ಬಂಟ್ವಾಳ: ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ಬಿಮೂಡ, ಅಜ್ಜಿಬೆಟ್ಟು, ಬಿ ಸಿ ರೋಡ್, ಬಂಟ್ವಾಳ ತಾಲೂಕು ಇಲ್ಲಿ ದಿವ್ಯಾಂಗತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವು ಜ.22ರಂದು ಜರಗಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಿಕಾಸಂ ಸೇವಾ ಫೌಂಡೇಶನ್ ನ ಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಣೇಶ್ ಭಟ್ ವಾರಣಾಸಿ ಮಾತನಾಡಿ ” ಜನರನ್ನು ಅವರ ಬಣ್ಣ, ಜಾತಿ, ಆರ್ಥಿಕತೆ, ವಿದ್ಯಾರ್ಹತೆ, ಲಿಂಗ ಮೊದಲಾದವುಗಳ ಆಧಾರದಲ್ಲಿ ತಾರತಮ್ಯ ಮಾಡುವುದು ಎಷ್ಟು ದೊಡ್ಡ ತಪ್ಪೋ , ಅದೇ ರೀತಿ ಜನರನ್ನು ಅವರ ನ್ಯೂನತೆಯ ಆಧಾರದಲ್ಲಿ ತಾತ್ಸಾರ ಮಾಡುವುದು ಅಷ್ಟೇ ದೊಡ್ಡ ತಪ್ಪಾಗುತ್ತದೆ. ಮಕ್ಕಳು ದಿವ್ಯಾಂಗರ ಬಗ್ಗೆ ಧನಾತ್ಮಕ ಅಭಿಪ್ರಾಯವನ್ನು ಬೆಳೆಸಿಕೊಂಡು ಅವರಿಗೆ ಸಹಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು” ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಸಕ್ಷಮ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾದ ರಾಜಶೇಖರ ಕಾಕುಂಜೆ ಪರ್ವತಾರೋಹಣ ಸಾಧಕಿ ಅರುಣಿಮಾ ಸಿನ್ಹಾ, ವಿಜ್ಞಾನಿ ಥಾಮಸ್ ಎಡಿಸನ್ ಮೊದಲಾದ ದಿವ್ಯಾಂಗ ವ್ಯಕ್ತಿಗಳು ತಮ್ಮ ಊನತೆಯನ್ನು ಮೀರಿ ಹೇಗೆ ಸಾಧಕರಾಗಿ ಬೆಳೆದರು ಎಂಬುದನ್ನು ಉದಾಹರಣೆ ಸಹಿತವಾಗಿ ವಿವರಿಸಿ, ವೈಕಲ್ಯವು ಸಾಧನೆಗೆ ಬಾಧಕವಾಗದು ಎಂದು ತಿಳಿಸಿದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಹರೀಶ್ ಮಾಂಬಾಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ವಿಶೇಷ ಸಂಪನ್ಮೂಲ ಅಧಿಕಾರಿ ಸುರೇಖಾ , ಮಂಗಳೂರು ವಿಶ್ವವಿದ್ಯಾನಿಯದ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಅಧ್ಯಾಪಕಿ ಡಾ ಉಷಾರಾಣಿ, ಸರಕಾರೀ ಪ್ರಥಮ ದರ್ಜೆ ವಿಟ್ಲ, ಇಲ್ಲಿಯ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಅಧ್ಯಾಪಕ ಪ್ರಸನ್ನ ಕುಮಾರ್ ಮಕ್ಕಳನ್ನುದ್ದೇಶಿಸಿ ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಕೆ. ಲಕ್ಷ್ಮೀ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.ಈ ಕಾರ್ಯಕ್ರಮವನ್ನು ವಿಕಾಸಂ ಸೇವಾ ಫೌಂಡೇಶನ್ ನಲ್ಲ್ಲಿ ತರಬೇತಿಗೆಂದು ನಿಯುಕ್ತಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಹಾಗೂ ಸರಕಾರೀ ಪ್ರಥಮ ದರ್ಜೆ ಕಾಲೇಜು ವಿಟ್ಲ ಇಲ್ಲಿನ ಎಂ ಎಸ್ ಡಬ್ಯ್ಯು ವಿದ್ಯಾರ್ಥಿಗಳಾದ ಮಲ್ಲಿಕಾ, ಮಾನಸ, ನಿಶ್ಮಿತಾ, ಶರಣ್ ರಾಜ್, ಶರ್ಮಿಲ್ ಕಾರ್ಯಕ್ರಮ ನಡೆಸಿಕೊಟ್ಟರು. ಸಹಶಿಕ್ಷಕಿ ತಾಹಿರಾ ವಂದಿಸಿದರು.
Be the first to comment on "ದಿವ್ಯಾಂಗತೆ ಕುರಿತು ಬಿ.ಮೂಡ ಸರಕಾರಿ ಶಾಲಾ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ"