
ಮಂಗಳೂರು: 2026ರ ಸ್ವಾಗತಕ್ಕೆ ಭರ್ಜರಿ ತಯಾರಿ ನಡೀತಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ತಮ್ಮ ಕಮೀಷನರೇಟ್ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಸಾರ್ವಜನಿಕ ಹಿತಾಸಕ್ತಿಯ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಅವು ಹೀಗಿವೆ.

- ಹೊಸ ವರ್ಷಾಚರಣೆ ಆಯೋಜನೆ ಮಾಡುವ ಹೋಟೆಲ್, ರೆಸ್ಟೊರೆಂಟ್, ಕ್ಲಬ್, ರೆಸಾರ್ಟ್ ಗಳು ಕಾರ್ಯಕ್ರಮ ಆಯೋಜಿಸಲು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸಹಾಯಕ ಪೊಲಿಸ್ ಆಯುಕ್ತರ ಕಚೇರಿಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು. ಅರ್ಜಿಗಳನ್ನು ಡಿಸೆಂಬರ್ 23ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಿ, ಅನುಮತಿ ಪಡೆದುಕೊಳ್ಳಬೇಕು.
- ಪೂರ್ವಾನುಮತಿ ಇಲ್ಲದ ಹೊಸ ವರ್ಷಾಚರಣೆ ಆಯೋಜಿಸಲು ಅನುಮತಿ ನೀಡಲಾಗುವುದಿಲ್ಲ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
- ಹೊಸ ವರ್ಷದ ಕಾರ್ಯಕ್ರಮ ರಾತ್ರಿ 12.30ರೊಳಗೆ ಪೂರ್ಣಗೊಳ್ಳಬೇಕು. ಈ ಸಮಯದ ಬಳಿಕ ಕಾರ್ಯಕ್ರಮ ಆಯೋಜಿಸಲು ಅನುಮತಿಸಲಾಗುವುದಿಲ್ಲ.
- ಧ್ವನಿಮುದ್ರಣ ವ್ಯವಸ್ಥೆಗಳು, ಲೌಡ್ ಸ್ಪೀಕರ್ ಗಳನ್ನು ಬಳಸಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು. ಧ್ವನಿಯ ಮಟ್ಟ ಶಬ್ದ ಮಾಲಿನ್ಯ ನಿಯಮಗಳು 2000 ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಅನುಸರಿಸಬೇಕು. ಡಿಜೆ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಯಾವುದೇ ಕಾರಣಕ್ಕೂ ನಿಷೇಧಿತ ಮಾದಕ ವಸ್ತುಗಳ ಸಂಗ್ರಹಣೆ, ಸೇವನೆ ಸಂಪೂರ್ಣ ನಿಷೇಧ. ಹೊಸ ವರ್ಷಾಚರಣೆ ನೆಪದಲ್ಲಿ ಅಶ್ಲೀಲ ನೃತ್ಯಗಳು, ಅರೆನಗ್ನ ಪ್ರದರ್ಶನ, ಜೂಜು ಹಾಗೂ ಇನ್ನಿತರ ಅನೈತಿಕ ಚಟುವಟಿಕೆಗಳನ್ನು ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
- ಮದ್ಯ ಮಾರಾಟ, ವಿತರಣೆಗೆ ಸ್ಥಳೀಯ ಅಬಕಾರಿ ಇಲಾಖೆಯಿಂದ ಲಿಖಿತ ಅನುಮತಿ ಕಡ್ಡಾಯ.
- ಆಯೋಜಕರು ಸಂಬಂಧಿತ ಇಲಾಖೆಗಳಿಂದ ಪಡೆದ ಲೈಸನ್ಸ್ ಮತ್ತು ಅನುಮತಿ ಪ್ರಕಾರ, ನಿರ್ಧರಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
- ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಉದ್ಯಾನ, ಕ್ರೀಡಾಂಗಣ, ರೈಲ್ವೆ ನಿಲ್ದಾಣ ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ, ಮದ್ಯಪಾನ ಕಟ್ಟುನಿಟ್ಟು ನಿಷೇಧ.
