ದೋಹಾ, ಕತಾರ್ ನಲ್ಲಿ ಮಾವಿನ ಮೇಳದ ಸವಿ

ಕೊಲ್ಲಿ ರಾಷ್ಟ್ರಗಳಲ್ಲೊಂದು ಪುಟ್ಟ ದೇಶ, ಅದರ ರಾಜಧಾನಿಯಲ್ಲೊಂದು ಚಿಕ್ಕ ಜಾಗದಲ್ಲಿ ಒಳಾಂಗಣ ಮಳಿಗೆ. ಮಳಿಗೆಯ ಹೊರಗಿನ ಮಾರುಕಟ್ಟೆ ಪ್ರದೇಶದಲ್ಲಿ 36°C ತಾಪಮಾನ, ಮಳಿಗೆಯ ಒಳಗೆ ಹವಾನಿಯಂತ್ರಿತ ವಾತಾವರಣ, ವಿಶೇಷವಾಗಿ ಹಣ್ಣಿನ ರಾಜನಿಗೆ ಈ ಸಿದ್ಧತೆ. ಎರಡನೇ ಬಾರಿ ಆಯೋಜಿಸುತ್ತಿರುವ ಮಾವಿನ ಹಾಂಬಾ ಪ್ರದರ್ಶನ ಇದಾಗಿದೆ. 50ಕ್ಕೂ ಹೆಚ್ಚು ಅಂಗಡಿಗಳು, ಸುಮಾರು 25 ಮಾರಾಟಗಾರರು, ಎರಡು ವಾರದ ಸಂತೆ ಎಂದೇ ಹೇಳಬಹುದು. ಪ್ರತಿದಿನಕ್ಕೆ ಸಾವಿರಾರು ಜನರು ಬಂದು ಆನಂದಿಸಿ, ಸ್ವಾದಿಸಿ, ಹೋಗುತ್ತಿರುವರು. ಇದೇ ಕತಾರಿನ ದೋಹದಲ್ಲಿರುವ ಸೂಕ್ ವಾಕಿಫ್ ನಲ್ಲಿ ನಡೆದ ಮಾವಿನ ಮೇಳ.

ಬಾದಾಮಿ, ನಾಟಿ, ಸಿಂಧೂರ ಇನ್ನೂ ಅನೇಕ ತಳಿಗಳ ಮಾವಿನ ಹಣ್ಣುಗಳ ಸುವಾಸನೆ ತುಂಬಿದ ಈ ಒಳಾಂಗಣ ಪ್ರದೇಶದಲ್ಲಿ, ಮಾವಿನ ಹಣ್ಣಿನ ರಸ, ಮಾವಿನಕಾಯಿ ಜೊತೆಗೆ ಉಪ್ಪು ಖಾರ, ಮಾವಿನ ಉಪ್ಪಿನಕಾಯಿ, ಮಾವಿನ ಐಸ್ ಕ್ರೀಮ್, ಮಾವಿನ ಫಲೂದ, ಮಾವಿನ ಲಸ್ಸಿ ಹೀಗೆ ವೈವಿಧ್ಯಮಯ ರುಚಿಕರ ರಸಭರಿತ ಮಾವಿನ ತಿಂಡಿ ಮತ್ತು ಪಾನಿಯಗಳು ಎಲ್ಲರ ಇಂದ್ರಿಯಗಳನ್ನು ಆಕರ್ಷಿಸಿತು.

ಒಂದೆಡೆ ಸುಪ್ರಸಿದ್ಧ ವಾಣಿಜ್ಯ ಮಳಿಗೆಗಳ ಸಾಲಾಗಿ ಇದ್ದರೆ ಇನ್ನೊಂದೆಡೆ ಪ್ರಸಿದ್ಧ ಉಪಹಾರ ಕೇಂದ್ರಗಳ ಅಂಗಡಿ ಮುಂಗಟ್ಟುಗಳು ಇದ್ದವು, ಮತ್ತೊಂದೆಡೆ ನೇರ ಮಾರಾಟಗಾರರ (ಹೋಲ್ಸೇಲ್) ಮಳಿಗೆಗಳು ಇದ್ದವು. ಭಾರತ , ಕತಾರ್ , ಶ್ರೀಲಂಕಾ , ಬಾಂಗ್ಲಾದೇಶ, ಫಿಲಿಪಿನ್ಸ್ ಇನ್ನೂ ಹಲವು ದೇಶದ ಜನರು ಬಂದು ಈ ಮಾವಿನ ಮೇಳದಲ್ಲಿ ಹಣ್ಣಿನ ಯಾವುದಾದರೂ ಒಂದು ರುಚಿಯನ್ನು ಸೇವಿಸಿ ಹೋಗಿರುವರು.

ನಿಜವಾಗಲೂ ಅದ್ಭುತ ದೃಶ್ಯವಲ್ಲವೇ? ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಮಧ್ಯಪ್ರದೇಶ, ಗೋವಾ ಇನ್ನಿತರ ರಾಜ್ಯಗಳಿಂದ ಆಮದು ತರಿಸಿದ ಮಾವಿನ ಹಣ್ಣುಗಳು. ಕತರಿನ ಭಾರತೀಯ ದೂತಾವಾಸದ ನೇತೃತ್ವದಲ್ಲಿ ಐಬಿಪಿಸಿ (ಭಾರತೀಯ ವ್ಯವಹಾರ ಹಾಗೂ ವೃತ್ತಿ ನಿರತ ಮಂಡಳಿಯ) ಸಹಯೋಗದೊಂದಿಗೆ ಏರ್ಪಡಿಸಿದ್ದ ಎರಡು ವಾರಗಳ ಮಾವಿನ ಮೇಳವು, ದಿನಾಂಕ 12 ಜೂನ್ 2025ರಂದು ಪ್ರಾರಂಭವಾಗಿ 21 ಜೂನ್ 2025ರಂದು ಸಂಪನ್ನಗೊಂಡಿತು. ನಿಜಕ್ಕೂ ಅದ್ದೂರಿ ಯಶಸ್ಸು ಕಂಡದ್ದು ಹಣ್ಣಿನ ರಾಜನೆ!

Be the first to comment on "ದೋಹಾ, ಕತಾರ್ ನಲ್ಲಿ ಮಾವಿನ ಮೇಳದ ಸವಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*