ಮಕ್ಕಳಿಗೆ ಬಿಸಿಯೂಟದ ಜತೆಗೆ ವಾರದ ಆರು ದಿನವೂ ಮೊಟ್ಟೆ ನೀಡಬೇಕು ಎಂಬ ಆದೇಶದ ನಡುವೆ ಮೊಟ್ಟೆ ದರ ಏರಿಕೆಯಾಗಿದೆ. ಇದು ಶಿಕ್ಷಕರಿಗೆ ಸಂಕಷ್ಟ ತಂದೊದಗಿದೆ. ಪ್ರತಿ ಮೊಟ್ಟೆಗೆ ಸರಕಾರ ನೀಡುವ ಹಣ ಹಾಗೂ ಮಾರುಕಟ್ಟೆ ಬೆಲೆಗೆ ವ್ಯತ್ಯಾಸ ಇರುವ ಕಾರಣ, ದರ ಹೊಂದಿಸುವುದು ಮುಖ್ಯ ಶಿಕ್ಷಕರಿಗೆ ತಲೆನೋವಿನ ವಿಷಯವಾಗಿದೆ.
ಕಳೆದ ವರ್ಷ ಅಜೀಂ ಪ್ರೇಮ್ ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಯೋಜನೆ ಜಾರಿಗೆ ತರಲಾಗಿತ್ತು. ಮೊಟ್ಟೆಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡಲಾಗಿತ್ತು.
ಒಂದು ಮೊಟ್ಟೆಗೆ ಅನುದಾನವೆಷ್ಟು?
ಒಂದು ಮೊಟ್ಟೆ ಖರೀದಿಗೆ 5 ರೂಪಾಯಿ. 50 ಪೈಸೆ ಮೊಟ್ಟೆ ಬೇಯಿಸಲು ಗ್ಯಾಸ್ ಖರೀದಿಗೆ, 30 ಪೈಸೆ ಮೊಟ್ಟೆ ಸುಲಿಯಲು ಅಡುಗೆ ಸಿಬ್ಬಂದಿಗೆ ಕೊಡಬೇಕು. 20 ಪೈಸೆ ಸಾಗಾಣಿಕೆ ವೆಚ್ಚ. ಹೀಗೆ ಒಟ್ಟು 6 ರೂಪಾಯಿಗಳನ್ನು ನೀಡಲಾಗುತ್ತದೆ. ಸೋಮವಾರ ಮೊಟ್ಟೆಯ ಬೆಲೆ ಸಗಟುಖರೀದಿಗೇ 6 ರೂಪಾಯಿ 50 ಪೈಸೆ ಇತ್ತು. ಇದು ಕಡಿಮೆಯಾಗುವ ಲಕ್ಷಣಗಳಿಲ್ಲ. ಸರಕಾರವಾಗಲೀ, ಅಜೀಮ್ ಪ್ರೇಮ್ ಜಿ ಫೌಂಡೇಶನ್ ಆಗಲೀ ಇದಕ್ಕೆ ಪರಿಹಾರವನ್ನು ನೀಡುವ ಲಕ್ಷಣಗಳಿಲ್ಲ. ಮೊಟ್ಟೆ ದರ ಹೆಚ್ಚಳದ ಮಾಹಿತಿಯನ್ನು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅಕ್ಷರ ದಾಸೋಹ ಕಚೇರಿ ಮೂಲಗಳು ತಿಳಿಸಿವೆ. ಆದರೆ ಅದು ಸರಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಾದ ವಿಚಾರ.
