ಹರೀಶ ಮಾಂಬಾಡಿ
ಸೋಶಿಯಲ್ ಮೀಡಿಯಾ ಮತ್ತು ಸೋಶಿಯಲ್ ಸರ್ವೀಸ್ …ಇವೆರಡಕ್ಕೇನಾದರೂ ಏನಾದರೂ ಸಾಮ್ಯತೆ ಇದೆಯೇ? ನಮ್ಮ ಜೀವನಶೈಲಿ, ಇಂದಿನ ವ್ಯವಸ್ಥೆ, ಪೈಪೋಟಿಯಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುವುದು ಸಹಜ ಎಂಬಂತೆ ಹಾಸುಹೊಕ್ಕಾಗಿದೆ. ಇದೇ ವೇಳೆ ಮನುಷ್ಯ ಯಾರಿಗೂ ಉಪಕಾರಕ್ಕಿಲ್ಲ ಎಂಬ ಮಾತುಗಳೂ ಆಗಾಗ್ಗ ಕೇಳಿಬರುತ್ತವೆ. ಆದರೂ ತನ್ನ ಪಾಡಿಗೆ ಸಮಾಜಕ್ಕೇನಾದರೂ ಕೊಡಬೇಕು ಎಂದು ಕೆಲಸ ಮಾಡುವವರು ಬಹಳಷ್ಟಿದ್ದಾರೆ ಎಂಬುದು ಸಮಾಧಾನಕರ ಅಂಶ.
ಸೋಶಿಯಲ್ ಮೀಡಿಯಾ ಬಂದ ಮೇಲೆ ಸಮಾಜಸೇವೆ, ಸಮಾಜದ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ಹೆಚ್ಚಾಗಿ ಲೇವಡಿ, ಕಾಲೆಳೆಯುವುದಕ್ಕೆ ನಮ್ಮ ಜನರು ಜಾಸ್ತಿ ಹೊತ್ತು ಮೊಬೈಲ್ ನೋಡುತ್ತಾ ಕುಳಿತಿರುತ್ತಾರೆ ಎಂಬ ಮಾತನ್ನು ಹೇಳುವವರಿದ್ದಾರೆ. ಫೇಸ್ ಬುಕ್ , ವಾಟ್ಸಾಪ್ ಮತ್ತು ಅಂಥದ್ದೇ ಜಗತ್ತಿನ ಅಪರಿಚಿತರನ್ನು ಸ್ನೇಹಿತರನ್ನಾಗಿ ಮಾಡುವ ಇನ್ಸ್ ಟಾಗ್ರಾಮ್, ಟ್ವಿಟ್ಟರ್ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾಗಳು ಸಮೂಹಸನ್ನಿಗಳಂತೆ ನಮ್ಮನ್ನು ಎಷ್ಟು ಆವರಿಸಿದೆ ಎಂದರೆ ಮಾದಕ ದ್ರವ್ಯ ಸೇವಿಸಿ ಬಿದ್ದುಕೊಂಡವರಿಗೂ ಇವುಗಳಲ್ಲಿ ಮುಳುಗುವವರಿಗೂ ವ್ಯತ್ಯಾಸವೇ ಇಲ್ಲ ಎಂಬಂತಾಗಿದೆ. ಸೋಶಿಯಲ್ ಮೀಡಿಯಾಗಳು ಸೋಶಿಯಲ್ ಸರ್ವೀಸ್ ಗೆ ಎಷ್ಟು ಪ್ರೇರಣಾದಾಯಿಯಾಗಿದೆ? ಸೋಶಿಯಲ್ ಮೀಡಿಯಾಗಳಿಂದಲೇ ಸಾವಿರಾರು ಮಂದಿ ಇಂದು ರಕ್ತದಾನ ಪಡೆದು ಬದುಕಿದ್ದಾರೆ. ಜೀವ ಉಳಿಸಲೂ ಸೋಶಿಯಲ್ ಮೀಡಿಯಾ ಉಪಕಾರಿ, ಹಾಗೆಯೇ ಜೀವ ತೆಗೆಯಲೂ ಎಂಬುದು ಆತಂಕಕಾರಿ.