- ವಿದ್ಯಾರ್ಥಿಗಳು, ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿ, ಕಿಡಿಗೇಡಿತನ ಪ್ರದರ್ಶಿಸಿದರೆ, ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
- ಆಯೋಜಕರು ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಅಗ್ನಿಶಾಮಕ, ತುರ್ತು ವೈದ್ಯಕೀಯ ವಾಹನ, ಇತರ ಭದ್ರತಾ ಕ್ರಮ ಸಂಯೋಜಿಸಬೇಕು. ಯಾವುದೇ ಅನಾಹುತ ತಡೆಗಾಗಿ ಸಾರ್ವಜನಿಕ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಬೇಕು. ಹೋಟೆಲ್, ಕ್ಲಬ್, ವಿಶೇಷ ಕೂಟಗಳ ವ್ಯವಸ್ಥಾಪಕರು ಮದ್ಯವಿತರಣೆಯಂಥ ವ್ಯವಸ್ಥೆಗೊಳಿಸಿದ್ದಲ್ಲಿ, 18 ವರ್ಷದ ಕೆಳಗಿನ ಅಪ್ರಾಪ್ತರಿಗೆ ಅಂಥ ಕಾರ್ಯಕ್ರಮಗಳಿಗೆ ಪ್ರವೇಶ ನಿರ್ಬಂಧಿಸುವುದು.
- ಸಂಭ್ರಮಾಚರಣೆ ಹೆಸರಲ್ಲಿ ಮಹಿಳೆಯರು, ಹೆಣ್ಣುಮಕ್ಕಳನ್ನು ಚುಡಾಯಿಸುವ, ಕಿರುಕುಳ ನೀಡುವ, ಹಿಂಸಾಚಾರ ಅಥವಾ ಅಶ್ಲೀಲ ಚಟುವಟಿಕೆ ತಡೆಯಲು ವಿಶೇಷ ಕಾರ್ಯಪಡೆ ನಿಯೋಜಿಸಲಾಗುತ್ತದೆ.
- ಮದ್ಯಪಾನ ಮಾಡಿ, ವಾಹನ ಚಾಲನೆ ಮಾಡುವವರ ಕುರಿತು ನಿಗಾ ವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನೊಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆ, ಮಂಗಳೂರು ನಗರದ ಎಲ್ಲ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ. ಮದ್ಯಪಾನ ಮಾಡಿ, ವಾಹನ ಚಲಾವಣೆ ಮಾಡುವವರ ವಿರುದ್ಧ ಡ್ರಂಕ್ ಆಂಡ್ ಡ್ರೈವ್ ರೀತಿ ಕಾನೂನು ಕ್ರಮ ಕೈಗೊಂಡು, ವಾಹನ ಮುಟ್ಟುಗೋಲು ಹಾಕಲಾಗುವುದು.
- ಸ್ಟಂಟ್ ಚಟುವಟಿಕೆಗಳು, ವೀಲಿಂಗ್, ಡ್ರಾಗ್ ರೇಸಿಂಗ್, ವೇಗದ ಚಾಲನೆ, ಧ್ವನಿಯ ಶಬ್ದರಾಶಿ ಉತ್ಪಾದಿಸುವ ಕಾರ್ಯ ಕಡ್ಡಾಯ ನಿಷೇಧ. ಇವುಗಳನ್ನು ತಡೆಯಲು ವಿಶೇಷ ತಂಡ ರಚನೆ.
- ಇತರೆ ಸಾರ್ವಜನಿಕ ಸ್ಥಳ, ಸಮುದ್ರ ಬದಿಯಲ್ಲಿ ಮದ್ಯಸೇವನೆ, ಅಶ್ಲೀಲ ವರ್ತನೆ, ಪ್ರದರ್ಶನ ನಿಷೇಧ.
- ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ಪಟಾಕಿ, ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಲಾಗಿದೆ.


Be the first to comment on "ಮಂಗಳೂರು: ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ – ವಿವರಗಳೇನು?"