
PHOTO COURTESY: VARUN KALLADKA
ಕರ್ಕಶ ಹಾರ್ನ್ ಗಳ ಘನಘೋರ ಸದ್ದಡಗಿದೆ. ಬೃಹತ್ ಗಾತ್ರದ ಟ್ರಕ್, ಲಾರಿಯಂಥ ವಾಹನಗಳಿಗೆ ಸೈಡ್ ಕೊಡುವ ಸಮಸ್ಯೆ ಕಡಿಮೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಬೆಂಗಳೂರು ರಸ್ತೆಯಲ್ಲಿ ಸಾಗುವಾಗ ಸಿಗುವ ಪುಟ್ಟ ಪೇಟೆ ಕಲ್ಲಡ್ಕವೀಗ ಗದ್ದಲರಹಿತ. ತನ್ನ ಪಾಡಿಗೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಸ್ಥಳೀಯವಾಗಿ ಸಂಚರಿಸುವವರು, ಪೇಟೆಗೆ ಬರುವವರು ನಿರಾಳರಾಗಿದ್ದಾರೆ.
ಸುಮಾರು 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣಗೊಂಡು ಅಲ್ಲೇ ಸಂಚಾರ ಆರಂಭಗೊಂಡ ಮೇಲೆ ಕಲ್ಲಡ್ಕ ಪೇಟೆಗೆ ಸಾಗುವವರು ಕೆಳಗೆ ತಿರುಗಿ ನೋಡುವ ಪ್ರಮೇಯ ಕಡಿಮೆ. ಸಮಯದ ಮಿತಿಯೊಳಗೇ ಜೀವನ ನಡೆಯುವ ವೇಗದ ದಿನಗಳಲ್ಲಿ ಸುಲಭದ ಫ್ಲೈಓವರ್ ನಲ್ಲಿ ಮೇಲೇರುವ ಬದಲು ಸರ್ವೀಸ್ ರೋಡ್ ಗಿಳಿದು ಪೇಟೆ ಸೌಂದರ್ಯ ವೀಕ್ಷಿಸುವವರ ಸಂಖ್ಯೆ ಕಡಿಮೆ. ಕಲ್ಲಡ್ಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳುವವರು, ಕಲ್ಲಡ್ಕದ ಪೇಟೆಯಲ್ಲಿ ವ್ಯವಹಾರ ಹೊಂದಿರುವವರು, ವಿಟ್ಲ ಭಾಗಗಳಿಗೆ ತೆರಳುವವರು, ಒಳರಸ್ತೆಗಳಿಗೆ ಸಾಗುವವರು ಫ್ಲೈಓವರ್ ನಲ್ಲಿ ಸಾಗದೆ ಸರ್ವೀಸ್ ರಸ್ತೆಗಿಳಿದು ಪೇಟೆ ಸಂಚರಿಸುತ್ತಾರೆ. ಇಲ್ಲವಾದರೆ, ಮೇಲ್ಸೇತುವೆ ಸಂಚಾರವನ್ನೇ ನೆಚ್ಚುತ್ತಾರೆ.
ಹೇಗಿದ್ದ ಪೇಟೆ, ಹೇಗಿದೆ ಈಗ
ವಾಹನಗಳ ಸದ್ದಡಗಿದೆ ಎಂಬುದೊಂದು ಬಿಟ್ಟರೆ, ಕಲ್ಲಡ್ಕ ಪೇಟೆ ಮೊದಲಿನಂತೆ ಇದೆ. ಬ್ಯಾಂಕು, ಸೊಸೈಟಿಗೆಂದು ಬರುವವರಿಗೇನೂ ತೊಂದರೆ ಇಲ್ಲ. ರಸ್ತೆ ಅಗಲಗೊಂಡಿರುವ ಕಾರಣ, ಸಮಸ್ಯೆಗಳೂ ಕಡಿಮೆಯಾಗಿದೆ. ಕಲ್ಲಡ್ಕ ಪೇಟೆಯ ಸಾಂಪ್ರದಾಯಿಗ ಸೊಗಡಿನ ಚಹಾದ ಹೋಟೆಲ್ ಗಳ ಮುಂದೆ ಪರವೂರಿನ ವಾಹನಗಳು ಮೊದಲಿನಂತೆ ನಿಲ್ಲುವುದು ಕಡಿಮೆಯಾಗಿದ್ದರೂ ಹುಡುಕಿಕೊಂಡು ಬಂದು ಟೀ ಸವಿಯುವವರು ಇನ್ನೂ ಇದ್ದಾರೆ. ಕಲ್ಲಡ್ಕದಲ್ಲಿ ಯಾವುದಾದರೂ ಒಂದು ಲಾರಿಯೋ ಬಸ್ಸೋ ಹಾಳಾಗಿ ನಿಂತರೆ, ವಾಹನದಟ್ಟಣೆ ಕಂಡುಬರುತ್ತಿತ್ತು. ಆದರೀಗ ರಸ್ತೆ ಅಗಲಗೊಂಡ ಕಾರಣ ಆ ಸಮಸ್ಯೆ ಇಲ್ಲ.
ಸರ್ವೀಸ್ ರಸ್ತೆ ಕಾಮಗಾರಿ:
ಸರ್ವೀಸ್ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಕೆಲ ಬಸ್ಸುಗಳು ಫ್ಲೈಓವರ್ ಆದಿಯಲ್ಲೇ ಪ್ರಯಾಣಿಕರನ್ನು ಇಳಿಸಿಹೋಗುತ್ತಿರುವ ಕುರಿತು ದೂರುಗಳು ಬರುತ್ತಿವೆ. ಕೆಲಸ ಮುಗಿದ ಬಳಿಕ ರಸ್ತೆ ಸಲೀಸಾಗಿ ತೆರಳಲು ಅನುವುಮಾಡಿಕೊಡುವ ಕಾರಣ, ಇದೊಂದು ತಾತ್ಕಾಲಿಕ ಸಮಸ್ಯೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕಲ್ಲಡ್ಕದ ಫ್ಲೈಓವರ್ ದೀರ್ಘವಾಗಿರುವ ಹಿನ್ನೆಲೆಯಲ್ಲಿ ಇದರಡಿಯಲ್ಲಿ ಏನು ಮಾಡಬಹುದು ಎಂಬ ಚಿಂತನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯ ಇದರೊಳಗೆ ವಾಹನಗಳು ಬಾರದೇ ಇರುವಂತೆ ಮಣ್ಣು ಹಾಕಲಾಗಿದೆ. ಭವಿಷ್ಯದಲ್ಲಿ ಮಾದರಿ ಫ್ಲೈಓವರ್ ಮಾಡುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಕಲ್ಲಡ್ಕ ಫ್ಲೈ ಓವರ್ ನಿರ್ಮಾಣ ದ ಮೂಲ ಚಿಂತನೆ ಬಗೆಗಿನ ವಿವರಣೆ ಈ ಲೇಖನ ದಲ್ಲಿ ಇದ್ದರೆ ಚೆನ್ನಾಗಿ ಇತ್ತು