
ಬಂಟ್ವಾಳ: ಬ್ರಿಟಿಷರ ಕಾಲದಲ್ಲಿ ಕಟ್ಟಲಾದ ಪಾಣೆಮಂಗಳೂರು ಸೇತುವೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಆದೇಶ ಹೊರಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದಲ್ಲಿರುವ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಹಳೆಯ ಸೇತವೆ ಶಿಥಿಲಾವಸ್ಥೆಯಲ್ಲಿದ್ದು, ಈ ಸೇತುವೆಯಲ್ಲಿ ಈ ಹಿಂದೆ ಬಿರುಕು ಬಂದ ಹಿನ್ನೆಲೆಯಲ್ಲಿ ಸೇತುವೆಯ ಮೇಲೆ ಘನ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಕಬ್ಬಿಣದ ಕಮಾನು ಅಳವಡಿಸಿ ಬಂದ್ ಮಾಡಲಾಗಿತ್ತು. ಪ್ರಸ್ತುತ ೀ ಕಬ್ಬಿಣದ ಕಮಾನನ್ನು ಹಾನಿಗೊಳಿಸಿ, ಘನವಾಹನಗಳು ಸಂಚರಿಸುತ್ತಿರುವುದು ವರದಿಯಾಗಿರುತ್ತದೆ. ಈ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಸಂಚಾರಕ್ಕೆ ಅಪಾಯಕಾರಿಯಾಗಿರುವುದಲ್ಲದೆ, ಸೇತುವೆಯ ಧಾರಣಾ ಸಾಮರ್ಥ್ಯದ ಕುರಿತು ಸಕ್ಷಮ ಇಲಾಖೆಯಿಂದ ವರದಿ ಬರುವವರೆಗೆ ಸೇತುವೆ ಮೇಲೆ ಸಂಚಾರ ಮಾಡುವುದನ್ನು ಅಪಾಯಕಾರಿ ಎಂದು ಪರಿಗಣಿಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 68ರ ಪ್ರಕಾರ ತಾತ್ಕಾಲಿಕವಾಗಿ ಬಂದ್ ಮಾಡಲು ಆದೇಶಿಸಲಾಗಿದೆ.
ಪಾಣೆಮಂಗಳೂರು ಸೇತುವೆ ಮೇಲೆ ವಾಹನ ಸಂಚಾರ, ಜನಸಂಚಾರವನ್ನು ಸೇತುವೆಯ ಧಾರನಾ ಸಾಮರ್ಥ್ಯದ ಬಗ್ಗೆ ವರದಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವವರೆಗೆ ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ. ಈ ಆದೇಶವನ್ನು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಕಟ್ಟುನಿಟ್ಟಾಗಿ ಪಾಲಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.


Be the first to comment on "ಪಾಣೇರ್ ಸಂಕ ಸಂಚಾರ ತಾತ್ಕಾಲಿಕ ಬಂದ್"