ಬಂಟ್ವಾಳ: ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ರಕ್ಷಣೆಗಾಗಿ ಶಾಲೆಗಳಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿರುವ ನಿತ್ಯಾನಂದ ಶೆಟ್ಟಿ ಬದ್ಯಾರು ಮತ್ತು ರಮ್ಯಾ ನಿತ್ಯಾನಂದ ಶೆಟ್ಟಿಯವರ ಗುಬ್ಬಚ್ಚಿಗೂಡು ಅಭಿಯಾನದಂಗವಾಗಿ ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಹಿತಿ ಕಾರ್ಯಕ್ರಮ ಸೋಮವಾರ ನಡೆಯಿತು.
ಅಭಿಯಾನದ ರೂವಾರಿ ಬಂಟ್ವಾಳ ತಾಲೂಕಿನ ವಾಮದಪದವಿನ ಎಲಿಯನಡುಗೋಡು ಗ್ರಾಮದ ಬದ್ಯಾರಿನ ನಿತ್ಯಾನಂದ ಶೆಟ್ಟಿ ಅವರು ಪಕ್ಷಿಗಳ ಪರಿಚಯವನ್ನು ಮಾಡಿ, ಈ ಶಾಲೆ ಸೇರಿ 313ನೇ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ನಮ್ಮಂತೆ ಅವುಗಳೂ ಎಂಬ ಭಾವವನ್ನು ಬೆಳೆಸಿಕೊಂಡು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದರ. ಅಭಿಯಾನದ ಸಂಚಾಲಕಿ ರಮ್ಯಾ ನಿತ್ಯಾನಂದ ಶೆಟ್ಟಿ ಅವರು ಪ್ರಾತ್ಯಕ್ಷಿಕೆ ಮೂಲಕ ಪಕ್ಷಿಗಳಿಗೆ ನೀರಿಡುವ ಕ್ರಮದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ್ ಮಾಂಬಾಡಿ ಮಾತನಾಡಿ ಸುಡುಬೇಸಗೆಯ ಸಂದರ್ಭ ನೀರಿನ ಮಹತ್ವವನ್ನು ಅರಿತು, ಪಕ್ಷಿಗಳಿಗೂ ಅದರ ಅವಶ್ಯಕತೆ ಇರುವುದನ್ನು ಮನಗಾಣಬೇಕು ಎಂದರು. ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಕೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ತಾಹಿರಾ ವಂದಿಸಿದರು. ಶಿಕ್ಷಕಿಯರಾದ ಲಾವಣ್ಯ, ಪೂರ್ಣಿಮಾ, ಶಿವಮೂರ್ತಿ ಮತ್ತು ದಿವ್ಯಾ ಈ ಸಂದರ್ಭ ಉಪಸ್ಥಿತರಿದ್ದರು.
Be the first to comment on "ಪಕ್ಷಿಸಂಕುಲಗಳ ರಕ್ಷಣೆಗಾಗಿ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ"