
ಕಳೆದ ಆರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪುವಿನ ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಸದ್ದಿಲ್ಲದೆ ಕ್ರಾಂತಿಯೊಂದನ್ನು ಮಾಡುತ್ತಿದ್ದಾರೆ. ಶಾಲಾ ಪಾಠಗಳಲ್ಲಿ ಅಂತರ್ಜಲ ಹೆಚ್ಚಿಸುವ ವಿಧಾನಗಳು, ಮಳೆ ನೀರಿನ ಕೊಯ್ಲು ಇದರ ಬಗ್ಗೆ ಮಾಹಿತಿ ಮಾತ್ರ ಪಡೆಯುವ ವಿದ್ಯಾರ್ಥಿಗಳು ನಿಜ ಜೀವನದಲ್ಲಿ ಕಾರ್ಯಪ್ರವೃತ್ತರಾಗಿ ನಮ್ಮಿಂದ ಪರಿಸರಕ್ಕೆ ಅಳಿಲು ಸೇವೆ ನೀಡಲು ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.
ಪ್ರಸಕ್ತ ವರ್ಷ ಶಾಲೆಯ 79 ವಿದ್ಯಾರ್ಥಿಗಳು 164 ಇಂಗು ಗುಂಡಿಗಳು ನಿರ್ಮಿಸಿದ್ದಾರೆ .ಈ ಜಲ ಜಾಗೃತಿಯಲ್ಲಿ ವಿದ್ಯಾರ್ಥಿಗಳು ಕಳೆದ 6 ವರ್ಷಗಳಿಂದ ವಿಜ್ಞಾನ ಶಿಕ್ಷಕರಾದ ರೋಷನ್ ಪಿಂಟೊ ಮಾರ್ಗದರ್ಶನದಲ್ಲಿ ತೊಡಗಿಸಿಕೊಂಡಿರುತ್ತಾರೆ ಈವರೆಗೆ ಒಟ್ಟು 796 ಇಂಗು ಗುಂಡಿಗಳನ್ನು ನಿರ್ಮಿಸಿ ಮಾದರಿಯಾಗಿದ್ದಾರೆ
2019ರಲ್ಲಿ ಮಕ್ಕಳಿಗೆ ಇಂಗುಗುಂಡಿ ನಿರ್ಮಿಸಲು ಮಾರ್ಗದರ್ಶನ, ಪ್ರೇರಣೆ ನೀಡಲಾಯಿತು. ಇದೀಗ ಅವರೇ ಪಾಠ ಮಾಡುವಷ್ಟು ಅರಿತುಕೊಂಡಿದ್ದಾರೆ ಎಂಬ ಸಮಾಧಾನ ರೋಶನ್ ಪಿಂಟೋ ಅವರಿಗಿದೆ. ಇಂಗು ಗುಂಡಿ ನಿರ್ಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದರ ಜೊತೆಗೆ ಅತ್ಯಧಿಕ ಗುಂಡಿಗಳನ್ನು ನಿರ್ಮಿಸಿದ ವಿದ್ಯಾರ್ಥಿಗಳಾದ ರೋಯ್ಸ್ಟನ್ ಲೋಬೋ, ಜೀವನ್,ಸಿದ್ದಾರ್ಥ್, ಅಕ್ಷಿತಾ, ಧನ್ಯಶ್ರೀ , ಪ್ರಶ್ಮಿತ, ಶರ್ವಿನ್, ರಿಜ್ವಾನ, ಲಿಖಿತ ಇವರಿಗೆ ಮುಖ್ಯ ಶಿಕ್ಷಕಿ ಭಗಿನಿ ವೀರಾ ಅವರು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಇದು ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಪ್ರೇರಣೆ ಎಂದು ವಿಜ್ಞಾನ ಶಿಕ್ಷಕ ರೋಷನ್ ಪಿಂಟೊ ಹೇಳಿದರು
