ಮೇ ಮಧ್ಯಭಾಗದಲ್ಲಿ ಅರ್ಥಾತ್, ಇನ್ನೆರಡುವರೆ ತಿಂಗಳು ಕಳೆದರೆ, ಬಿ.ಸಿ.ರೋಡು– ಅಡ್ಡಹೊಳೆ ಚತುಷ್ಟಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ನಿರ್ಮಾಣ ಹಂತದಲ್ಲಿರುವ ಕಲ್ಲಡ್ಕದ ೨.೧ ಕಿ.ಮೀ. ಉದ್ದದ ಷಟ್ಪಥ ಫ್ಲೈಓವರ್ ನಲ್ಲಿ ವಾಹನಗಳು ಝುಂಯ್ ಎಂದು ಸಾಗಬಹುದು!!!! ಹೀಗೆಂದು ನಿರ್ಮಾಣ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಖಚಿತ ಆಶ್ವಾಸನೆ ನೀಡಿದೆ. ಇದಕ್ಕೆ ಪೂರಕವಾಗಿ ಕೆಲಸ ಕಾರ್ಯಗಳು ವಾಯುವೇಗದಿಂದ ನಡೆಯುತ್ತಿವೆ.
ಕಲ್ಲಡ್ಕಕ್ಕೆ ಬಿ.ಸಿ.ರೋಡಿನಿಂದ ಸಾಗುವ ವೇಳೆ ಈಗಾಗಲೇ ಎರಡು ಮೇಲ್ಸೇತುವೆ ಅಂಡರ್ ಪಾಸ್ ಸಹಿತ ನಿರ್ಮಾಣವಾಗಿದ್ದು, ವಾಹನಗಳು ಸಂಚಾರ ಆರಂಭಿಸಿವೆ. ಕೊನೇಯ ಹಂತದ ಕೆಲಸಗಳು ಇಲ್ಲಿ ಬಾಕಿ ಇದ್ದು, ಇದೂ ಕಲ್ಲಡ್ಕ ಫ್ಲೈಓವರ್ ಆರಂಭಗೊಳ್ಳುವ ವೇಳೆ ಎರಡೂ ಬದಿ ಸರಾಗವಾಗಿ ಹಾಗೂ ಸುರಕ್ಷಿತವಾಗಿ ಸಾಗುವಂತಾಗಲಿದೆ.
ಬಿ.ಸಿ.ರೋಡ್ ನಲ್ಲಿ ನಿಧಾನಗತಿ
ಬಿ.ಸಿ.ರೋಡಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸುತ್ತಮುತ್ತಲು ರಸ್ತೆ ಅಗಲಗೊಳ್ಳುತ್ತದೆ ಹಾಗೂ ಅತಿಕ್ರಮಿತ ಅನಧಿಕೃತ ವ್ಯಾಪಾರ ವಹಿವಾಟುಗಳು ತೆರವಾಗುತ್ತವೆ ಎಂದು ಹೇಳಲಾಗುತ್ತಿದ್ದರೂ ಅದಿನ್ನೂ ಆಗಿಲ್ಲ. ಬಿ.ಸಿ.ರೋಡಿನಲ್ಲಿ ಹೊಸ ಸೇತುವೆಯಲ್ಲಿ ವಾಹನಗಳು ಓಡಾಡುತ್ತಿದ್ದರೂ ಪಕ್ಕದ ಸೇತುವೆ ದುರಸ್ತಿ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿದೆ.
ಕಲ್ಲಡ್ಕದ ಫ್ಲೈಓವರ್‌ನ್ನು ಮೇ ತಿಂಗಳ ಮಧ್ಯಭಾಗ ಸಂಚಾರಕ್ಕೆ ಮುಕ್ತಗೊಳಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳುತ್ತಿರುವ ಬೆನ್ನಲ್ಲೇ, ಅದಕ್ಕೆ ಪೂರಕವಾಗಿ ಕಲ್ಲಡ್ಕದ ನರಹರಿ ಪರ್ವತ ಭಾಗದಲ್ಲಿ ಫ್ಲೈಓವರ್ ರಸ್ತೆಯನ್ನು ಸಾಮಾನ್ಯ ರಸ್ತೆಗೆ ಜೋಡಿಸುವ ಕಾರ್ಯ ಭರದಿಂದ ಸಾಗಿದೆ.
