ ಮೆರವಣಿಗೆ, ಕಿನ್ನಿಬೆಟ್ಟು ಹಿಂದು ವಿಜಯ ಸಂಗಮ ಮೈದಾನದಲ್ಲಿ ಕಾರ್ಯಕ್ರಮ, ಬಿ.ಮೂಡ ಮಂಡಲದಿಂದ ಬಿ.ಸಿ.ರೋಡ್ ಕೈಕಂಬ ಪೊಳಲಿ ದ್ವಾರದಿಂದ ಮೆರವಣಿಗೆ ಮಹಾಕಾಳಿಬೆಟ್ಟು ಮೈದಾನದಲ್ಲಿ ಸಭೆ ನಡೆಯಲಿದೆ. ಅದೇ ದಿನ ಉಳಿ ಮಂಡಲದಿಂದ ಕಕ್ಯಪದವು ಗರೋಡಿಯಿಂದ ಮೆರವಣಿಗೆ ಪಂಚದುರ್ಗಾ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕರ್ಪೆ, ಮಹಿಳಾ ಸಂಯೋಜಕಿ ಸುಲೋಚನಾ ಜಿ.ಕೆ.ಭಟ್, ಉಪಾಧ್ಯಕ್ಷರಾದ ರಾಮದಾಸ್ ಬಂಟ್ವಾಳ, ಉಮೇಶ್ ಶೆಟ್ಟಿ ಬರ್ಕೆ, ಅನಿಲ್ ಪಂಡಿತ್, ಸಹಸಂಯೋಜಕರಾದ ಮಚ್ಚೇಂದ್ರ ಸಾಲ್ಯಾನ್, ಡೊಂಬಯ್ಯ ಅರಳ, ಪ್ರಮುಖರಾದ ದಾಮೋದರ ನೆತ್ತರಕೆರೆ, ಸಂತೋಷ್ ಸರಪಾಡಿ ಉಪಸ್ಥಿತರಿದ್ದರು.


Be the first to comment on "Bantwal: ಬಂಟ್ವಾಳದ 12 ಕಡೆಗಳಲ್ಲಿ ಜ.18ರಿಂದ ಫೆ.1ರವರೆಗೆ ಹಿಂದು ಸಂಗಮ – ಸಂಪೂರ್ಣ ವಿವರಗಳು ಇಲ್ಲಿವೆ"