ರಜೆ ಸದುಪಯೋಗ ಮಾಡಿದ್ದು ಹೀಗೆ:
ಹೈಸ್ಕೂಲಿನ ಹಸಿರು ಭವಿಷ್ಯ ಪರಿಸರ ಸಂಘ ವತಿಯಿಂದ ಜೂನ್ ನಿಂದ ಆಗಸ್ಟ್ ತಿಂಗಳವರೆಗೆ ವಿದ್ಯಾರ್ಥಿಗಳಿಗೆ “ಪ್ರತಿ ಮಳೆ ಹನಿಯನ್ನು ನಿಲ್ಲಿಸೋಣ, ಭವಿಷ್ಯವನ್ನು ಉಳಿಸೋಣ”, ಎಂಬ ಧ್ಯೇಯದೊಂದಿಗೆ ಇಂಗು ಗುಂಡಿಗಳನ್ನು ನಿರ್ಮಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲಾ ವಠಾರದಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದ ಕಾರಣ ವಿದ್ಯಾರ್ಥಿಗಳು ಅವರ ಮನೆಯ ಸುತ್ತಮುತ್ತ, ರಸ್ತೆ ಬದಿಗಳಲ್ಲಿ , ಗುಡ್ಡಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಕೆಲವರು ಹೆತ್ತವರ ಸಹಾಯ ಪಡೆದರೆ ಇನ್ನೂ ಕೆಲವರು ಸ್ವತಃ ಪ್ರತಿ ದಿವಸ ಮಳೆಯ ರಜೆಯ ದಿನಗಳಲ್ಲಿ 3×2×2 ಅಡಿ ಅಳತೆಯ ಇಂಗು ಗುಂಡಿಗಳನ್ನು ನಿರ್ಮಿಸಿ ಮಾರ್ಗದರ್ಶಿ ಶಿಕ್ಷಕರಿಗೆ ಅದರ ಫೋಟೋಗಳನ್ನು ಕಳಿಸಿರುತ್ತಾರೆ. ಈ ಸ್ಪರ್ಧೆ ವಿಜ್ಞಾನ ಪಾಠದ ಒಂದು ಕಾರ್ಯ ಯೋಜನೆಯಾಗಿ ವಿದ್ಯಾರ್ಥಿಗಳು ತೆಗೆದುಕೊಂಡರು. ಹೀಗೆ ಪಾಠದ ಜೊತೆಗೆ ಮಳೆ ನೀರಿನ ಕೊಯ್ಲು ಹಾಗು ನೀರಿನ ಸಂರಕ್ಷಣೆಯ ಜೀವನ ಪಾಠ ತಿಳಿಯುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ ಅವರ ಪೋಷಕರಲ್ಲಿ, ನೆರೆಮನೆಯವರಲ್ಲಿ ನೀರು ಇಂಗಿಸುವ ಜಾಗೃತಿ ಉಂಟಾಗಿದೆ.

OPTIC WORLD
ಇಂಗುಗುಂಡಿಗಳು ಎಂದರೇನು?
ಇಂಗುಗುಂಡಿಗಳು (percolation pits) ಎಂದರೆ ಮಳೆ ನೀರನ್ನು ನೆಲದೊಳಗೆ ಹಾಯಿಸಲು ನಿರ್ಮಿಸುವ ಸಣ್ಣ ಗುಂಡಿಗಳು. ಇವು ಮಣ್ಣು ಮೂಲಕ ನೀರನ್ನು ಭೂಗರ್ಭಕ್ಕೆ ಹರಿಸಲು ಸಹಾಯ ಮಾಡುತ್ತವೆ. ಇವು ಭೂಗರ್ಭದ ನೀರಿನ ಮಟ್ಟವನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿಯಾದ ಉಪಾಯ.