ಸುಮಾರು ೨.೧ ಕಿ.ಮೀ.ಉದ್ದದ ಫ್ಲೈಓವರ್‌ನ್ನು ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಲ್ಲಿ ಈಗಾಗಲೇ ಕೆಳರಸ್ತೆಗೆ ಸಂಪರ್ಕಿಸಿ ಕಾಮಗಾರಿ ಬಹುತೇಕ ಪೂರ್ತಿಗೊಳಿಸಲಾಗಿದ್ದು, ಮತ್ತೊಂದು ಬದಿಯ ಕಾಮಗಾರಿಯನ್ನು ಪೂರ್ತಿಗೊಳಿಸಲು ಕಾಯಲಾಗುತ್ತಿದೆ.
ಸರ್ವೀಸ್ ರಸ್ತೆಯೂ ನಿರ್ಮಾಣ
ಸಾಕಷ್ಟು ಟೀಕೆಗೆ ಒಳಗಾಗಿದ್ದ ಕಲ್ಲಡ್ಕ ಪೇಟೆಯಲ್ಲಿ ಮಾರ್ಚ್ ೧೫ರ ವೇಳೆಗೆ ಸರ್ವೀಸ್ ರಸ್ತೆ ಕಾಮಗಾರಿ ಪೂರ್ತಿಗೊಳ್ಳುತ್ತಿದ್ದು, ಇದರ ಬಳಿಕ ಬಹುತೇಕ ಸಮಸ್ಯೆ ನಿವಾರಣೆಯಾಗುತ್ತದೆ. ಫ್ಲೈಓವರ್‌ನಲ್ಲಿ ಸಂಚಾರ ಆರಂಭಗೊಂಡರೆ ಹೆದ್ದಾರಿಯಲ್ಲಿ ಸಾಗುವ ೭೫ ಶೇ.ದಷ್ಟು ವಾಹನಗಳು ಕಲ್ಲಡ್ಕ ಪೇಟೆಗೆ ಬಾರದೆ ನೇರವಾಗಿ ಸಾಗಲಿದೆ ಎಂಬ ನಂಬಿಕೆ ಪ್ರಾಧಿಕಾರಕ್ಕಿದೆ.
ನರಹರಿ ಬಳಿ ಈಗಿನ ಸ್ಥಿತಿ
ಬಿ.ಸಿ.ರೋಡು– ಅಡ್ಡಹೊಳೆ ಹೆದ್ದಾರಿಯ ೪೮ ಕಿ.ಮೀ.ಗಳ ಕಾಮಗಾರಿಯಲ್ಲಿ ಈಗಾಗಲೇ ಸುಮಾರು ೩೫ ಕಿ.ಮೀ.ಕಾಂಕ್ರೀಟ್ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಲ್ಲಿ ಒಂದಷ್ಟು ಕಾಮಗಾರಿಗಳು ಬಾಕಿಯಾಗಿವೆ. ವಿನ್ಯಾಸ ಬದಲಾವಣೆ, ಭೂಸ್ವಾಧೀನ ಪ್ರಕ್ರಿಯೆ ಗೊಂದಲ, ಬಂಡೆಗಳ ಸ್ಪೋಟ ಕಾರ್ಯ ಹೀಗೆ ಹಲವು ಕಾರಣಕ್ಕೆ ಒಂದಷ್ಟು ಕಡೆಗಳ ಕಾಮಗಾರಿ ವಿಳಂಬವಾಗಿದೆ. ಪ್ರಸ್ತುತ ಕಲ್ಲಡ್ಕ ಫ್ಲೈಓವರ್ ಸಂಚಾರಕ್ಕೆ ಮುಕ್ತಗೊಂಡರೂ, ನರಹರಿ ಪರ್ವತ ಭಾಗದಲ್ಲಿ ವಿನ್ಯಾಸ ಬದಲಾವಣೆಯಿಂದ ಒಂದಷ್ಟು ಗೊಂದಲಗಳು ಉಂಟಾಗಿವೆ.
