ಅಮೃತ ಭಾರತ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಅಭಿವೃದ್ಧಿಯ ಅವಕಾಶ ದೊರಕಿದ್ದು, ಮಾರ್ಚ್ ತಿಂಗಳಲ್ಲಿ ನವೀಕೃತ ನಿಲ್ದಾಣ ಉದ್ಘಾಟನೆ ಹಿನ್ನೆಲೆ ಕಳೆದ ಹತ್ತು ದಿನಗಳಿಂದೀಚೆಗೆ ಎಕ್ಸ್ ಪ್ರೆಸ್ ವೇಗದಲ್ಲಿ ಕೆಲಸ ಇರುಳು ಹಗಲೆನ್ನದೆ ನಡೆಯುತ್ತಿದೆ. ಮಾರ್ಚ್ ವೇಳೆ ಎಲ್ಲವೂ ಪೂರ್ಣಗೊಳ್ಳುವುದು ಕಷ್ಟವಾದರೂ ಶೇ.80ರಷ್ಟು ಮುಗಿಸುವ ಉದ್ದೇಶವಿದ್ದಂತೆ ಈಗ ಕೆಲಸ ಮಾಡುವುದನ್ನು ನೋಡಿದಾಗ ಗೊತ್ತಾಗುತ್ತದೆ. ಅಮೃತ್ ಭಾರತ ನಿಲ್ದಾಣ ಯೋಜನೆಯಡಿ ೨೮.೪೯ ಕೋಟಿ ರೂಪಾಯಿಯಲ್ಲಿ ಈ ನಿಲ್ದಾಣ ಸಂಪೂರ್ಣ ಬದಲಾಗಲಿದೆ.

WORK IN PROGRESS
ಕಳೆದ 2024ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಇದರ ಶಂಕುಸ್ಥಾಪನೆ ನೆರವೇರಿಸಿದ್ದು, ಆಗಿನ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಯ್ಕ್ ಅವರು ಈ ಸಂದರ್ಭ ರೈಲ್ವೆ ನಿಲ್ದಾಣದಲ್ಲಿದ್ದರು.
೨೮.೪೯ ಕೋಟಿ ರೂಗಳಲ್ಲಿ ಏನೇನಾಗುತ್ತಿದೆ?
ರೈಲ್ವೆ ನಿಲ್ದಾಣದ ಕೆಲಸಗಳು ಎಲ್ಲವೂ ಅಂದುಕೊಂಡಂತೆ ಆದರೆ, ಪ್ರಯಾಣಿಕರಿಗೆ ಈಗಿರುವ ಸೌಲಭ್ಯಗಳು ದುಪ್ಪಟ್ಟಾಗುತ್ತವೆ. ಮುಂಗಡ ಬುಕ್ಕಿಂಗ್ ಸಹಿತ ಟಿಕೆಟ್ ಕೌಂಟರ್ ಸಾಕಷ್ಟು ಜಾಗದೊಂದಿಗೆ ನಿರ್ಮಾಣವಾಗುತ್ತಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವೈಟಿಂಗ್ ರೂಮ್ ಇರಲಿದೆ. ಒಂದು ಕೆಫೆಟೀರಿಯಾ. ನಾಲ್ಕು ಕ್ಯಾಟರಿಂಗ್ ಸ್ಟಾಲ್ ಗಳು ಇರಲಿದ್ದು, ಪ್ರತಿಯೊಂದು ಪ್ಲಾಟ್ ಫಾರ್ಮ್ ಗಳಲ್ಲಿ ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಸ್ಟೇಶನ್ ಕಟ್ಟಡಕ್ಕೆ ಗ್ರಾನೈಟ್ ನೆಲಹಾಸು. ಇತರ ಭಾಗಕ್ಕೆ ಕಾಂಕ್ರೀಟ್. ಮತ್ತು ಟೈಲ್ಸ್ ಅಳವಡಿಕೆ., ಪ್ಲಾಟ್ ಫಾರ್ಮ್ ಉದ್ದಕ್ಕೂ ಶೆಲ್ಟರ್ ನಿರ್ಮಾಣವಾಗಬೇಕಿದೆ. ಇವೆಲ್ಲವೂ ಈಗ ಅಪೂರ್ಣದ ಹಂತದಲ್ಲಿದೆ.