ಇಂಗು ಗುಂಡಿ ನಿರಂತರ – ವಿಜ್ಞಾನ ಶಿಕ್ಷಕರ ಪ್ರೇರಣೆ
164 ಇಂಗು ಗುಂಡಿಗಳಲ್ಲಿ ಒಮ್ಮೆಗೆ 55,650 ಲೀಟರ್ ನೀರು ಇಂಗಿಸುವ ಸಾಮರ್ಥ್ಯ ವಿದ್ಯಾರ್ಥಿಗಳು ನಿರ್ಮಿಸಿದ 3 x 2 x 2 ಅಡಿ ಇಂಗು ಗುಂಡಿಯ ಒಟ್ಟು ಗಾತ್ರ 12 ಘನ ಅಡಿಯಾಗಿದೆ. ಅಂದರೆ ಒಂದು ಇಂಗು ಗುಂಡಿಯಲ್ಲಿ ಒಂದು ಬಾರಿ ಪೂರ್ಣ ನೀರು ತುಂಬಿಕೊಂಡರೆ 339.33 ಲೀಟರ್ ನೀರು ಇಂಗುತ್ತದೆ .164 ಇಂಗು ಗುಂಡಿಗಳಲ್ಲಿ ಒಮ್ಮೆಗೆ 55,650 ಲೀಟರ್ ನೀರು ಇಂಗಲ್ಪಡುತ್ತದೆ. ಇಷ್ಟು ದೊಡ್ಡ ಪ್ರಮಾಣದ ನೀರನ್ನು ವಿದ್ಯಾರ್ಥಿಗಳು ನಿರ್ಮಿಸಿದ ಇಂಗು ಗುಂಡಿಗಳಿಂದ ಭೂಮಿಯ ಆಳಕ್ಕೆ ಸೇರಿ ಅಂತರ್ಜಲದ ಅಭಿವೃದ್ಧಿಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಈ ಒಳ್ಳೆಯ ಕಾರ್ಯಕ್ಕೆ ಪರಿಸರದ ಜನರಿಂದ ಶ್ಲಾಘನೆ ದೊರೆತಿದೆ .
ಜೀವನದ ನೀರಿನ ಪಾಠ
ವಿದ್ಯಾರ್ಥಿಗಳಲ್ಲಿ ನೀರಿನ ಮೌಲ್ಯದ ಅರಿವು ಮೂಡುತ್ತದೆ. ಪರಿಸರದ ಬಗ್ಗೆ ಜವಾಬ್ದಾರಿ ಮತ್ತು ನೈತಿಕತೆಯು ಬೆಳೆದುಬರುತ್ತದೆ.ಭೂಗರ್ಭದ ನೀರಿನ ಮಟ್ಟ ಸುಧಾರಣೆಗೆ ಶೈಕ್ಷಣಿಕ ಸಂಸ್ಥೆಯೂ ಕೊಡುಗೆ ನೀಡುತ್ತದೆ.ನೀರಿನ ಮೌಲ್ಯವನ್ನು ಪುಸ್ತಕವಲ್ಲ, ಬದುಕು ಕಲಿಸಬೇಕು. ಇಂಗುಗುಂಡಿಗಳ ನಿರ್ಮಾಣ ಎಂಬ ಕ್ರಿಯಾತ್ಮಕ ಪಾಠವು ನೀರನ್ನು ಉಳಿಸುವ ಕಲೆಯನ್ನು ಬೋಧಿಸುತ್ತದೆ. ಇದು ಅವರ ಮನಸ್ಸಿನಲ್ಲಿ ಬದುಕಿನವರೆಗೆ ಉಳಿಯುವಂತಹ ಪಾಠ –ಜೀವನದ ನೀರಿನ ಪಾಠವಾಗಿದೆ.
ಸಿಸ್ಟರ್ ವೀರಾ ಪಿಂಟೊ, ಮುಖ್ಯ ಶಿಕ್ಷಕಿ, ಕಾರ್ಮೆಲ್ ಹೈಸ್ಕೂಲ್, ಮೊಡಂಕಾಪು ಹೀಗೆ ಹೇಳುತ್ತಾರೆ
‘’ ನಮ್ಮ ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಸುಮಾರು 794 ಇಂಗುಗುಂಡಿಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಲು ಹೆಮ್ಮೆಪಡುತ್ತೇನೆ. ಸುಮಾರು ಆರು ವರ್ಷಗಳಿಂದ ನಮ್ಮ ಶಾಲೆಯ ಹೆಮ್ಮೆಯ ವಿಜ್ಞಾನ ಶಿಕ್ಷಕರಾದ ರೋಷನ್ ಪಿಂಟೋ ಮಾರ್ಗದರ್ಶನದಲ್ಲಿ ನಿರ್ಮಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಬೆಳೆಸಿಕೊಳ್ಳಲು ಇದು ಸಹಕಾರಿಯಾಗಿದೆ.’’
