ಚಳಿ, ಬಿಸಿಲು ಇರಲಿ, ಮಳೆಯೂ ಬರಲಿ. ಬಿ.ಸಿ.ರೋಡಿನಲ್ಲಿ ಬಸ್ಸಿಗಾಗಿ ಕಾಯುವ ಪ್ರಯಾಣಿಕರಿಗೆ ಆಕಾಶವೇ ಸೂರು. ಇದುವರೆಗೂ ಸಮರ್ಪಕ ಬಸ್ ನಿಲ್ದಾಣದ ನಿರ್ಮಾಣವನ್ನೂ ಆಡಳಿತ ಮಾಡಿಲ್ಲ. ಹೀಗಾಗಿ ಬಸ್ಸುಗಳು ರಸ್ತೆಯ ಮಧ್ಯವೇ ನಿಂತರೆ, ಪ್ರಯಾಣಿಕರೂ ಅಲ್ಲಿಗೆ ಓಡಿ ಹತ್ತಬೇಕಾದ ಪರಿಸ್ಥಿತಿ.ಏರು ತಗ್ಗಿರುವ ಜಾಗದಲ್ಲಿ ಪುತ್ತೂರು, ಧರ್ಮಸ್ಥಳ, ಹಾಸನಕ್ಕೆ ತೆರಳುವ ಬಸ್ಸುಗಳಿಗೆ ಅವರು ಕಾಯಬೇಕು. ನಿಲ್ಲಲು ಪ್ರಯಾಣಿಕರ ತಂಗುದಾಣವೇ ಇಲ್ಲ. ಅಂಗಡಿ ಮುಂಗಟ್ಟುಗಳ ಜಗಲಿಯೇ ನೆರಳಿನಾಶ್ರಯ.ಲಯನ್ಸ್ ಕ್ಲಬ್ ವತಿಯಿಂದ ಪ್ರಸ್ತುತ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಎರಡು ಸಾಲಿನ ಆಸನ ವ್ಯವಸ್ಥೆ ಮಾಡಲಾಗಿದೆ. ಆದರೆ ಆಡಳಿತದ ವತಿಯಿಂದ ಯಾವುದೇ ವ್ಯವಸ್ಥೆ ಕಲ್ಪಿಸಲಾಗಿಲ್ಲ.

ಹೆದ್ದಾರಿ ಅಗಲಗೊಂಡ ಬಳಿಕ ಇದೇ ಸ್ಥಿತಿ:ಹೆದ್ದಾರಿ ಅಗಲಗೊಳ್ಳುವ ಪ್ರಕ್ರಿಯೆಯ ಸನ್ನಿವೇಶದಲ್ಲಿ ಫ್ಲೈಓವರ್ ನಿರ್ಮಾಣದ ನಂತರ ಈ ಸ್ಥಿತಿ,ಸರಿಸುಮಾರು ಹದಿನಾರು ವರ್ಷಗಳ ಬಳಿಕವೂ ಸರಕಾರಗಳು, ಜನಪ್ರತಿನಿಗಳು ಬದಲಾದರೂ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಅದೇ ಜಾಗದಲ್ಲಿ ನಿಲ್ಲಬೇಕು, ಎತ್ತರ, ತಗ್ಗಿರುವ ಜಾಗದಲ್ಲಿ ತಾನು ಸಾಗುವ ಬಸ್ ಎಲ್ಲಿ ನಿಲ್ಲುತ್ತದೆ ಎಂದು ಹುಡುಕಬೇಕು.
2017ರಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಾಣಗೊಂಡಿತು. ಆದರೆ ಮಂಗಳೂರಿಗೆ ಕೆಎಸ್ಸಾರ್ಟಿಸಿಯಲ್ಲಿ ತೆರಳುವ ಪ್ರಯಾಣಿಕರಿಗಷ್ಟೇ ಇದು ಅನುಕೂಲವಾಯಿತೇ ವಿನಃ ಬಸ್ ನಿಲ್ದಾಣದ ಯೋಜನೆ ರೂಪಿಸುವಾಗಲೇ ಬಸ್ ಹೇಗೆ ಬರುತ್ತದೆ ಎಂಬ ಚಿಂತನೆ ನಡೆಸಲಿಲ್ಲ. ಮಂಗಳೂರಿನಿಂದ ಬೆಂಗಳೂರು, ತಿರುಪತಿ ಕಡೆಗೆ ತೆರಳುವ ವೋಲ್ವೊ, ಮಲ್ಟಿ ಆಕ್ಸೆಲ್ ಸಹಿತ ಅತ್ಯಾಧುನಿಕ ಐಶಾರಾಮಿ ಬಸ್ಸುಗಳು ನಿಲ್ದಾಣ ಪ್ರವೇಶಿಸುವುದೇ ಇಲ್ಲ. ಏರ್‌ಪೋರ್ಟ್‌ನಂತಿದೆ ಎಂದು ಬಣ್ಣಿಸಲಾದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಏರ್‌ಬಸ್ಸುಗಳು ಬಾರದೇ ಇದ್ದರೆ ಪ್ರಯೋಜನವೇನು?