ಫೂಟ್ ಓವರ್ ಸೇತುವೆ ಬದಲಾಗೋಲ್ಲ:
ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ,ಪಾರ್ಕಿಂಗ್ ಜಾಗ. ಆಟೊಗಳಿಗೆ ಪ್ರತ್ಯೇಕ ಜಾಗದ ಕೆಲಸ ಈಗ ಭರದಿಂದ ಸಾಗಿದೆ. ನಿಲ್ದಾಣದ ಸುತ್ತಮುತ್ತಲೂ ಇಂಟರ್ ಲಾಕ್ ನೆಲಹಾಸು ಮೂಲಕ ಸೌಂದರ್ಯವೃದ್ದಿಯಾಗುತ್ತಿದೆ. ಪ್ಲಾಟ್ ಫಾರ್ಮ್ ನಿಂದ ಮತ್ತೊಂದು ಪ್ಲಾಟ್ ಫಾರ್ಮ್ ಗೆ ತೆರಳಲು ಒಂದು ಲಿಫ್ಟ್ ಜೊತೆ ೧೨ ಮೀಟರ್ ಅಗಲದ ಫೂಟ್ ಓವರ್ ಸೇತುವೆ ನಿರ್ಮಾಣವಾಗುವುದು ಯೋಜನೆಯಲ್ಲಿದೆ. ಆದರೆ ಈಗಾಗಲೇ ಇರುವ ಫೂಟ್ ಓವರ್ ಸೇತುವೆಯನ್ನೇ ಉಳಿಸಿಕೊಳ್ಳುವುದಾಗಿ ಇಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್ ಓರ್ವರು ತಿಳಿಸಿದರು.
ಏನೇನು ಆಗಲು ಬಾಕಿ ಇದೆ?
ಇಡೀ ರೈಲ್ವೆ ನಿಲ್ದಾಣಕ್ಕೆ ಸಿಸಿಟಿವಿ ಅಳವಡಿಕೆ, ವೈಫೈ ಸೌಲಭ್ಯ ಒದಗಿಸುವುದು ಯೋಜನೆಯಲ್ಲಿದೆ. ಎಲ್.ಇ.ಡಿ. ಡಿಸ್ಲ ಪ್ಲೇ ಮೂಲಕ ರೈಲುಗಳು ಬಂದು, ಹೋಗುವ ಕುರಿತ ಮಾಹಿತಿ, ಕೋಚ್ ಎಲ್ಲಿ ನಿಲ್ಲುತ್ತದೆ ಎಂಬ ಕುರಿತು ಡಿಸ ಪ್ಲೇ ಬೋರ್ಡ್ ಅಳವಡಿಕೆ ಇರಲಿದೆ ಸ್ಟೇಶನ್ ನ ಮುಖದ್ವಾರವನ್ನು ಅಂದಗೊಳಿಸುವುದು ಈ ಅಭಿವೃದ್ಧಿಯ ಪಟ್ಟಿಯಲ್ಲಿವೆ. ಈಗಾಗಲೇ ರೈಲ್ವೆ ನಿಲ್ದಾಣದ ವಿದ್ಯುದೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ವಿದ್ಯುತ್ ರೈಲು ಓಡಾಟ ಆರಂಭಗೊಂಡರೆ, ಈ ರೈಲ್ವೆ ನಿಲ್ದಾಣದಲ್ಲಿ ಪೂರಕವಾದ ವ್ಯವಸ್ಥೆಗಳು ದೊರಕುತ್ತವೆ.
ಕಾಮಗಾರಿ ಗುಣಮಟ್ಟ ಹೇಗಿರಬಹುದು?
ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾರ್ಯ ಡಿಸೆಂಬರ್ ವರೆಗೆ ಪ್ಯಾಸೆಂಜರ್ ರೈಲಿನಂತಿತ್ತು. ಈಗ ಸೂಪರ್ ಫಾಸ್ಟ್ ರೈಲಿನಂತಾಗಿದೆ. ಇದಕ್ಕೆ ಕಾರಣ, ಉದ್ಘಾಟನೆಯ ತಿಂಗಳು ನಿಗದಿಯಾಗಿರುವುದು. ಆದರೆ ಕಾಮಗಾರಿ ದಿಢೀರನೆ ಇಷ್ಟೊಂದು ಕ್ಷಿಪ್ರಗತಿಯಲ್ಲಿ ನಡೆಯುವ ವೇಳೆ ಎಲ್ಲವನ್ನೂ ಮುಗಿಸಬೇಕಾದರೆ, ಗುಣಮಟ್ಟವನ್ನು ಖಾತ್ರಿಯಾಗಿಟ್ಟುಕೊಳ್ಳುತ್ತಾರೆಯೇ ಎಂಬ ಅನುಮಾನ ಸ್ಥಳೀಯರಿಗಿದೆ. ಈ ಕುರಿತು ರೈಲ್ವೆ ಕೆಲಸ ಮಾಡುತ್ತಿರುವ ಸಿವಿಲ್ ಇಂಜಿನಿಯರುಗಳನ್ನು ಸಂಪರ್ಕಿಸಿದಾಗ ನಾವು ಮಾಡುವ ಕೆಲಸದ ಕುರಿತು ಕಣ್ಗಾವಲು ಏಜನ್ಸಿ ಗಮನಿಸುತ್ತದೆ ಎಂದಿದ್ದಾರೆ.
Be the first to comment on "ಬಂಟ್ವಾಳ ರೈಲ್ವೆ ಸ್ಟೇಶನ್ ಅಭಿವೃದ್ಧಿಗೆ ಎಕ್ಸ್ ಪ್ರೆಸ್ ವೇಗ!! —- ದಿಢೀರನೆ ಚುರುಕಾದ ಕಾಮಗಾರಿ"