ಪ್ರಯಾಣದ ಅವಧಿ 2 ಗಂಟೆ 10 ನಿಮಿಷ.
ಬಿ.ಸಿ.ರೋಡಿನಿಂದ ಬಸ್ಸಿನಲ್ಲಿ ಕುಳಿತರೆ ನೇರ ಕಾಸರಗೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ. ಎಕ್ಸ್‌ಪ್ರೆಸ್ ಅಲ್ಲದಿದ್ದರೂ ನಿಧಾನವಂತೂ ಹೋಗೋದಿಲ್ಲ. ಇದು ಬಿ.ಸಿ.ರೋಡ್ ಕಾಸರಗೋಡು ಕೆ.ಎಸ್.ಆರ್.ಟಿ.ಸಿ. ಬಸ್ 2017ರ ಅಕ್ಟೋಬರ್ ತಿಂಗಳಲ್ಲಿ ಆರಂಭವಾದಾಗ ಕೇಳಿಬಂದ ಮಾತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ಅವರಿಂದಲೇ ಗ್ರೀನ್ ಸಿಗ್ನಲ್ ಪಡೆದು ಆರಂಭಗೊಂಡ ಈ ಬಸ್ ಸಂಚಾರ ಆರಂಭದಲ್ಲಿ ವಿರಳ ಪ್ರಯಾಣಿಕರನ್ನು ಕಂಡರೂ ಬರಬರುತ್ತಾ ಜನಪ್ರಿಯತೆ ಪಡೆದಿತ್ತು. ಆದರೆ ಇದೀಗ 12 ಟ್ರಿಪ್ ಗಳನ್ನು ಹೊಂದಿದ್ದ ಬಸ್ 5ಕ್ಕೆ ಇಳಿದಿದೆ. ಸಿಬ್ಬಂದಿ ಕೊರತೆ, ಆದಾಯ ಇಳಿಮುಖದ ಕಾರಣವನ್ನು ಇಲಾಖೆ ನೀಡುತ್ತದೆಯಾದರೂ ದುಬಾರಿ ದುಡ್ಡು ತೆತ್ತು, ನಿಧಾನವಾಗಿ ಹೋಗುವ ಬದಲು, ಕೆ.ಎಸ್.ಆರ್.ಟಿ.ಸಿ.ಯಲ್ಲಿ ಕಡಿಮೆ ದರ, ವೇಗವಾಗಿ ತಲುಪುವ ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ರೂಟ್ ಹೀಗಿದೆ:
ಬಿ.ಸಿ.ರೋಡ್ ನಿಂದ ಹೊರಟ ಕೆಎಸ್ಸಾರ್ಟಿಸಿ ಬಸ್ ಮೇಲ್ಕಾರ್, ಸಜಿಪ ಮಾರ್ಗವಾಗಿ ಮುಡಿಪುವಿಗೆ ಹೋಗುತ್ತದೆ. ಅಲ್ಲಿಂದ ದೇರಳಕಟ್ಟೆ ಮಾರ್ಗವಾಗಿ ತೊಕ್ಕೊಟ್ಟಿಗೆ ತಲುಪಿ ರಾಷ್ಟ್ರೀಯ ಹೆದ್ದಾರಿಯನ್ನು ಸೇರುತ್ತದೆ.

ಬಿ.ಸಿ.ರೋಡಿನಿಂದ ಕಾಸರಗೋಡಿಗೆ ತೆರಳಬೇಕು ಎಂದಿದ್ದರೆ ಪಂಪ್‌ವೆಲ್‌ಗೆ ತೆರಳಿ ಅಲ್ಲಿಂದ ಇನ್ನೊಂದು ಬಸ್ ಹಿಡಿಯಬೇಕು. ಈ ಮಾರ್ಗದಲ್ಲೂ ಸಾಕಷ್ಟು ಬಸ್ಸುಗಳಿವೆ. ಆದರೆ ಬಿ.ಸಿ.ರೋಡ್ ಮೇಲ್ಕಾರ್ ದೇರಳಕಟ್ಟೆ ತೊಕ್ಕೊಟ್ಟು ಮಂಜೇಶ್ವರ ಉಪ್ಪಳ ಕುಂಬಳೆ ಕಾಸರಗೋಡು ಮಾರ್ಗ 78 ಕಿ.ಮೀ. ಆಗತ್ತದೆ. ಆದರೂ ಪ್ರಯಾಣದ ಅವಧಿ 2 ಗಂಟೆ 10 ನಿಮಿಷ ಎಂಬುದು ಗಮನಾರ್ಹ.
ಏನು ಲಾಭ?
ಬಸ್ ಸಂಖ್ಯೆ ಗಂಟೆಗೊಂದು ಇದ್ದಾಗ, ಶಾಲೆ, ಕಾಲೇಜು, ಕಚೇರಿಗಳಿಗೆ ತೆರಳುವವರಿಗೆ ಅನುಕೂಲವಾಗುತ್ತಿತ್ತು. ವಿಶೇಷವಾಗಿ ಬಿ.ಸಿ.ರೋಡಿನಿಂದ ದೇರಳಕಟ್ಟೆಗೆ ಆಸ್ಪತ್ರೆಗೆಂದು ತೆರಳುವವರಿಗೆ ಈ ಬಸ್ಸುಗಳು ದರ ಕಡಿಮೆಯಾಗಿ ವೇಗವಾಗಿ ಸಾಗುವ ಹಿನ್ನೆಲೆ ಸುಲಭವಾಗುತ್ತಿತ್ತು. ಹಾಗೆಯೇ ಕಾಸರಗೋಡಿನಿಂದ ದೇರಳಕಟ್ಟೆಗೆ ಬರುವವರಿಗೆ ಈ ಬಸ್ ಹೇಳಿ ಮಾಡಿಸಿದ ಹಾಗಿತ್ತು.

