ಏಪ್ರಿಲ್ ತಿಂಗಳ 2 ತಾರೀಕನ್ನು ವಿಶ್ವ ಆಟಿಸಂ ದಿನ ( World Autism Observation Day )ಎಂದು ಗುರುತಿಸಲಾಗಿದೆ. ಆಟಿಸಂ ಸಮಸ್ಯೆಯು ಮೆದುಳು ಹಾಗೂ ನರ ಸಂಬಂಧೀ ವೈಕಲ್ಯತೆಯಾಗಿದೆ. ಈ ದಿನವನ್ನು ಜನಸಾಮಾನ್ಯರಲ್ಲಿ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ನ ಬಗ್ಗೆ ಜಾಗೃತಿಯನ್ನು ಮೂಡಿಸಲು ಮೀಸಲಿಡಲಾಗಿದೆ. ಇಂದು ಜನಿಸುತ್ತಿರುವ ಪ್ರತೀ 60 ಮಕ್ಕಳಲ್ಲಿ ಒಂದು ಮಗು ಆಟಿಸಂ ಲಕ್ಷಣಗಳನ್ನು ತೋರಿಸುತ್ತಿದೆ. ಮಾತು ಬರುತ್ತಿದ್ದರೂ ಸಮರ್ಪಕವಾಗಿ ಸಂವಹನ ಮಾಡಲಾಗದ , ಕೇಳುತ್ತಿದ್ದರೂ ಕೇಳಿಸಿಕೊಳ್ಳಲಾರದ, ಇತರರೊಂದಿಗೆ ಬೆರೆಯಲಾಗದ , ರಚನಾತ್ಮಕವಾದ ಹಾಗೂ ವೈವಿಧ್ಯಮಯವಾದ ಕಲ್ಪನೆ ಅಥವಾ ಆಲೋಚನೆಗಳುಳ್ಳ ಹಾಗೂ ತನ್ನೊಳಗೆ ತಾನೇ ಹುದುಗಿಕೊಂಡಿರುವಂತೆ ತೋರುವ ಪ್ರವೃತ್ತಿಯ ಸಮಸ್ಯೆಯನ್ನು ಆಟಿಸಂ ಎಂದು ಕರೆಯಲಾಗುತ್ತದೆ.
ಕಳೆದ ಒಂದೂವರೆ ವರ್ಷಗಳಿಂದ ಬಂಟ್ವಾಳ ತಾಲೂಕಿನ ಬಿ ಸಿ ರೋಡಿನಲ್ಲಿ ಕಾರ್ಯಾಚರಿಸುತ್ತಿರುವ ವಿಕಾಸಂ ಸೇವಾ ಫೌಂಡೇಶನ್ ಸಂಸ್ಥೆಯು ಬೌದ್ಧಿಕ ನ್ಯೂನತೆಯಿರುವ ಅದರಲ್ಲೂ ಮುಖ್ಯವಾಗಿ ಆಟಿಸಂ ಬಾಧಿತ ಮಕ್ಕಳಿಗಾಗಿ ಕೆಲಸ ಮಾಡುತ್ತಿದೆ. ಇಂತಹ ಮಕ್ಕಳನ್ನು ಆರಂಭಿಕ ಪ್ರಾಯದಲ್ಲೇ ಪತ್ತೆಹಚ್ಚುವುದು, ಆರಂಭಿಕ ಹಂತದಲ್ಲೇ ಅಗತ್ಯ ತರಬೇತಿಗಳನ್ನು ಕೊಡುವುದು ಹಾಗೂ ಸಾಮಾನ್ಯ ಶಾಲಾ ಶಿಕ್ಷಣದ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಂಸ್ಥೆಯು ಕೆಲಸ ಮಾಡುತ್ತಿದೆ. ವಿಕಾಸಂ ಸೇವಾ ಫೌಂಡೇಶನ್ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ದಿವ್ಯಾಂಗ ಮಕ್ಕಳಿಗೆ ಉಚಿತವಾಗಿ ಸೇವೆಯನ್ನು ಒದಗಿಸುತ್ತಿದೆ.
