
ಕರಾವಳಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಮಲತಾಯಿ ಧೋರಣೆ ತಾಳುತ್ತಿದ್ದು, ಅನಾವಶ್ಯಕ ಕೆಟ್ಟ ಇಮೇಜ್ ನೀಡಲು ಯತ್ನಿಸುತ್ತಿದೆ. ಕರಾವಳಿ ವಿರೋಧಿ ನೀತಿಯನ್ನು ಪ್ರಕಟಪಡಿಸುವ ಕಾರ್ಯವನ್ನು ನಾಯಕರು ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬಿಜೆಪಿಯ ಬಂಟ್ವಾಳದ ವಿಶೇಷ ಕಾರ್ಯಕಾರಿಣಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಸರಕಾರದ ಯಾವ ರೀತಿ ಇರಬಾರದು ಎಂಬುದಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಉತ್ತಮ ಉದಾಹರಣೆ ಎಂದವರು ಹೇಳಿದರು.
ರಾಜ್ಯ ಸರಕಾರವು ಪ್ರಧಾನಿ ಮೋದಿಯವರ ಮೇಲಿನ ದ್ವೇಷದಿಂದ ೭೦ ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಯೋಜನೆಯ ಸೇವೆ ನೀಡದೆ ಹಿರಿಯ ನಾಗರಿಕರಿಗೆ ವಂಚಿಸುವ ಕಾರ್ಯ ಮಾಡಿದೆ. ಕೇಂದ್ರವು ಜನವಿಶ್ವಾಸ್ ಬಿಲ್ ಮೂಲಕ ಜನರ ಬದುಕನ್ನು ಸದೃಢ ಗೊಳಿಸುವ ಕಾರ್ಯ ಮಾಡಲಿದೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ವೇದಿಕೆಯಲ್ಲಿದ್ದರು.ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಹರೀಶ್ ಶೆಟ್ಟಿ ಪಡು ಕಾರ್ಯಕ್ರಮ ನಿರ್ವಹಿಸಿದರು.


Be the first to comment on "Captian Brijesh Chowta At Bantwal: ಕರಾವಳಿ ವಿರುದ್ಧ ರಾಜ್ಯ ಸರಕಾರ ಮಲತಾಯಿ ಧೋರಣೆ: ಕ್ಯಾ. ಬ್ರಿಜೇಶ್ ಚೌಟ"