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಕಾಸರಗೋಡಿಗೆ ಬಸ್ ಸರ್ವೀಸ್ ಹಾಗೂ ಬಿ.ಸಿ.ರೋಡ್ ನಿಂದ ರಾತ್ರಿ ಬೆಂಗಳೂರಿಗೆ ಸ್ಲೀಪರ್ ಸರ್ವೀಸ್ ಬಸ್ಸುಗಳು ಆರಂಭಗೊಂಡದ್ದಷ್ಟೇ ಸಾಧನೆ. ಮಂಗಳೂರಿಗೆ ತೆರಳುವ ಸ್ಥಳೀಯ ಬಸ್ಸುಗಳು ಬಂದು ಹೋಗುತ್ತವೆ. ಆದರೆ ಪ್ರಯಾಣಿಕರು ಬಿ.ಸಿ.ರೋಡಿನ ಮಾಮೂಲಿ ಜಾಗದಲ್ಲೇ ಬಸ್ ಹತ್ತುತ್ತಾರೆ. ಕೆಎಸ್ಸಾರ್ಟಿಸಿ ಬಸ್ಸುಗಳು ನಿಲ್ದಾಣ ಪ್ರವೇಶಿಸುವ ಹೊತ್ತಿಗೆ ಪ್ರಯಾಣಿಕರು ಬಸ್ಸುಗಳ ಸೀಟುಗಳನ್ನು ಅಲಂಕರಿಸಿ ಆಗಿರುತ್ತದೆ. ನಿಲ್ದಾಣದಲ್ಲಿ ಟಿಸಿಯ ಎಂಟ್ರಿಗಷ್ಟೇ ಅವಕಾಶ. ಖಾಸಗಿ ಬಸ್ಸುಗಳು ಕಾಂಟ್ರಾಕ್ಟ್ ಕ್ಯಾರೇಜ್ ಆದ ಕಾರಣ ಅವರು ನಿಂತಲ್ಲೇ ನಿಲ್ದಾಣ.
ಮಂಗಳೂರಿಗೆ ತೆರಳುವ ಪ್ರಯಾಣಿಕರು ಸಿಕ್ಕಿದಲ್ಲಿ ನಿಂತರೆ, ಧರ್ಮಸ್ಥಳ, ಪುತ್ತೂರು, ಚಿಕ್ಕಮಗಳೂರು, ಮಡಿಕೇರಿ, ಮೈಸೂರು, ಬೆಂಗಳೂರು ಕಡೆಗಳಿಗೆ ತೆರಳುವ ಪ್ರಯಾಣಿಕರಿಗೆ ಇನ್ನೂ ಸರಿಯಾದ ಸೂರು ನಿರ್ಮಾಣವಾಗಿಲ್ಲ. ಈಗಿನ ಬಸ್ ನಿಲ್ದಾಣ ಎಂಬ ಜಾಗದಲ್ಲಿ ಮೂಡುಬಿದಿರೆ, ಮುಡಿಪು ಸಹಿತ ಸ್ಥಳೀಯ ಬಸ್ಸುಗಳು ಪ್ರವೇಶಿಸುತ್ತವೆಯೇ ಹೊರತು ಅನ್ಯಬಸ್ಸುಗಳು ಬರುವುದಿಲ್ಲ


Be the first to comment on "BCROAD: ಬಿ.ಸಿ.ರೋಡ್: ರಸ್ತೆಯಲ್ಲೇ ಬಸ್ಸುಗಳ ನಿಲುಗಡೆ"