ದಿನಾಂಕ 02-04-2025 ರಂದು ವಿಕಾಸಂ ಸೇವಾ ಫೌಂಡೇಶನ್ ಸಕ್ಷಮ ದಕ್ಷಿಣ ಕನ್ನಡ ಘಟಕ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಇದರ ಜೊತೆ ಸೇರಿಕೊಂಡು ವಿಶ್ವ ಆಟಿಸಂ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ. ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಇವರು ಕಾರ್ಯಕ್ರಮದ ಉದ್ಘಾಟನೆಯನ್ಬು ಮಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳು ಹಾಗೂ ಸರಕಾರೀ ಪ್ರಥಮದರ್ಜೆ ಕಾಲೇಜು ಸಿದ್ಧಕಟ್ಟೆ ಇಲ್ಲಿನ ಪ್ರಾಂಶುಪಾಲರಾದ ಡಾ ಅಜಕ್ಕಳ ಗಿರೀಶ್ ಭಟ್, ಮಂಗಳೂರು ಮಹಾನಗರ ಪಾಲಿಕೆಯ ಝೋನಲ್ ಕಮಿಷನರ್ ಹಾಗೂ ಬಂಟ್ವಾಳ ಪುರಸಭೆಯ ಪ್ರಭಾರೀ ಮುಖ್ಯಾಧಿಕಾರಿ ಆಗಿರುವ ಶ್ರೀಮತೀ ರೇಖಾ ಜೆ ಶೆಟ್ಟಿ, ಬಂಟ್ವಾಳ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಆಗಿರುವ ಶ್ರೀಮತೀ ಮಮ್ತಾಜ್, ಸಕ್ಷಮ ಭಾರತ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖರಾಗಿರುವ ರಾಜಶೇಖರ ಭಟ್ ಕಾಕುಂಜೆ, ಲಯನ್ಸ್ ಸೇವಾಟ್ರಸ್ಟ್ ನ ಕೋಶಾಧಿಕಾರಿಯಾಗಿರುವ ಹಾಗೂ ಅಪೂರ್ವ ಜ್ಯುವೆಲ್ಲರ್ಸ್ ನ ಮಾಲಕರಾಗಿರುವ ಲ| ಸುನಿಲ್ ಬಿ, ರೋಟರ್ ಕ್ಲಬ್ ಬಂಟ್ವಾಳ ಟೌನ್ ಇದರ ಕಾರ್ಯದರ್ಶಿಗಳಾದ ರೊ| ನಾರಾಯಣ ಸಿ ಪೆರ್ನೆ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬಂಟ್ವಾಳ ವಹಿಸಲಿದ್ದಾರೆ. ಸರಕಾರೀ ಪ್ರಥಮದರ್ಜೆ ಕಾಲೇಜು ವಿಟ್ಲ ಇಲ್ಲಿನ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಶ್ರೀ ಪ್ರಸನ್ನಕುಮಾರ್, ಸರಕಾರೀ ಪ್ರಥಮದರ್ಜೆ ಕಾಲೇಜು ವಾಮದಪದವು ಇಲ್ಲಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಉದಯಕುಮಾರ್ ಸಿ ಆರ್, ಮಂಗಳೂರು ವಿಶ್ವ ವಿದ್ಯಾನಿಲಯದ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಶರತ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಆಟಿಸಂ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ಕಾರ್ಯಕ್ರಮ, ಬೀದಿ ನಾಟಕ , ಏಕಪಾತ್ರಾಭಿನಯ ಮೊದಲಾದ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಜರಗಲಿವೆ.
Be the first to comment on "ಏ.2ರಂದು ವಿಶ್ವ ಆಟಿಸಂ ಜಾಗೃತಿ ದಿನಾಚರಣೆ – ಬಂಟ್ವಾಳದಲ್ಲಿ ಕಾರ್ಯಕ್ರಮ… AUTISM ಅಂದರೇನು?"