ಹಿಂದಿನ ವಿನ್ಯಾಸದ ಪ್ರಕಾರ ನರಹರಿ ಪರ್ವತ ಭಾಗದಲ್ಲಿ ಈಗ ಸಾಗಿರುವ ಹೆದ್ದಾರಿಯಂತೆ ವಿನ್ಯಾಸವನ್ನು ಮಾಡಲಾಗಿದ್ದು, ಪ್ರಸ್ತುತ ಕಾಮಗಾರಿ ಸಂಪೂರ್ಣ ಬದಲಾಗಿದೆ. ನರಹರಿ ಪರ್ವತದ ಎರಡೂ ಬದಿಯೂ ತಗ್ಗು ಪ್ರದೇಶವಾಗಿದ್ದು, ಹೀಗಾಗಿ ವಾಹನಗಳು ಏರು ರಸ್ತೆಯಲ್ಲಿ ಸಾಗಿ ಇಳಿಯಬೇಕಿತ್ತು. ಆದರೆ ಈಗ ಏರುರಸ್ತೆಯನ್ನು ಸಂಪೂರ್ಣ ತಗ್ಗಿಸಿ ನೇರ ರಸ್ತೆಯಾಗಿ ಮಾರ್ಪಾಡು ಮಾಡಲಾಗುತ್ತಿದೆ. ಇಲ್ಲಿ ಸರ್ವೀಸ್ ರಸ್ತೆಯು ಇಲ್ಲದೇ ಇರುವುದರಿಂದ ನರಹರಿ ಪರ್ವತ ದೇವಸ್ಥಾನ ಸಂಪರ್ಕ ರಸ್ತೆಯನ್ನೂ ಹೆದ್ದಾರಿಗೆ ಸಂಪರ್ಕಿಸಬೇಕಿದೆ. ಪ್ರಸ್ತುತ ಮಣ್ಣು ಅಗೆಯುವ ಕಾಮಗಾರಿಯೇ ಮುಗಿಯದೇ ಇದ್ದು, ಒಂದಷ್ಟು ಬಂಡೆ ಸ್ಪೋಟದ ಕಾಮಗಾರಿಯೂ ನಡೆಯಬೇಕಿದೆ. ಹೀಗಾಗಿ ಸಹಜವಾಗಿಯೇ ಇಲ್ಲಿ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ.
ಮಾಣಿಯಲ್ಲೂ ವಿಳಂಬ:
ಬಿ.ಸಿ.ರೋಡು–ಅಡ್ಡಹೊಳೆ ಹೆದ್ದಾರಿಗೆ ಮಾಣಿ ಜಂಕ್ಷನ್‌ನಲ್ಲಿ ಮಾಣಿ–ಮೈಸೂರು ಹೆದ್ದಾರಿ ಸಂಪರ್ಕಿಸುತ್ತಿದ್ದು, ಎರಡೂ ಹೆದ್ದಾರಿಯಲ್ಲೂ ಒಂದೇ ಪ್ರಮಾಣದಲ್ಲಿ ವಾಹನಗಳು ಸಾಗುತ್ತವೆ. ಹೀಗಾಗಿ ಮಾಣಿಯಲ್ಲಿ ಈಗಲೂ ಒಂದೇ ಬದಿಯ ಸರ್ವೀಸ್ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶವಿದ್ದು, ಕಲ್ಲಡ್ಕ ಭಾಗದಿಂದ ಸಾಗುವಾಗ ಎಡ ಬದಿಯ ಸರ್ವೀಸ್ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸದೇ ಇರುವುದು ಸಾಕಷ್ಟು ಅಸಮಾಧಾನಗಳಿಗೆ ಕಾರಣವಾಗಿದೆ.
Be the first to comment on "ಎರಡೂವರೆ ತಿಂಗಳಲ್ಲಿ ಕಲ್ಲಡ್ಕ ಫ್ಲೈಓವರ್ ರೆಡಿ"