OPTIC WORLD
ಟ್ರಿಪ್ ಕಡಿತ:
ಆರಂಭದಲ್ಲಿ ಒಟ್ಟು 5 ಬಸ್ಸುಗಳು 12 ಟ್ರಿಪ್ ಗಳನ್ನು ಬಿ.ಸಿ.ರೋಡ್ ಮತ್ತು ಕಾಸರಗೋಡಿನಿಂದ ಏಕಕಾಲಕ್ಕೆ ಓಡಾಡುತ್ತವೆ. ಎಲ್ಲೂ ಲಂಗರು ಹಾಕಿ ಹದಿನೈದು ನಿಮಿಷ ಕಾಯಿಸುವ ಇರಾದೆ ಇಲ್ಲ. ಬೆಳಗ್ಗೆ 7, 8, 9, 10, 11 ಮಧ್ಯಾಹ್ನ 1, 2, 3, 4, ಸಂಜೆ 5, 7 ಮತ್ತು 8 ಗಂಟೆಗೆ ಬಸ್ಸುಗಳು ಬಿ.ಸಿ.ರೋಡ್ ಮತ್ತು ಕಾಸರಗೋಡಿನಿಂದ ಏಕಕಾಲಕ್ಕೆ ಪ್ರಯಾಣ ಆರಂಭಿಸುತ್ತಿದ್ದವು. ಕೊರೊನಾ ಸಂದರ್ಭ ಈ ಟ್ರಿಪ್ ಗಳು 10ಕ್ಕೆ ಇಳಿಕೆಯಾದವು. ಬಳಿಕ ವರ್ಷದ ಹಿಂದೆ ಆದಾಯ ಇಳಿಮುಖ ಹಾಗೂ ಸಿಬ್ಬಂದಿ ಕೊರತೆ ಕಾರಣದಲ್ಲಿ ಟ್ರಿಪ್ ಗಳು 5ಕ್ಕೆ ಇಳಿದವು,
ಈಗ ಹೇಗಿದೆ?
ಈಗ ಒಟ್ಟು 5 ಟ್ರಿಪ್ ಗಳಿವೆ. ಬಿ.ಸಿ.ರೋಡ್ ನಿಂದ ಬೆಳಗ್ಗೆ 8, 11, ಮಧ್ಯಾಹ್ನ 2, 5 ಮತ್ತು 8 ಗಂಟೆಗೆ ಬಸ್ಸುಗಳು ಕಾಸರಗೋಡಿಗೆ ಹೋಗುತ್ತವೆ. ಅದೇ ರೀತಿ ಕಾಸರಗೋಡಿನಿಂದಲೂ ಇದೇ ವೇಳಾಪಟ್ಟಿಯಲ್ಲ ಬಸ್ಸುಗಳು ಬಿ.ಸಿ.ರೋಡಿಗೆ ಬರುತ್ತವೆ.
ಕಡಿಮೆ ದರ ಹಾಗೂ ಎಲ್ಲಿಯೂ ನಿಲ್ಲದೆ ವೇಗವಾಗಿ ಕೆಎಸ್ಸಾರ್ಟಿಸಿ ಬಸ್ ಸಂಚರಿಸುತ್ತಿದ್ದ ಕಾರಣ ಇದನ್ನು ಕಡಿತಗೊಳಿಸಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿದೆ. ಮೊದಲಿನಂತೆಯೇ ಬಸ್ಸುಗಳನ್ನು ಹಾಕಿದರೆ ಎಲ್ಲರಿಗೂ ಅನುಕೂಲ ಎಂದು ನಿತ್ಯಪ್ರಯಾಣಿಕ ರಾಜೀವ ಕೊಟ್ಟಾರಿ ಹೇಳುತ್ತಾರೆ.
ಬಸ್ಸುಗಳಿಂದ ದೊರಕುವ ಆದಾಯವನ್ನು ಗುರುತಿಸಿಕೊಂಡು, ಟ್ರಿಪ್ ಗಳ ಹೆಚ್ಚಳ, ಕಡಿತವನ್ನು ಪರಾಮರ್ಶಿಸಿ ಮಾಡಲಾಗುತ್ತದೆ. ಆರಂಭದಲ್ಲಿ 5 ಬಸ್ಸುಗಳು ಹೋಗಿಬರುತ್ತಿದ್ದವು. ಪ್ರಸ್ತುತ ಎರಡು ಬಸ್ಸುಗಳಿವೆ. ಸಾರ್ವಜನಿಕರ ಬೇಡಿಕೆಯನ್ನೂ ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು ಡಿಪೊ ಮ್ಯಾನೇಜರ್ ಇಸ್ಮಾಯಿಲ್ ಮಾಹಿತಿ ನೀಡಿದರು.


Be the first to comment on "ಬಿ.ಸಿ.ರೋಡ್ ನಿಂದ ಕಾಸರಗೋಡು KSRTC: ಹನ್ನೆರಡು ಟ್ರಿಪ್ ಐದಕ್ಕಿಳಿಯಿತು!"