ಇಫ್ಕೋ ಕಂಪನಿಯ ಡೀಲರ್ ಶಿಪ್ ನೀಡುತ್ತೇವೆ ಎಂದು ನೀಲೇಶ್ ಮಿಶ್ರಾ ಎಂಬ ಹೆಸರಲ್ಲಿ ಬಂಟ್ವಾಳದ ಇಂಜಿನಿಯರಿಂಗ್ ಮುಗಿಸಿ ಮನೆಯಲ್ಲಿರುವ ಯುವಕರೊಬ್ಬರಿಗೆ ಕರೆ ಮಾಡಿದ ವ್ಯಕ್ತಿ, ಸಂತ್ರಸ್ತರನ್ನು ನಂಬಿಸಿ, 17,60,810 ರೂ ವಂಚಿಸಿದ್ದಾಗಿ ಮಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಇಂಜಿನಿಯರಿಂಗ್ ಮುಗಿಸಿ ಪ್ರಸ್ತುತ ಮನೆಯಲ್ಲಿಯೇ ಇರುವ ಅವರಿಗೆ ಜುಲೈ 4ರಂದು ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಇಫ್ಕೊ ಕಂಪನಿಯ ರಿಲೇಶನ್ ಶಿಪ್ ಮ್ಯಾನೇಜರ್ ನೀಲೇಶ್ ಮಿಶ್ರಾ ಎಂದು ಪರಿಚಯಿಸಿಕೊಂಡಿದ್ದು, ಇಫ್ಕೋ ಕಂಪನಿಯ ಡೀಲರ್ ಶಿಪ್ ನೀಡುತ್ತೇವೆ ಎಂದು ಹೇಳಿದ್ದು, ಅದಕ್ಕೆ ದೂರುದಾರರು ಒಪ್ಪಿಕೊಂಡಿದ್ದಾರೆ. ಬಳಿಕ ದೂರುದಾರರ ಇ-ಮೇಲ್ ಗೆ ಸಂಬಂಧಪಟ್ಟ ಅಪ್ಲಿಕೇಶನ್ ಫಾರ್ಮ್ ಕಳುಹಿಸಿದ್ದು ಅದನ್ನು ಭರ್ತಿ ಮಾಡಿ ಅವರು ತಿಳಿಸಿದಂತೆ ಪಾನ್ ಕಾರ್ಡ್, ಬ್ಯಾಂಕ್ ವಿವರ ಹಾಗೂ ವೈಯಕ್ತಿಕ ದಾಖಲಾತಿಗಳನ್ನು ಕಳುಹಿಸಿದ್ದಾರೆ. ನಂತರ ರಿಜಿಸ್ಟ್ರೇಶನ್ ಮೊತ್ತವೆಂದು ರೂ.35,000 ಹಣ ಕಳುಹಿಸಲು ತಿಳಿಸಿದ್ದಕ್ಕೆ ಕಳುಹಿಸಿರುತ್ತಾರೆ. ನಂತರ ಅಗ್ರಿಮೆಂಟ್ ಚಾರ್ಜ್, ಪ್ರೊಡಕ್ಟ್ ಅಮೌಂಟ್, ಶಿಫ್ಟಿಂಗ್ ಅಮೌಂಟ್, ಜಿಎಸ್ ಟಿ ಚಾರ್ಜ್, ಸಾಗಾಟ ವೆಚ್ಚ, ಸಾಫ್ಟ್ ವೇರ್ ವೆಚ್ವವೆಂದು ವಿವಿಧ ಚಾರ್ಜಸ್‌ಗಳಿಗಾಗಿ ಹಣ ಕಳುಹಿಸಲು ತಿಳಿಸಿ ಸಾಗಾಟ ಸಮಯ ಏನಾದರೂ ಸಮಸ್ಯೆಯಾದರೆ ಕರೆ ಮಾಡಿ ಎಂದು ಹೇಳಿ ಚಾಲಕರ ನಂಬರ್ ನೀಡಿದ್ದಾರೆ. ಅದರಂತೆ ದೂರುದಾರರು ವಿವಿಧ ಚಾರ್ಜಸ್‌ಗಳಿಗಾಗಿ ಹಂತಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ. 17,60,810 ಹಣ ಕಳುಹಿಸಿರುತ್ತಾರೆ. ಇದಾದ ನಂತರ ಅಪರಿಚಿತ ವ್ಯಕ್ತಿಗಳು ಆಗಸ್ಟ್ 8ರಂದು ಕರೆ ಮಾಡಿ ನಾವು ಬೆಂಗಳೂರಿಗೆ ಬಂದಿದ್ದು, 10ರಂದು ದೂರುದಾರರ ಮಡಂತ್ಯಾರ್ ನ ಗೋಡೌನ್ ಗೆ ಬರುವುದಾಗಿ ತಿಳಿಸಿದ್ದಾರೆ. ನಂತರ ಆ.11ರಂದು ದೂರುದಾರರು ಆರೋಪಿ ನೀಡಿದ ಮೊಬೈಲ್ ನಂಬ್ರಗಳಿಗೆ ಕರೆ ಮಾಡಿದಾಗ ಎಲ್ಲಾ ಮೊಬೈಲ್ ನಂಬ್ರಗಳ ಸ್ವಿಚ್ ಆಫ್ ಆಗಿದ್ದರಿಂದ ವಂಚಕರು ಕೊಟ್ಟಿರುವ ಟೋಲ್ ಫ್ರೀ ನಂಗೆ ಕರೆ ಮಾಡಿದಾಗ ನಿಮ್ಮ ಪ್ರೊಡೆಕ್ಟ್ ಬರುತ್ತಿರುವುದರಿಂದ ಅಲ್ಲಿ ನೆಟ್ ವರ್ಕ್ ಸಮಸ್ಯೆ ಇರಬಹುದು ನಾವು ಅವರಿಗೆ ತಿಳಿಸುತ್ತೇವೆ.ಎಂದು ಹೇಳಿದ್ದಾರೆ. ನಂತರ ಯಾವುದೇ ಕರೆ ಬಂದಿರುವುದಿಲ್ಲ ಹಾಗೂ ದೂರುದಾರರು ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿದ್ದು ಈ ಬಗ್ಗೆ ಸಂಶಯಗೊಂಡು ಬೇರೆಯವರಲ್ಲಿ ವಿಚಾರಿಸಿದಾಗ ಇದೊಂದು ಮೋಸದ ಜಾಲ ಎಂದು ತಿಳಿದು ಬಂದಿದೆ. ಅಪರಿಚಿತ ವ್ಯಕ್ತಿ ಕರೆ ಮಾಡಿ ಡೀಲರ್ ಶಿಪ್ ನೀಡುವುದಾಗಿ ಹೇಳಿ ರೂ.17,60,810 ಹಣ ಪಡೆದುಕೊಂಡು ವಂಚಿಸಿರುವ ಕುರಿತು ಸಿ ಇ ಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.

OPTIC WORLD


Be the first to comment on "ಡೀಲರ್ ಶಿಪ್ ಕೊಡಿಸುತ್ತೇವೆ ಎಂದು ನಂಬಿಸಿ 17.6 ಲಕ್ಷ ರೂ ವಂಚನೆ: ಸೆನ್ ಠಾಣೆಗೆ ದೂರು"