ನೇರವಾಗಿ ಪೂರೈಸಲಿ:
ಮೊಟ್ಟೆ ಖರೀದಿಗೆ, ಅದರ ದರವ್ಯತ್ಯಾಸವನ್ನು ಶಿಕ್ಷಕರ ಪರ್ಸಿನಿಂದ ಭರಿಸುವ ಬದಲು, ಸರಕಾರವೇ ನೇರವಾಗಿ ಮೊಟ್ಟೆಯನ್ನು ವಿತರಿಸಲಿ. ಸರಕಾರ ಮೊಟ್ಟೆ ಖರೀದಿಗೆ ಶಾಲೆಗಳಿಗೆ ಹಣ ನೀಡುವುದಕ್ಕಿಂತ ಅಕ್ಕಿ, ಬೇಳೆ, ಅಡುಗೆಎಣ್ಣೆ, ಗೋಧಿ ಪೂರೈಸಿದಂತೆ ಯಾವುದಾದರೂ ಸಗಟು ಮೊಟ್ಟೆ ಮಾರಾಟ ಮಾಡುವ ಏಜನ್ಸಿಯ ಮೂಲಕ ಶಾಲೆಗಳಿಗೆ ಪೂರೈಸಿದರೆ, ಸಮಸ್ಯೆ ಪರಿಹಾರವಾಗುತ್ತದೆ ಎಂದು ಶಾಲಾಭಿವೃದ್ಧಿ ಸಮಿತಿಗಳು ತಿಳಿಸಿವೆ.
ಸರಕಾರದ ಖರೀದಿ ದರ 5 ರೂ,, ಶಾಲೆಗೆ ತರಲು 20 ಪೈಸೆ, ಸುಲಿಯಲು 30 ಪೈಸೆ, ಬೇಯಿಸಲು ಗ್ಯಾಸ್ ಗೆ 50 ಪೈಸೆ, ಮಾರ್ಕೆಟ್ ಬೆಲೆ 6.50,,ಒಂದು ಮೊಟ್ಟೆಗೆ 1 ರೂ 50 ಪೈಸೆ ರೂ ಕೈಯಿಂದ ಕೊಡಬೇಕು
ಹೆಚ್ಚಳವಾದ ದುಡ್ಡಿನ ಹೊರೆಯನ್ನೀಗ ಶಿಕ್ಷಕರೇ ಹೊರಬೇಕಾದ ಪರಿಸ್ಥಿತಿ ಇದೆ. ಒಂದು ಶಾಲೆಯಲ್ಲಿ 100 ಮಂದಿ ಮೊಟ್ಟೆ ಸೇವಿಸುತ್ತಿದ್ದರೆ, ಮೊಟ್ಟೆಗೆ 6.50 ರೂಗಳಿದ್ದರೆ, ಸರಕಾರ ನೀಡುವುದು 5 ರೂ. 1.5 ರೂ ಶಿಕ್ಷಕರೇ ಭರಿಸಬೇಕು. ಅಂದರೆ 100 ಮಕ್ಕಳಿಗೆ 150 ರೂ ದಿನಕ್ಕೆ, 750 ರೂ ವಾರಕ್ಕೆ, 3 ಸಾವಿರ ರೂ ತಿಂಗಳಿಗೆ ಶಿಕ್ಷಕರ ಪರ್ಸ್ ನಿಂದ ಹೋಗುತ್ತಿದೆ.
ಮಾರುಕಟ್ಟೆಯ ಬೆಲೆ ಅನುದಾನಕ್ಕಿಂತ ಹೆಚ್ಚಿರುವ ಕಾರಣದಿಂದ ಶಾಲೆಗಳಲ್ಲಿ ಮೊಟ್ಟ ವಿತರಣೆಗೆ ಹಣಕಾಸು ಹೊಂದಿಸುವುದು ಮುಖ್ಯ ಶಿಕ್ಷಕರಿಗೆ ಸವಾಲಾಗಿದೆ. ಸರಕಾರ ಈ ಬಗ್ಗೆ ಕೂಡಲೇ ಗಮನಹರಿಸಿ ಹೆಚ್ಚುವರಿ ಅನುದಾನವನ್ನ ಬಿಡುಗಡೆಗೊಳಿಸಬೇಕು. ಅಥವಾ ಸರಕಾರ ಸ್ವತಃ ತಾನೇ ಶಾಲೆಗಳಿಗೆ ಮೊಟ್ಟೆಯನ್ನು ಪೂರೈಕೆ ಮಾಡುವುದು ಒಳಿತು ಎನ್ನುತ್ತಾರೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ
Be the first to comment on "ಒಂದು ಮೊಟ್ಟೆಯ ಕತೆ: ಸರಕಾರ ನೀಡುವ ಹಣ ಮೊಟ್ಟೆ ಖರೀದಿಗೆ ಸಾಲೋದಿಲ್ಲ | ಉಳಿದ ಮೊತ್ತ ಭರಿಸುವವರು ಯಾರು?"