
https://www.opticworld.net/

Harish Mambady
ಕಿಚ್ಚು ಬಿದ್ದಾಗಲಷ್ಟೇ ಗೊತ್ತಾಗುತ್ತದೆ ಗಂಭೀರತೆ | ಬಂಟ್ವಾಳ ತಾಲೂಕಿಗೆ ತುರ್ತು ಬೇಕಾಗಿದೆ ಅಗ್ನಿಶಾಮಕ ವಾಹನಗಳು

Harish Mambady

Harish Mambady
ಮೊನ್ನೆ ಮಂಗಳವಾರ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗೆ ಕಠಿಣ ದಿನವಾಗಿತ್ತು. ಬೆಳಗ್ಗೆ ೧೦ರ ನಂತರ ಬಂದ ಕರೆಯನ್ನು ಸ್ವೀಕರಿಸಿ ಕಚೇರಿಯಿಂದ ಹೊರಟವರು, ಮರಳುವಾಗ ಸೂರ್ಯ ಮುಳುಗುವ ಹೊತ್ತು. ಇದ್ದ ಒಂದು ವಾಹನವನ್ನು ತೆಗೆದುಕೊಂಡು, ಅದರಲ್ಲಿ ನೀರು ರೀಫಿಲ್ ಮಾಡುತ್ತಾ ಬಂದ ಕರೆಗಳನ್ನೆಲ್ಲ ಸ್ಪಂದಿಸುವಾಗ ಸಾಕೋ ಸಾಕಾಗಿತ್ತು.
ಅಂದು ಒಂದೇ ದಿನ ಬಂಟ್ವಾಳ ತಾಲೂಕಿನ ಆರಕ್ಕೂ ಅಧಿಕ ಕಡೆಗಳ ಆರಣ್ಯ ಮತ್ತು ಖಾಸಗಿ ಗುಡ್ಡ ಪ್ರದೇಶಗಳಿಗೆ ಕಿಚ್ಚು ಹಬ್ಬಿತ್ತು. ೧೨ ಎಕರೆಗಿಂತಲು ಅಧಿಕ ಪ್ರದೇಶಗಳಿಗೆ ಹಾನಿಯಾಗಿತ್ತು. ಸಮೀಪದ ಬೆಳ್ತಂಗಡಿ ಮತ್ತು ಮಂಗಳೂರಿನಿಂದ ವಾಹನಗಳು ಬಂದು ಬೆಂಕಿ ನಂದಿಸಲು ಸಹಕರಿಸಿದವು. ಈ ಪ್ರಕರಣವೀಗ ಅಗ್ನಿಶಾಮಕ ಠಾಣೆಯ ಸ್ಥಿತಿಗತಿಯನ್ನು ಎತ್ತಿ ತೋರಿಸಿತು. ಬಂಟ್ವಾಳ ಅಗ್ನಿಶಾಮಕ ಠಾಣೆಯೇನೋ ಸುಂದರವಾಗಿದೆ, ಆದರೆ ಸರಿಯಾದ ವಾಹನ ವ್ಯವಸ್ಥೆ ಬೇಕು ಎಂಬುದನ್ನು ಸಾರಿ ಹೇಳಿತು.
ಹಳೆಯ ವಾಹನದಲ್ಲೇ ಕೆಲಸ:
ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚಾಗುತ್ತಿರುವ ವೇಳೆ ಒಂದೇ ವಾಹನವನ್ನು ಎಲ್ಲಿಗೆ ಎಂದು ತೆಗೆದುಕೊಂಡು ಹೋಗುವುದು? ಎಲ್ಲಾ ಕರೆಗಳಿಗೆ ಸ್ಪಂದಿಸುವುದು ಸವಾಲಾಗುತ್ತಿದೆ. ಬಂಟ್ವಾಳ ಅಗ್ನಿಶಾಮಕ ಠಾಣೆಯಲ್ಲಿ ಪ್ರಸ್ತುತ ಒಂದೇ ವಾಹನ ಕಾರ್ಯಾಚರಿಸುತ್ತಿದ್ದು, ೨ನೇ ವಾಹನದ ಬೇಡಿಕೆ ಇದ್ದರೂ ಅದು ಪ್ರಸ್ತಾವನೆಯಯಲ್ಲಿಯೇ ಬಾಕಿಯಾಗಿದೆ.