ಸಮಾಜಕ್ಕೆ ತಾನೇನಾದರೂ ಮಾಡಬೇಕು ಎಂದು ಹೊರಟವರು ಸುದ್ದಿಯಾಗುವುದು ಕಡಿಮೆ. ಸಮಾಜಸೇವೆ ಮಾಡುತ್ತಿದ್ದೇವೆ ಎಂದು ಪ್ರಚಾರಕ್ಕಾಗಿಯೇ ಇರುವವರೂ ಇಲ್ಲದಿಲ್ಲ. ಸಮಾಜಕ್ಕೆ ನಮ್ಮಿಂದ ಏನಾದರೂ ಉಪಕಾರವಾಗಬೇಕು ಎಂದು ಭಾವಿಸಿ ಸೈಲೆಂಟಾಗಿ ಸಮಾಜಸೇವೆ ಮಾಡುವವರೂ ಇದ್ದಾರೆ. ನಮ್ಮ ಕಿಸೆಯಿಂದಲೇ ಸಂಗ್ರಹವಾದ ಹಣವನ್ನು ಇನ್ನೊಬ್ಬನಿಗೆ ಕೊಟ್ಟು, ನೋಡಿ ನನ್ನಿಂದಲೇ ನಿಮ್ಮ ಉದ್ಧಾರಕ್ಕಾಗಿ ಕೊಡಲಾಯಿತು ನನ್ನಿಂದಲೇ ಎಲ್ಲ ನಡೆಯಿತೆಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವವರೂ ಇಲ್ಲದಿಲ್ಲ. ಇಂದು ಅರ್ಥವನ್ನು ಕಳೆದುಕೊಳ್ಳುತ್ತಿದೆಯೋ ಎಂಬ ಆತಂಕ ಮೂಡಿಸುವಂತೆ ಮಾಡುವ ಶಬ್ದ ಸಮಾಜಸೇವೆ. ಆದರೆ ನಿಸ್ವಾರ್ಥಿ ಸಮಾಜಸೇವಕರು ಈ ಶಬ್ದದ ಅರ್ಥ ಕೆಡದಂತೆ ಕಾರ್ಯವೆಸಗುತ್ತಿರುವುದು ಸಮಾಧಾನಕರ ಅಂಶ.
ಸಮಾಜಸೇವೆ ಎಂದರೆ, ಭಿಕ್ಷೆ ಅಲ್ಲ. ಪ್ರಾಯಶ್ಚಿತ್ತಕ್ಕೆ ನೀಡುವ ದಾನವೂ ಅಲ್ಲ ಪ್ರತಿಫಲಾಪೇಕ್ಷೆಯನ್ನಿಟ್ಟುಕೊಂಡು ನಡೆಸುವ ವ್ಯವಹಾರವೂ ಅಲ್ಲ; ಸ್ವಾರ್ಥ ಇಲ್ಲದೇ ತನ್ನವರ ಹೊರತಾಗಿ ಕಷ್ಟದಲ್ಲಿರುವ ಅನ್ಯರಿಗೆ ಮಾಡುವ ಸಹಾಯ. ಕಣ್ಣೀರು ಒರೆಸುವುದಕ್ಕಿಂತ ಕಣ್ಣೀರು ಹಾಕದಂತೆ ನೋಡಿಕೊಳ್ಳುವ ಸತ್ಕಾರ್ಯಗಳೇ ಸಮಾಜಸೇವೆ.
ಈಗ ಮೊದಲಿನ ವಿಚಾರಕ್ಕೆ ಬರೋಣ. ಸೋಶಿಯಲ್ ಮೀಡಿಯಾ ಮತ್ತು ಸೋಶಿಯಲ್ ಸರ್ವೀಸ್ ಎರಡಕ್ಕೆ ಸಾಮ್ಯತೆ ಇರುವುದು ಸೋಶಿಯಲ್. ಹೌದು. ಸೋಶಿಯಲ್ ಮೀಡಿಯಾಗಳಿಂದಲೂ ಸಮಾಜಸೇವೆ ಸಾಧ್ಯ ಎಂದು ನಿರೂಪಿಸುವ ಅನೇಕ ದೃಷ್ಟಾಂತಗಳು ನಮ್ಮ ಮುಂದಿವೆ. ಅನೇಕ ವಾಟ್ಸಾಪ್ ಗ್ರೂಪುಗಳು ಇಂದು ಪರಸ್ಪರ ದ್ವೇಷಕಾರುವ ಸಂದೇಶಗಳನ್ನು ಹಾಕುವುದು ಆತಂಕಕಾರಿ. ಅಂಥದ್ದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ. ರಕ್ತದಾನ, ನೆರವು, ಬಡತನದಲ್ಲಿರುವವರಿಗೆ ಸಹಾಯ ಮಾಡುವ ಸದುದ್ದೇಶದ ಸಂದೇಶಗಳನ್ನೂ ಅದೇ ವಾಟ್ಸಾಪ್, ಸಹಿತ ಸೋಶಿಯಲ್ ಮೀಡಿಯಾಗಳು ರವಾನಿಸುತ್ತದೆ ಎಂಬುದು ಗಮನಾರ್ಹ. ಯಾರಾದರೂ ಕಷ್ಟದಲ್ಲಿದ್ದರೆ ಕೂಡಲೇ ಸಂದೇಶಗಳು ಹರಡುವ ಮನಸ್ಸುಳ್ಳವರು ಸೋಶಿಯಲ್ ಮೀಡಿಯಾದ ಸೋಶಿಯಲ್ ಸರ್ವೀಸ್ ನವರು. ಇದು ಪಾಸಿಟಿವ್ ವಿಚಾರಗಳು ಎಂಬುದು ನನ್ನ ಭಾವನೆ.
Social media and social service… is there any similarity between the two? Our lifestyle, the current system, has become such that it is natural for one to outsmart the other in competition. At the same time, the saying that no one is of help to anyone is also heard from time to time. Nonetheless, it is reassuring that there are many who work to contribute something to society in their own way.
Be the first to comment on "ಪರಸ್ಪರ ಕಾಲೆಳೆಯುವ ಬದಲು ನೆರವಾಗುವ ಸಂದೇಶ ಹರಡೋಣ… ಏನಂತೀರಿ?"