ರೋಸ್ಟನ್ ಲೋಬೊ, 9ನೇ ತರಗತಿ ವಿದ್ಯಾರ್ಥಿ ಹೀಗೆ ಹೇಳುತ್ತಾರೆ
‘’ನಾನು ಸತತ ಮೂರು ವರ್ಷಗಳಿಂದ ಇಂಗುಗುಂಡಿ ಮಾಡುತ್ತಿದ್ದೇನೆ. ಶಿಕ್ಷಕರ ಮಾರ್ಗದರ್ಶನದಿಂದ ನಾನು ಮನೆಯಲ್ಲಿ ಇಂಗುಗುಂಡಿ ಮಾಡಿದೆ. ಮನೆಯವರ ಸಹಾಯವೂ ದೊರೆಯಿತು. ಹಾಗೆಯೇ ನೆರೆಕರೆಯವರೂ ಸಪೋರ್ಟ್ ಮಾಡಿದರು. ನಮ್ಮಲ್ಲಿರುವ ಬಾವಿಯಲ್ಲೂ ನೀರಿನ ಒರತೆ ಜಾಸ್ತಿಯಾಗಿದೆ.’’
ರೋಷನ್ ಪಿಂಟೋ, ವಿಜ್ಞಾನ ಶಿಕ್ಷಕರು ಹೀಗೆ ಹೇಳುತ್ತಾರೆ
‘’ನಮ್ಮ ಕಾರ್ಮೆಲ್ ಕಾನ್ವೆಂಟ್ ವಿದ್ಯಾರ್ಥಿಗಳು ಆರು ವರ್ಷಗಳಿಂದ ಇಂಗುಗುಂಡಿ ನಿರ್ಮಿಸುತ್ತಿದ್ದಾರೆ. ಒಂದು ಇಂಗುಗುಂಡಿ ಸುಮಾರು 339 ಲೀಟರ್ ನೀರು ಸಂಗ್ರಹಿಸುತ್ತದೆ. ಈ ವರ್ಷ 79 ವಿದ್ಯಾರ್ಥಿಗಳು 164 ಇಂಗುಗುಂಡಿ ನಿರ್ಮಿಸಿದ್ದು, ವಿದ್ಯಾರ್ಥಿಗಳು ಮಾಡುವ ಅಳಿಲ ಸೇವೆ, ಜೀವನದ ಪಾಠವಾಗಬೇಕು ಎಂಬುದು ನಮ್ಮ ಉದ್ದೇಶ’’
ಫಾಯಿಝಾ, 10ನೇ ತರಗತಿ ವಿದ್ಯಾರ್ಥಿನಿ ಹೀಗೆ ಹೇಳುತ್ತಾರೆ
‘’ನಾನು ಮೂರು ವರ್ಷಗಳಿಂದ ಇಂಗುಗುಂಡಿ ನಿರ್ಮಿಸುತ್ತಿದ್ದೇನೆ. ಈ ಬಾರಿ ಎರಡು ಇಂಗುಗುಂಡಿ ನಿರ್ಮಿಸಿದ್ದೇನೆ. ಶಾಲೆಯ ಎಲ್ಲ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ಇದರಿಂದ ಮಳೆನೀರಿನ ಮಹತ್ವ ತಿಳಿದುಕೊಳ್ಳಲು ಪ್ರಯೋಜನಕಾರಿಯಾಗಿದೆ. ಇದು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಆಶಿಸುತ್ತೇನೆ’’


Be the first to comment on "Bantwal: ಹನಿಹನಿ ನೀರನ್ನೂ ಹಿಡಿಯಲು ಇಂಗುಗುಂಡಿ, ಜಲಕ್ರಾಂತಿ ಮಾಡಿದ ಹೈಸ್ಕೂಲ್ ವಿದ್ಯಾರ್ಥಿಗಳು"