ಹೆಚ್ಚುವರಿ ವಾಹನ ಅನಿವಾರ್ಯವಾಗಿದೆ. ಬಂಟ್ವಾಳಕ್ಕೆ ೨ ಅಗ್ನಿಶಾಮಕ ವಾಹನಗಳು ಮಂಜೂರಾಗಿದ್ದರೂ, ಒಂದು ವಾಹನಕ್ಕೆ ೪೦ ವರ್ಷಗಳೇ ಕಳೆದಿದೆ. ಪ್ರಸ್ತುತ ಅದು ಕಾರ್ಯಾಚರಣೆಯ ಸ್ಥಿತಿಯಲ್ಲಿ ಇಲ್ಲವಾಗಿದ್ದು, ಸಾರಿಗೆ ನಿಯಮದ ಪ್ರಕಾರ ಅದು ಈಗಾಗಲೇ ಸ್ಕ್ರಾಪ್ ಪಟ್ಟಿಗೆ ಸೇರಿದೆ. ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಈಗಾಗಲೇ ೨ ವಾಹನಗಳು ಕಾರ್ಯಾಚರಣೆಯ ಸ್ಥಿತಿಯಲ್ಲಿದ್ದು, ಬಂಟ್ವಾಳಕ್ಕೂ ಹೊಸ ವಾಹನ ಅಗತ್ಯ.
ಕರೆಗೆ ಉತ್ತರಿಸುವುದೂ ಸವಾಲು:
೨೦೨೪ರಲ್ಲಿ ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಬಂದ ಕರೆಯಂತೆ ಒಟ್ಟು ೧೩೬ ಬೆಂಕಿ ಬಿದ್ದಿರುವ ಪ್ರಕರಣಗಳು ದಾಖಲಾಗಿದ್ದು, ೨೪ ರಕ್ಷಣೆಯ ಕರೆಗಳು ಬಂದಿದ್ದವು. ೨೦೨೩ರ ಮಾರ್ಚ್ ತಿಂಗಳ ೧೨ ದಿನಗಳಲ್ಲಿ ೫೨ ಕರೆಗಳು ದಾಖಲಾಗಿದ್ದವು. ಬೆಳಗ್ಗೆ ೧೧ರಿಂದ ಸಂಜೆ ೫ ಗಂಟೆಯವರೆಗೆ ಒಂದೇ ಸಮಯದಲ್ಲಿ ಹೆಚ್ಚಿನ ಕಾಡ್ಗಿಚ್ಚಿನ ಕರೆಗಳು ಬರುತ್ತಿದ್ದು, ಒಂದು ಘಟನೆಯನ್ನು ಮುಗಿಸಿ ಬರುವುದಕ್ಕೆ ಕನಿಷ್ಠ ನಾಲ್ಕೈದು ಗಂಟೆಯಾದರೂ ಬೇಕಾಗುತ್ತದೆ. ಹೀಗಿರುವಾಗ ಒಂದೇ ಸಮಯಕ್ಕೆ ಹೆಚ್ಚಿನ ಕರೆಗಳು ಬಂದರೆ ಏನ್ನೂ ಮಾಡಲಾಗ ಸ್ಥಿತಿ ನಿರ್ಮಾಣವಾಗುತ್ತದೆ. ಈ ವರ್ಷ ಫೆ. ೪ರಂದು ಒಂದೇ ದಿನ ನಾಲ್ಕು ಕರೆ ಬಂದಿದ್ದರೆ, ೨೫ರಂದು ದಿನವಿಡೀ ಕರೆಗಳು. ಮಳೆಗಾಲ ಆರಂಭವಾಗುವವರೆಗೂ ಇದೇ ರೀತಿ ಕರೆಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಬಂಟ್ವಾಳ ಠಾಣೆಯಲ್ಲಿ ಒಂದೇ ಅಗ್ನಿಶಾಮಕ ವಾಹನವಿರುವುದರಿಂದ ಕಳೆದ ೨ ವರ್ಷ ಕರೆಗಳು ಕಡಿಮೆ ಇರುವ ಮೂಡಬಿದಿರೆಯಿಂದ ಒಂದು ಗಾಡಿಯನ್ನು ಬೇಸಗೆ ಮುಗಿಯುವವರೆಗೆ ಬಂಟ್ವಾಳಕ್ಕೆ ತರಿಸಿಕೊಳ್ಳಲಾಗಿತ್ತು. ಜತೆಗೆ ಬೆಳ್ತಂಗಡಿ, ಪುತ್ತೂರಿನ ವಾಹನಗಳು ಕೂಡ ಬಂಟ್ವಾಳದ ಗಡಿ ಗ್ರಾಮಗಳ ಅಗ್ನಿ ಅನಾಹುತಗಳ ನಿರ್ವಹಣೆ ಕಾರ್ಯ ಮಾಡಿದ್ದು, ಸುಮಾರು ೧ ವಾರಗಳ ಕಾಲ ಮಂಗಳೂರು ಪಾಂಡೇಶ್ವರದ ವಾಹನ ಬಂಟ್ವಾಳದಲ್ಲೇ ಕಾರ್ಯನಿರ್ವಹಿಸಿತ್ತು. ಈಗ ವಾಹನಗಳೂ ಇಲ್ಲದಿರುವ ಹೊತ್ತಿನಲ್ಲಿ ಕರೆಗಳನ್ನು ಸ್ವೀಕರಿಸುವುದೂ ಸವಾಲಾಗಿದೆ.
ವಿಟ್ಲಕ್ಕೂ ಇಲ್ಲಿಂದಲೇ ಹೋಗಬೇಕು:
ಬಂಟ್ವಾಳ ತಾಲೂಕು ಎಂದರೆ ವಾಮದಪದವು, ಸಿದ್ದಕಟ್ಟೆ, ಪುಂಜಾಲಕಟ್ಟೆ, ಕಾರಿಂಜ, ವಿಟ್ಲ, ಕನ್ಯಾನ, ಫರಂಗಿಪೇಟೆ, ಬಿ.ಸಿ.ರೋಡ್ ಹೀಗೆ ಕಳಂಜಿಮಲೆ, ಕಾರಿಂಜ ಪ್ರದೇಶಗಳಂಥ ಗುಡ್ಡ, ಬೆಟ್ಟದ ಪ್ರದೇಶವನ್ನು ಹೊಂದಿದೆ. ವಿಟ್ಲಕ್ಕೂ ಬಂಟ್ವಾಳದಿಂದಲೇ ವಾಹನಗಳು ಹೋಗಬೇಕಾದರೆ, ಸಾಕಷ್ಟು ಸಮಯ ಬೇಕು. ಈ ಹಿನ್ನೆಲೆಯಲ್ಲಿ ವಿಟ್ಲಕ್ಕೂ ಪ್ರತ್ಯೇಕ ಠಾಣೆ ಬೇಡಿಕೆ ಇದೆ.
ಜನಪ್ರತಿನಿಧಿಗಳೇ ಇತ್ತ ನೋಡಿರಿ!!
ಬಂಟ್ವಾಳದ ೨ ಅಗ್ನಿಶಾಮಕ ವಾಹನಗಳು ಎಂಬ ಬೇಡಿಕೆ ಇದ್ದು, ಪ್ರಸ್ತುತ ಒಂದೇ ವಾಹನದಲ್ಲಿ ಎಲ್ಲಾ ಕರೆಗಳಿಗೂ ಸ್ಪಂದನೆ ನೀಡುವುದು ಸವಾಲಾಗುತ್ತದೆ. ಎಲ್ಲದಕ್ಕೂ ಒಂದೇ ವಾಹನ ತೆರಳುವ ವೇಳೆ ಸಮಯದಲ್ಲೂ ವ್ಯತ್ಯಾಸವಾಗುತ್ತದೆ. ಅಗ್ನಿಶಾಮಕ ವಾಹನಗಳು ಎಷ್ಟು ಬೇಗ ಹೋಗುತ್ತದೋ ಅಷ್ಟು ಬೇಗ ನಂದಿಸಲು ಸಾಧ್ಯವಾಗುತ್ತದೆ. ಹೀಗಾಗಿ ಇನ್ನೊಂದು ವಾಹನ ಬೇಕೇ ಬೇಕು. ನಾವು ಖಾಸಗಿ ಸಂಸ್ಥೆಗಳ ಸಿ.ಎಸ್.ಆರ್. ನಿಧಿಯನ್ನು ಇತರ ವಿಭಾಗಗಳಿಗೆ ಪಡೆಯುತ್ತೇವೆ. ಜನರ ಅಗತ್ಯವಾಗಿರುವ ಅಗ್ನಿಶಾಮಕ ವ್ಯವಸ್ಥೆ ನಿಭಾಯಿಸಲು ಅಗತ್ಯವಾದ ವಾಹನವನ್ನೇಕೆ ಖಾಸಗಿಯವರ ಮೂಲಕ ತರಿಸಬಾರದು ಎಂದು ಸಾರ್ವಜನಿಕರೂ ಆಗ್ರಹಿಸುತ್ತಿದ್ದಾರೆ.
ಅಗ್ನಿಶಾಮಕರ ಶ್ಲಾಘನೀಯ ಕೆಲಸ
ಯಾರಾದರೂ ಬಾವಿಗೆ ಬಿದ್ದಾಗ, ತುರ್ತು ಸಂದರ್ಭ, ಬೆಂಕಿ ಬಿದ್ದಾಗ ಅಗ್ನಿಶಾಮಕ ಸಿಬ್ಬಂದಿ ನೆನಪಾಗುತ್ತದೆ. ಖಾಕಿ ಧರಿಸಿ ಬೆವರು ಹರಿಸಿ ಮಾಡುವ ಅವರು ಎಲ್ಲರೂ ಸುರಕ್ಷರಾದರು ಎಂದು ಖಚಿತವಾದ ಮೇಲೆ ಹೋಗುತ್ತಾರೆ. ಅವರಿಗೆ ಮೂಲಸೌಕರ್ಯವೇ ಇಲ್ಲದಿದ್ದರೆ, ಬೆಂಕಿ ಬಿದ್ದರೂ ನಂದಿಸುವ ವ್ಯವಸ್ಥೆ ಇಲ್ಲದೆ ಅಸಹಾಯಕರಾಗುತ್ತಾರೆ. ಹಾಗಾಗದಂತೆ ಸಮಾಜ ನೋಡಿಕೊಳ್ಳಬೇಕು.
Be the first to comment on "Bantwal:ಬೆಂಕಿ ಬಿದ್ದರೆ ನಂದಿಸಲು ಫೈರ್ ಇಂಜಿನ್ ಕೊರತೆ: ಕಿಚ್ಚು ಬಿದ್ದಾಗಲಷ್ಟೇ ಗೊತ್ತಾಗುತ್ತದೆ ಗಂಭೀರತೆ | ಬಂಟ್ವಾಳ ತಾಲೂಕಿಗೆ ತುರ್ತು ಬೇಕಾಗಿದೆ ಅಗ್ನಿಶಾಮಕ ವಾಹನಗಳು"